ಚಿಕ್ಕಪ್ಪನಹಳ್ಳಿ ಷಣ್ಮುಖ
ಚಿತ್ರದುರ್ಗ (ಫೆ.18) : ಅಪರಿಮಿತ ಸುಳ್ಳುಗಳ ಹೇಳುವ ಚಾಲಾಕಿತನಗಳಿಗೆ ಮಧ್ಯಕರ್ನಾಟಕದ ಹಳ್ಳಿಗಳಲ್ಲಿ ಮಾತಿನಲ್ಲಿ ಮನೆ ಕಟ್ತಾನೆæ, ಚಿಟಿಕಿ ಹೊಡೆದು ಚಪ್ಪರ ಹಾಕ್ತಾನೆ ಎಂಬ ಮಾತುಗಳು ಉದಾಹರಣೆ ಪಡೆದುಕೊಳ್ಳುತ್ತವೆ. ಚಿತ್ರದುರ್ಗದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭದ ವಿಚಾರ ಇಂತಹದ್ದೊಂದು, ಚಿಟಕಿ ಚಪ್ಪರ ನೆನಪು ಮಾಡುತ್ತದೆ. ಪ್ರತಿ ಸಾರಿ ಬಜೆಟ್‌ನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭದ ಪ್ರಸ್ತಾಪ ನಮೂದಾಗುತ್ತಲೇ ಬಂದಿದ್ದು ಯಾವಾಗ ಎಂಬುದಕ್ಕೆ ನಿಖರತೆಗಳು ಇಲ್ಲ.
ಕಳೆದ ಸಾಲಿನ ಬಜೆಟ್(Budget)ನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು(Govt Medical collage chitradurga) ಎಂಬ ಒಂದು ಸಾಲಿನ ಸಂಗತಿಯ ಚಿತ್ರದುರ್ಗಕ್ಕೆ ಕೊಡುಗೆ ಎಂಬಂತೆ ಬಿಂಬಿಸಿ ಆಸೆ ಮೂಡಿಸಲಾಗಿತ್ತು. ಮತ್ತೊಂದು ಬಜೆಟ್ ಬಂದರೂ ಏನೂ ಆಗಿರಲಿಲ್ಲ. ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಮಂಡಿಸಿದ ಬಜೆಟ್‌ನಲ್ಲಿ 500 ಕೋಟಿ ರುಪಾಯಿ ವೆಚ್ಚದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಲಾಗುವುದು ಎಂದು ಹೇಳಲಾಗಿದೆ. ಮೆಡಿಕಲ್ ಕಾಲೇಜು ಪ್ರಸ್ತಾಪ ಹಳೆಯದಾದರೂ ಮೊತ್ತ ನಮೂದು ಮಾಡಿರುವುದು ಮಾತ್ರ ಹೊಸ ಸಂಗತಿಯಾಗಿ ಗೋಚರಿಸಿದೆ.
Karnataka Budget 2023: ಮಧ್ಯ ಕರ್ನಾಟಕ ಜಿಲ್ಲೆ ಮನ ತಣಿಸದ ಬಜೆಟ್
ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿದ್ದರೆ ಚಿತ್ರದುರ್ಗದಲ್ಲಿ ಎಂದೋ ಮೆಡಿಕಲ್ ಕಾಲೇಜು ಆರಂಭವಾಗಿ ಇಷ್ಟೊತ್ತಿಗೆ ಒಂದು ಬ್ಯಾಚ್ ಹೊರ ಹೋಗುತ್ತಿತ್ತು. ಚಿತ್ರದುರ್ಗದ ಜೊತೆ ಘೋಷಣೆಯಾಗಿದ್ದ ಕೊಪ್ಪಳದಲ್ಲಿ ಮೆಡಿಕಲ್ ಕಾಲೇಜು ಆರಂಭವಾಗಿ ಮೊದಲ ಬ್ಯಾಚ್ ಹೋಗಲು ಅಣಿಯಾಗಿದೆ. ವಿಚಿತ್ರದವೆಂದರೆ ಚಿತ್ರದುರ್ಗದ ಸರ್ಕಾರಿ ಮೆಡಿಕಲ್ ಕಾಲೇಜು ಬಜೆಟ್ ಹಾಳೆಯಲ್ಲಿಯೇ ಉಳಿದಿದೆ.
ಮೆಡಿಕಲ್ ಕಾಲೇಜು ಆರಂಭಕ್ಕೆ ಅಗತ್ಯವಾಗಿ ಬೇಕಾದ ಪೂರ್ವ ಸಿದ್ಧತೆಗಳ ಕೈಗೊಳ್ಳಲಾಗಿದೆ. ಚಿಮ್ಸ್( ಚಿತ್ರದುರ್ಗ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ) ಹೆಸರಿನಲ್ಲಿ ನೋಂದಣಿಯೂ ಆಗಿದೆ. ಡೀನ್ ನೇಮಕ ಮಾಡಿ ಸಿಬ್ಬಂದಿ ನೇಮಕಾತಿ ಸೇರಿದಂತೆ ಇನ್ನಿತರೆ ಚಟುವಟಿಕೆ ಆರಂಭಿಸಬೇಕಿತ್ತು. ಅದು ಸಾಧ್ಯವಾಗದೇ ಹೋಗಿದೆ. ಸರ್ಕಾರ ತಾನು ಕೊಟ್ಟವಚನ ಈಡೇರಿಸುವ ಬದಲು ಗೊಂದಲ ಸೃಷ್ಟಿಸುವ ಕೆಲಸ ಮಾಡಿದೆ.
