ಸಾಹಸ ಮೆರೆದ ಮೂಡಿಗೆರೆಯ 'ನಮ್ಮುಡುಗ್ರು' ವಾಟ್ಸಾಪ್‌ ಗ್ರೂಪ್‌!

By Web DeskFirst Published Aug 14, 2019, 9:47 AM IST
Highlights

ಸಾಹಸ ಮೆರೆದ ಮೂಡಿಗೆರೆಯ ನಮ್ಮುಡುಗ್ರು ವಾಟ್ಸಾಪ್‌ ಗ್ರೂಪ್‌| ಸರ್ಕಾರ, ಅಧಿಕಾರಿಗಳು ಸಂತ್ರಸ್ತರ ನೆರವಿಗೆ ಬರುವ ಮುನ್ನವೇ ಕಾರ್ಯಾಚರಣೆ| ಮೊಬೈಲ್‌ ವಾಟ್ಸಾಪ್‌ ಗ್ರೂಪನ್ನೇ ವಾಕಿಟಾಕಿಯಂತೆ ಬಳಸಿ ಸಮಸ್ಯೆಗಳ ಬಗ್ಗೆ ಧ್ವನಿ ಸಂದೇಶ| ಜನರೇಟರ್‌ಗಳ ಬಳಸಿ ಮೊಬೈಲ್‌ ಟವರ್‌ಗಳ ಚಾಲೂ ಮಾಡಿ ಕಾರ್ಯಾಚರಣೆ ಸಾಹಸ| ಬಿಎಸ್ಸೆನ್ನೆಲ್‌ ಟವರ್‌ಗಳು ಮಾತ್ರ ಗುಡ್ಡಗಾಡು ಪ್ರದೇಶಗಳಲ್ಲಿ ಉಪಯೋಗಕ್ಕೆ ಬರಲೇ ಇಲ್ಲ

ಮೂಡಿಗೆರೆ[ಆ.14]: ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಮಹಾಮಳೆಯ ಮೇಘಸ್ಫೋಟಕ್ಕೆ ಭೂ ಕುಸಿತ ಉಂಟಾಗಿ ಆಸ್ತಿಪಾಸ್ತಿ ಕಳೆದುಕೊಂಡು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಲವು ಗ್ರಾಮಗಳಲ್ಲಿ ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ.

ಬಾಳೂರು ಮತ್ತು ಕಳಸ ಹೋಬಳಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಗುಡ್ಡ ಕುಸಿತವಾಗಿದ್ದು, ಎಲ್ಲ ಗ್ರಾಮಗಳೂ ಸಂಪರ್ಕವನ್ನೇ ಕಳೆದುಕೊಂಡಿದ್ದವು. ಇದರಲ್ಲಿ ಮುಖ್ಯವಾಗಿ ದುರ್ಗದಹಳ್ಳಿ, ಮಧುಗುಂಡಿ, ಮಲೆಮನೆ, ಜಾವಳಿ, ಸಂಪ್ಲಿ, ಕೂವೆ ಗಬ್ಗಲ್‌, ಬಾಳೂರು, ಹಿರೇಬೈಲು, ಕಳಸ, ಹೊರನಾಡು, ಬಲಿಗೆ ಗ್ರಾಮಗಳು ಸಂಪೂರ್ಣ ಮಳೆ ಹೊಡೆತಕ್ಕೆ ಸಿಕ್ಕಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಗುಡ್ಡ ಕುಸಿತದಿಂದ ನಲುಗಿಹೋಗಿವೆ.

ಕಳೆದ ಶುಕ್ರವಾರದವರೆಗೂ ಹೆಚ್ಚೇ ಮಳೆಯಾಗುತ್ತಿತ್ತು. ಆದರೆ ಶುಕ್ರವಾರ ಮಧ್ಯಾಹ್ನದಿಂದ ಸಂಜೆವರೆಗೂ ಸುರಿದ ಮೇಘಸ್ಫೋಟದ ಮಳೆಯಿಂದ ಹರಿದ ನೀರಿಗೆ ಗುಡ್ಡಗಳೇ ಕೊಚ್ಚಿ ಬಂದು ಹಳ್ಳಿಗಳನ್ನೇ ನಾಶ ಮಾಡಿದೆ. ಸ್ಥಳೀಯರು ಹೇಳುವಂತೆ ಶುಕ್ರವಾರ ಮಧ್ಯಾಹ್ನದಿಂದ ಸಂಜೆವರೆಗೆ ಮಳೆ ಸುರಿದಾಗ ಜೋರಾದ ಸ್ಫೋಟದಂತಹ ಶಬ್ದ ಕೇಳಿ ಬಂದಿದೆ, ಶಬ್ದದ ನಂತರ ಗುಡ್ಡಗಳು ಏಕಾಏಕಿ ಕುಸಿದಿವೆ. ಇವೆಲ್ಲವೂ ಕೆಲವೇ ಗಂಟಗಳಲ್ಲಿ ನಡೆದುಹೋಗಿವೆ ಎನ್ನುತ್ತಾರೆ.

