Farm Law : ಮರು ಜಾರಿಗೆ ಬಿಜೆಪಿ ಯತ್ನ

By Kannadaprabha NewsFirst Published Jan 7, 2022, 7:08 AM IST
Highlights
  • ಮರು ಜಾರಿಗೆ ಬಿಜೆಪಿ ಯತ್ನ  -  ರೈತ ಸಂಘ
  •  ರಾಜ್ಯ ಬಿಜೆಪಿ ಸರ್ಕಾರ ಕೃಷಿ ಕಾಯ್ದೆಯನ್ನು ಇನ್ನೂ ಹಿಂಪಡೆದಿಲ್ಲ: ಬಡಗಲಪುರ ನಾಗೇಂದ್ರ

 ಚಿಕ್ಕಬಳ್ಳಾಪುರ (ಜ.07):  ಬಿಜೆಪಿ (bjp)  ಸರ್ಕಾರ ಇರುವ ರಾಜ್ಯಗಳಲ್ಲಿ ವಾಮ ಮಾರ್ಗದಿಂದ ವಿವಾದಿತದ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಆಗಾಗಿಯೆ ಕೇಂದ್ರ 3 ಕೃಷಿ ಕಾಯ್ದೆಗಳನ್ನು  ವಾಪಸ್ಸು ಪಡೆದರೂ ರಾಜ್ಯ ಬಿಜೆಪಿ (BJP) ಸರ್ಕಾರ ಆ ಕಾಯ್ದೆಗಳ ವಾಪಸ್‌ ಪಡೆಯಲು ಮೀನಮೇಷ ಎಣಿಸುತ್ತಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಟೀಕಿಸಿದರು.

ನಗರದ ರೈತ ಸಂಘದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ (Karnataka Govt) ಕೂಡಲೇ ಎಪಿಎಂಸಿ (APMC), ಭೂ ಸ್ವಾಧೀನ ಹಾಗೂ ಜಾನುವಾರು ಹತ್ಯೆ ನಿಷೇಧ ಕಾಯ್ದೆ ವಾಪಸ್ಸು ಪಡೆದಿದ್ದರೆ ಬರುವ ಮಾಚ್‌ರ್‍ನಲ್ಲಿ ನಡೆಯುವ ಅಧಿವೇಶನ ವೇಳೆ ರೈತ ಸಂಘದಿಂದ 1 ಲಕ್ಷ ರೈತರನ್ನು ಸೇರಿಸಿ ಜನತಾ ಪರಿಹಾರ್‌ ಅಧಿವೇಶನ ನಡೆಸಿ ಸರ್ಕಾರದ ಮೇಲೆ ಒತ್ತಡ ತರಲಾಗುವುದೆಂದರು.

ಕೃಷಿ ಕಾಯ್ದೆಗಳ ಮರು ಜಾರಿಗೆ ಯತ್ನ

ಕೇಂದ್ರ ಸರ್ಕಾರವೇ (Govt Of India)  3 ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದ ಮೇಲೆ ರಾಜ್ಯದಲ್ಲಿ ಏಕೆ ವಾಪಸ್‌ ಪಡೆಯಲಿಲ್ಲ ಎಂದು ಪ್ರಶ್ನಿಸಿದ ಅವರು, ಕೇಂದ್ರದಲ್ಲಿ ಕಿಸಾನ್‌ ಮೋರ್ಚಾ ನಡೆಸಿದ ಸಂಯುಕ್ತ ಹೋರಾಟ ವೀಕೇಂದ್ರೀಕರಣಗೊಳ್ಳಬೇಕಿದೆ. ಪ್ರತಿ ರಾಜ್ಯದಲ್ಲಿ ಅತಂಹ ಹೋರಾಟ ಈಗ ತೀವ್ರಗೊಳ್ಳಬೇಕಿದೆ. ರಾಜ್ಯ ಸರ್ಕಾರಗಳು ಹಿಂಬಾಗಿಲಿನಿಂದ ಕೃಷಿ ಕಾಯ್ದೆಗಳನ್ನು ಬೇರೆ ಬೇರೆ ಹೆಸರಿನಲ್ಲಿ ಜಾರಿಗೆ ತರಲು ಹೊರಟಿವೆ. ರಾಜ್ಯದಲ್ಲಿ ಈ ಹಿಂದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಆದೇಶದ ಮೇರೆಗೆ ಯಡಿಯೂರಪ್ಪ ಸರ್ಕಾರದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ತಂದು ಜಾರಿಗೊಳಿಸಲಾಗಿದೆಯೆಂದರು.

