
ಬೆಂಗಳೂರು (ಏ.13): ರಾಜ್ಯದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಕೋಟಾ ಎರಡೂ ಮಾದರಿ ಸೀಟುಗಳ ಶುಲ್ಕವನ್ನು ಶೇ.7.5ರಷ್ಟು ಹೆಚ್ಚಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದ 2026-26ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಪ್ರವೇಶ ಮತ್ತಷ್ಟು ದುಬಾರಿಯಾಗಲಿದೆ. ಆದರೆ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಸೀಟುಗಳ ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡದಿರಲು ತೀರ್ಮಾನಿಸಲಾಗಿದೆ.
ಸಿಇಟಿ ಮೂಲಕ ಭರ್ತಿ ಮಾಡುವ ಖಾಸಗಿ ಕಾಲೇಜುಗಳಲ್ಲಿನ ಶೇ.40ರಷ್ಟು ಸರ್ಕಾರಿ ಕೋಟಾದ ಸೀಟುಗಳ ಶುಲ್ಕ ಮತ್ತು ಕಾಮೆಡ್-ಕೆ ಮೂಲಕ ಭರ್ತಿ ಮಾಡುವ ಆಡಳಿತ ಮಂಡಳಿ ಕೋಟಾ ಸೀಟುಗಳ ಶುಲ್ಕ ಕಳೆದ ಸಾಲಿನಂತೆ 2026-27ನೇ ಸಾಲಿನಲ್ಲೂ ಶೇ.7.5ರಷ್ಟು ಹೆಚ್ಚಳವಾಗಲಿದೆ.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರತಿನಿಧಿಗಳ ಸಭೆಯಲ್ಲಿ ಶುಲ್ಕ ಹೆಚ್ಚಳಕ್ಕೆ ತೀರ್ಮಾನಿಸಲಾಗಿದೆ. ಅಸಲಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶೇ.10ರಿಂದ 15ರಷ್ಟು ಶುಲ್ಕ ಹೆಚ್ಚಳಕ್ಕೆ ಪ್ರಸ್ತಾವ ಸಲ್ಲಿಸಿದ್ದವು. ಅಷ್ಟು ಶುಲ್ಕ ಹೆಚ್ಚಳಕ್ಕೆ ಒಪ್ಪದ ಸಚಿವರು, ಸುದೀರ್ಘ ಚರ್ಚೆ ನಂತರ ಶೇ.7.5ರಷ್ಟು ಶುಲ್ಕ ಹೆಚ್ಚಿಸಲು ಒಪ್ಪಿಗೆ ನೀಡಿದ್ದಾರೆ. ಆದರೆ, ಸರ್ಕಾರಿ ಕಾಲೇಜುಗಳಲ್ಲಿನ ಸೀಟುಗಳ ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡದಿರಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಇದರಿಂದ ಖಾಸಗಿ ಕಾಲೇಜುಗಳ ಸಿಟಿಇ ಸೀಟು ಹೆಚ್ಚಳ ನಿರ್ಧಾರದಿಂದ ಪ್ರಸ್ತುತ ಟೈಪ್-1 ಕಾಲೇಜುಗಳಲ್ಲಿ 81,800 ರು. ಇದ್ದ ಶುಲ್ಕ 87,935 ರು.ಗಳಿಗೆ ಹೆಚ್ಚಳವಾಗಲಿದೆ. ಅದೇ ರೀತಿ ಟೈಪ್-2 ಕಾಲೇಜುಗಳಲ್ಲಿ 91,000 ರು. ಇದ್ದ ಪ್ರತಿ ಸೀಟಿನ ಶುಲ್ಕ 97,825 ರು.ಗೆ ಏರಿಕೆಯಾಗಲಿದೆ. ಅದೇ ರೀತಿ, ಟೈಪ್ 1 ಕಾಲೇಜುಗಳಲ್ಲಿ 2,00,000 ಇದ್ದ ಆಡಳಿತ ಮಂಡಳಿ ಕೋಟಾ ಸೀಟುಗಳ ಶುಲ್ಕ 2,15,000 ರು.ಗಳಿಗೆ, ಟೈಪ್ 2 ಕಾಲೇಜುಗಳಲ್ಲಿ 2,81,100 ರು.ಇದ್ದ ಶುಲ್ಕ 3,02,182 ರು.ಗಳಿಗೆ ಏರಿಕೆಯಾಗಲಿದೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಪ್ರತೀ ವರ್ಷದಂತೆ ವಿವಿಗಳ ಶುಲ್ಕ 10,610 ರು. ಪಾವತಿಸಬೇಕು. ಕಾಲೇಜುಗಳಿಗೆ ಇತರೆ ಶುಲ್ಕಗಳ ಹೆಸರಲ್ಲಿ 20 ಸಾವಿರ ರು. ವರೆಗೆ ವಸೂಲಿ ಮಾಡಲು ಅವಕಾಶ ಇರಲಿದೆ.