ಇಂತಹ ತುರ್ತು ಪರಿಸ್ಥಿತಿಯಲ್ಲಿ ಜನರ ಕಷ್ಟಕ್ಕೆ ಧಾವಿಸಬೇಕಾದದ್ದು ಸರ್ಕಾರ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಅಧಿಕಾರಿಗಳು. ಆದರೆ ಅವರೆಲ್ಲರೂ ಬರುವ ಮೊದಲೇ ಪರಿಹಾರ ಕಾರ್ಯಕ್ಕಿಳಿದದ್ದು ಮೂಡಿಗೆರೆಯ ನಮ್ಮುಡುಗ್ರು ವಾಟ್ಸಾಪ್‌ ಗ್ರೂಪಿನ ಸದಸ್ಯರು. ನಮ್ಮುಡುಗ್ರು ಗ್ರೂಪಿನ ಸದಸ್ಯರ ಕಾರ್ಯಾಚರಣೆಯೇ ಒಂದು ರೋಚಕ. ಮೊಬೈಲ್‌ ವಾಟ್ಸಾಪ್‌ ಗ್ರೂಪನ್ನೇ ವಾಕಿಟಾಕಿಯಂತೆ ಬಳಸಿಕೊಂಡು ಧ್ವನಿ ಸಂದೇಶಗಳನ್ನು ಕಳಿಸುವ ಮೂಲಕ ಎಲ್ಲೆಲ್ಲಿ ಸಮಸ್ಯೆಗಳು ಆಗಿವೆ, ಎಲ್ಲಿಗೆ ಎಂತಹ ಪರಿಹಾರ ಸಾಮಗ್ರಿ ಕಳುಹಿಸಬೇಕು, ಎಲ್ಲಿ ರಸ್ತೆಗೆ ಅಡ್ಡಲಾಗಿ ಗುಡ್ಡ ಕುಸಿದಿದೆ, ಜೆಸಿಬಿಗಳು ಎಲ್ಲಿಗೆ ಹೋಗಬೇಕು, ಮನೆ ಜಮೀನು ಕಳೆದುಕೊಂಡು ನಿರಾಶ್ರಿತರು ಎಲ್ಲೆಲ್ಲಿ ಇದ್ದಾರೆ, ಅವರನ್ನು ಹೇಗೆ ಕರೆತರಬಹುದು ಎಂಬಿತ್ಯಾದಿ ಧ್ವನಿ ಸಂದೇಶಗಳನ್ನು ಕಳಿಹಿಸುವ ಮೂಲಕ ವಾಕಿಟಾಕಿಯಂತೆ ವಾಟ್ಸಾಪ್ ಅನ್ನು ಬಳಸಿಕೊಂಡಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ವಿದ್ಯುತ್‌ ಇಲ್ಲದಿದ್ದರೂ ಜನರೇಟರ್‌ಗಳನ್ನು ಬಳಸಿ ಮೊಬೈಲ್‌ ಟವರ್‌ಗಳನ್ನು ಚಾಲೂ ಮಾಡಿಕೊಂಡು ಕಾರ್ಯಾಚರಣೆ ಮಾಡಿದ್ದಾರೆ. ಖಾಸಗಿ ಕಂಪೆನಿಯ ನೆಟ್‌ವರ್ಕ್ನವರು ಇದಕ್ಕೆಲ್ಲಾ ಸಹಕರಿಸಿದ್ದಾರೆ. ಆದರೆ ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ ಟವರ್‌ಗಳು ಮಾತ್ರ ಗುಡ್ಡಗಾಡು ಪ್ರದೇಶಗಳಲ್ಲಿ ಉಪಯೋಗಕ್ಕೆ ಬಂದಿಲ್ಲ.

ಜಾವಳಿಯ ಗ್ರಾಮದ ಪರೀಕ್ಷಿತ್‌ ಪತ್ರಿಕೆಯೊಂದಿಗೆ ಮಾತನಾಡಿ, 15 ದಿನಗಳ ಹಿಂದೆಯೇ ಬಿಎಸ್ಸೆನ್ನೆಲ್‌ ನೆಟ್‌ವರ್ಕ್ ಇರಲಿಲ್ಲ. ಎಷ್ಟೇ ಕೇಳಿಕೊಂಡರೂ ಸರಿಪಡಿಸಿರಲಿಲ್ಲ. ಈಗ ಇಂತಹ ಅನಾಹುತ ಸಂಭವಿಸಿದ ಸಂದರ್ಭದಲ್ಲೂ ಜನರೇಟರ್‌ ಮೂಲಕ ಟವರ್‌ ಚಾಲನೆ ಮಾಡುವುದು ಬಿಟ್ಟು ಸುಮ್ಮನೆ ಕುಳಿತಿದ್ದಾರೆ ಎಂದು ದೂರಿದ್ದಾರೆ.

click me!