ಎಪಿಎಂಸಿ, ಭೂ ಸುಧಾರಣೆ ಹಾಗೂ ಜಾನುವಾರು ಹತ್ಯೆ ನಿಷೇದ ಕಾಯ್ದೆ ವಾಪಸ್ಸು ಪಡೆಯುವಂತೆ ಈಗಾಗಲೇ ಬೆಳಗಾವಿ ಅಧಿವೇಶನ ವೇಳೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆಯೆಂದ ಅವರು, 3 ಕಾಯ್ದೆಗಳನ್ನು ವಾಪಸ್ಸು ಪಡೆಯುವವರೆಗೂ ನಿರಂತರ ಹೋರಾಟ ನಡೆಸಲಾಗುವುದು ಎಂದರು.

ಸಮಗ್ರ ಕೃಷಿ ನೀತಿ ಅಗತ್ಯವಾಗಿದೆ. ದೇಶದಲ್ಲಿ ರೈತರ (Farmers)  ಸಮಸ್ಯೆಗಳಿಗೆ ಪರಿಹಾರ ಕಾಣುತ್ತಿಲ್ಲ. ಬದಲಾಗಿ ಸಮಸ್ಯೆಗಳು ದಿನೇ ದಿನೇ ದ್ವಿಗುಣ ಆಗುತ್ತಿವೆ. ದೆಹಲಿಯಲ್ಲಿ ನಡೆದ ಚಳವಳಿ ಭಾರತದ ಸರ್ವಭೌತ್ವಕ್ಕೆ ಧಕ್ಕೆಯಾಗಿದ್ದಕ್ಕೆ ವಿರುದ್ಧವಾಗಿ ನಡೆದ ಚಳವಳಿ ಅದು. ಕಾರ್ಪೊರೆಟ್‌ ವಲಯದಿಂದ ಕೃಷಿ ಕ್ಷೇತ್ರ ಉಳಿಸಬೇಕಿದೆ. ದೇಶದ 80 ಕೋಟಿ ಜನ ಪಡಿತರ ವ್ಯವಸ್ಥೆ ಮೇಲೆ ನಿಂತಿದ್ದಾರೆ. ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ಆದರೆ ದೇಶದ ಸಾರ್ವಜನಿಕ ಪಡಿತರ ವ್ಯವಸ್ಥೆಗೆ ದಕ್ಕೆ ಆಗಲಿದೆ ಎಂದರು. ಅಂಕಿ, ಅಂಶಗಳ ಪ್ರಕಾರ 63 ರಷ್ಟುಕೃಷಿಯಿಂದಲೇ ಉದ್ಯೋಗ ಸಿಗುತ್ತಿದೆ. ಈ ಕ್ಷೇತ್ರಕ್ಕೆ ದಕ್ಕೆ ತಂದರೆ ಇಡೀ ದೇಶ ನಾಶ ಆಗುತ್ತದೆಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿ ಕಿರಣ್‌ ಪೂರ್ಣಚ್ಚ, ಜಿಲ್ಲಾಧ್ಯಕ್ಷ ಲಕ್ಷ್ಮೇನಾರಾಯಣರೆಡ್ಡಿ, ಮಂಡ್ಯ ರೈತ ಸಂಘದ ಖಜಾಂಚಿ ರವಿಕುಮಾರ್‌, ಮಧುಚಂದನ್‌, ಅರುಣ್‌ ಕುಮಾರ್‌ ಸೇರಿದಂತೆ ಮತ್ತಿತರರು ಇದ್ದರು.

ಪರ್ಯಾಯ ರಾಜಕಾರಣಕ್ಕೆ ಒತ್ತು

ಸ್ವರಾಜ್ ಪಕ್ಷ ರಾಜ್ಯದಲ್ಲಿ ಬೆಳೆಯಲಿಲ್ಲ. ಆದರೆ ಸ್ವರಾಜ್‌ ಇಂಡಿಯಾ ಪಕ್ಷವನ್ನು ಒಳಗೊಂಡಂತೆ ಒಂದು ಹೊಸ ನಡೆ, ನುಡಿ ಇರುವ ಪರ್ಯಾಯ ರಾಜಕಾರಣವನ್ನು ಹುಟ್ಟು ಹಾಕಬೇಕಿದೆ. ಆ ನಿಟ್ಟಿನಲ್ಲಿ ಈ ತಿಂಗಳ 17ಕ್ಕೆ ಬೆಂಗಳೂರಿನಲ್ಲಿ ವಿಶೇಷ ಸಭೆ ಆಯೋಜಿಸಲಾಗಿದೆ. ತೃತೀಯ ರಂಗ ಸ್ಥಾಪನೆ ಬಗ್ಗೆಯು ಚರ್ಚೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಬಂಗಾಳ ಸಿಎಂ ಕೂಡ ನಮ್ಮನ್ನು ಸಂಪರ್ಕಿಸಿದ್ದಾರೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ರೈತ ಸಂಘದ ಪರ್ಯಾಯ ರಾಜಕಾರಣಕ್ಕೆ ಒತ್ತು ಕೊಟ್ಟು 50 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಬಡಗಲಪುರ ನಾಗೇಂದ್ರ ಹೇಳಿದರು.

click me!