ಹಾಲಿ ಜಿಲ್ಲಾ ಆಸ್ಪತ್ರೆ ಹಿಂಭಾಗದ ಹದಿನೇಳು ಎಕರೆ ಜಾಗದಲ್ಲಿ ಮೆಡಿಕಲ್ ಕಾಲೇಜು ಕಟ್ಟಡ ಕಟ್ಟುವ ಉದ್ದೇಶ ಹೊಂದಲಾಗಿತ್ತು. ಇದೀಗ ಆ ಪ್ರಸ್ತಾಪ ಕೈ ಬಿಟ್ಟಂತೆ ಕಾಣಿಸುತ್ತಿದೆ. ಕುಂಚಿಗನಹಾಳು ಬಳಿ ಇರುವ ಸರ್ಕಾರಿ ಭೂಮಿಯಲ್ಲಿ ಮೆಡಿಕಲ್ ಕಾಲೇಜು ಕಟ್ಟಡವೆಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿಕೆ ನೀಡಿದ್ದು, ಜಾಗ ಅಂತಿಮಗೊಳಿಸುವ ಪ್ರಯತ್ನಗಳು ನೇಪಥ್ಯಕ್ಕೆ ಸರಿದಿವೆ.
ಭದ್ರಾ ಮೇಲ್ದಂಡೆಗೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ತೋರಿಸಲಾಗಿಲ್ಲ. ಬದಲಾಗಿ ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ 5300 ಕೋಟಿ ರುಪಾಯಿ ನೆರವು ನೀಡಲು ಘೋಷಿಸಿದ ಕ್ರಮವನ್ನು ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿ ಪ್ರಧಾನಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ಕೇಂದ್ರ ಸರ್ಕಾರ ತನ್ನ ಆರುಪಥ ಹೆದ್ದಾರಿ ಯೋಜನೆಯಲ್ಲಿ ಚಿತ್ರದುರ್ಗ, ದಾವಣಗೆರೆ, ಹಾವೇರಿ ಸೇರಿಸಿರುವುದ ಬಸವರಾಜ ಬೊಮ್ಮಾಯಿ ಬಜೆಟ್ ಭಾಷಣದಲ್ಲಿ ನೆನಪಿಸಿಕೊಂಡಿದ್ದಾರೆ. ಅದೇ ರೀತಿ ಚಿತ್ರದುರ್ಗ-ದಾವಣಗೆರೆ-ತುಮಕೂರು ನಡುವಿನ ನೇರ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ನೀಡಿರುವ 220 ಕೋಟಿ ನೆರವನ್ನು ಪ್ರಸ್ತಾಪಿಸಿದ್ದಾರೆ.
ದಾವಣಗೆರೆ: ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲವೆಂದು ಸಾಬೀತುಪಡಿಸಿ: ಎಂ.ಪಿ.ರೇಣುಕಾಚಾರ್ಯ ಸವಾಲ್
ಗಣಿ ಭಾದಿತ ಪರಿಸರ ಪುನಶ್ಚೇತನ ಅಭಿವೃದ್ಧಿ ಯೋಜನೆಯಡಿ 4332 ಕೋಟಿ ರುಪಾಯಿ ಅನುದಾನ ಬಳಕೆ ಮಾಡಿಕೊಂಡು ಬಳ್ಳಾರಿ, ಚಿತ್ರದುರ್ಗ, ವಿಜಯನಗರ, ತುಮಕೂರು ಜಿಲ್ಲೆಗಳಲ್ಲಿ 151 ಕಾಮಗಾರಿಗಳ ಅನುಷ್ಠಾನ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರದುರ್ಗದ ಮೊಳಕಾಲ್ಮುರುವಿನಲ್ಲಿ ಇಂಟಗ್ರೇಟೆಡ್ ಟೌನಶಿಫ್ ನಿರ್ಮಿಸುವ ಪ್ರಸ್ತಾವವನ್ನು ಬಜೆಟ್‌ನಲ್ಲಿ ಮಾಡಿರುವುದು ಬಿಟ್ಟರೆ ಅಂತಹ ಮಹತ್ವದ ಕೊಡುಗೆಗಳನ್ನು ಬಸವರಾಜ ಬೊಮ್ಮಾಯಿ ಬಜೆಟ್ ನಲ್ಲಿ ನೀಡಿಲ್ಲ. ಎಂದಿಂತೆ ಉದಾಸೀನ ಮನೋಭಾವ ಮುಂದವರಿದಿದೆ.