ಭೀಕರ ಪ್ರವಾಹದಿಂದ ಭಾಗಶಃ ಕುಸಿದ ಮನೆಗಳನ್ನು ಸಂಪೂರ್ಣವಾಗಿ ಕೆಡವದೇ, ಹಾನಿಗೀಡಾದ ಭಾಗವನ್ನು ಮಾತ್ರ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಪರಿಹಾರ ನೀಡಲು ಸಮ್ಮತಿ ನೀಡಿದೆ.
ಬೆಳಗಾವಿ [ಜ.23]: ಕಳೆದ ನಾಲ್ಕಾರು ತಿಂಗಳುಗಳ ಹಿಂದೆ ಸುರಿದ ಧಾರಾಕಾರ ಮಳೆ ಹಾಗೂ ಎದುರಾದ ಭೀಕರ ಪ್ರವಾಹದಿಂದ ಭಾಗಶಃ ಕುಸಿದ ಮನೆಗಳನ್ನು ಸಂಪೂರ್ಣವಾಗಿ ಕೆಡವದೇ, ಹಾನಿಗೀಡಾದ ಭಾಗವನ್ನು ಮಾತ್ರ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಸಮ್ಮತಿ ನೀಡಿದೆ.
ಪ್ರವಾಹದ ಸಂದರ್ಭದಲ್ಲಿ ಹಾನಿಗೀಡಾದ ಮನೆಗಳನ್ನು ಎ, ಬಿ, ಸಿ ಎಂದು 3 ವರ್ಗಗಳನ್ನಾಗಿ ಮಾಡಿದ್ದ ಸರ್ಕಾರ ನಂತರದ ದಿನಗಳಲ್ಲಿ ಸಿ ವರ್ಗದ ಮನೆಗಳನ್ನು ಬಿ ವರ್ಗಕ್ಕೆ ಸೇರಿಸಲು ತೀರ್ಮಾನಿಸಿತ್ತು. ಬಿ ವರ್ಗದ ಪಟ್ಟಿಯಲ್ಲಿ ಸೇರ್ಪಡೆಯಾದ ಮನೆಗಳಿಗೂ 5 ಲಕ್ಷ ರು. ಪರಿಹಾರ ನೀಡಲು ಮುಂದಾಗಿತ್ತು. ಆದರೆ, ಭಾಗಶಃ ಹಾನಿಗೀಡಾದ ಮನೆಯನ್ನು ಸಂಪೂರ್ಣವಾಗಿ ಕೆಡವಿ, ಹೊಸದಾಗಿ ಮನೆ ನಿರ್ಮಾಣ ಮಾಡಿದ್ದಲ್ಲಿ ಮಾತ್ರ ಹಂತ, ಹಂತವಾಗಿ ಅನುದಾನ ನೀಡಲಾಗುವುದು ಎಂದು ಆದೇಶಿಸಿದ್ದ ಸರ್ಕಾರ, ಇದೀಗ ಆದೇಶದಲ್ಲಿ ಮಾರ್ಪಾಡು ಮಾಡುವ ಮೂಲಕ ಸಂತ್ರಸ್ತರ ಸಂಕಷ್ಟಕ್ಕೆ ನೆರವಾಗಲು ಮುಂದಾಗಿದೆ.
undefined
ಎರಡು ಹಂತದಲ್ಲಿ ಅನುದಾನ:
ಮನೆ ಭಾಗಶಃ ಹಾನಿಗೊಳಗಾದ ಫೋಟೋ ಜಿಪಿಎಸ್ ಟ್ಯಾಗಿಂಗ್ ಮಾಡಬೇಕು. ದುರಸ್ತಿ ಕಾರ್ಯಕ್ಕೆ ಮೊದಲ ಹಂತದ ಅನುದಾನ ನೀಡಲಿದೆ. ದುರಸ್ತಿ ಮಾಡಿದ ನಂತರ ಮತ್ತೇ ಫೋಟೋ ತೆಗೆದು ಜಿಪಿಎಸ್ ಮಾಡಿದಲ್ಲಿ ಎರಡನೇ ಹಂತದ ಅನುದಾನ ನೀಡಲಿದೆ. ಕೇವಲ ದುರಸ್ತಿ ಕಾರ್ಯ ಕೈಗೊಳ್ಳುವ ಸಂತ್ರಸ್ತರಿಗೆ ಈ ಮೊದಲು ಘೋಷಿಸಿದ್ದ 5 ಲಕ್ಷ ರು. ನೀಡುವ ಪರಿಹಾರದ ಬದಲಾಗಿ ಹೊಸ ನಿಯಮದಂತೆ 3 ಲಕ್ಷಕ್ಕೆ ಇಳಿಕೆ ಮಾಡಿದೆ. 2 ಹಂತದಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ವಸತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ-2 ಸದಾನಂದ ಎನ್.ಪಾವಸ್ಕರ್ 2020 ಜ.17ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಪುನರ್ ನಿರ್ಮಾಣ ಕಷ್ಟ: ಸರ್ಕಾರ ನೀಡುವ 5 ಲಕ್ಷ ರು. ಹೊಸ ಮನೆ ನಿರ್ಮಾಣಕ್ಕೆ ಸಾಲುವುದಿಲ್ಲ. ಬಡ ಮತ್ತು ಮಧ್ಯಮ ವರ್ಗದವರಿಗೆ ಕಷ್ಟವಾಗುತ್ತಿದೆ. ಆದ್ದರಿಂದ ಭಾಗಶಃ ಹಾನಿಗೊಳಗಾದ ಭಾಗವನ್ನು ಮಾತ್ರ ಪುನರ್ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಕಲ್ಪಿಸುವಂತೆ ಕೆಲ ಜಿಲ್ಲಾಧಿಕಾರಿಗಳು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಪತ್ರ ಬರೆದಿದ್ದರು.