ಗ್ರಾಹಕರ ನಂಬಿಕೆಗೆ ಕರ್ನಾಟಕ ಬ್ಯಾಂಕ್‌ ಅರ್ಹ: ಶ್ರೀ

By Kannadaprabha News  |  First Published Mar 29, 2023, 6:45 AM IST

ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಅತ್ಯುತ್ತಮವಾದ ಸ್ಥಾನವನ್ನು ಪಡೆದುಕೊಂಡು ಗ್ರಾಹಕರ ನಂಬಿಕೆಗೆ ಅರ್ಹವಾದ ಬ್ಯಾಂಕ್‌ ಎಂದರೆ ಅದು ಕರ್ನಾಟಕ ಬ್ಯಾಂಕ್‌ ಎಂದು ಹೆಮ್ಮೆಯಿಂದ ಹೇಳಬೇಕಾಗಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮೀಜಿ ನುಡಿದರು.


  ತುಮಕೂರು :  ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಅತ್ಯುತ್ತಮವಾದ ಸ್ಥಾನವನ್ನು ಪಡೆದುಕೊಂಡು ಗ್ರಾಹಕರ ನಂಬಿಕೆಗೆ ಅರ್ಹವಾದ ಬ್ಯಾಂಕ್‌ ಎಂದರೆ ಅದು ಕರ್ನಾಟಕ ಬ್ಯಾಂಕ್‌ ಎಂದು ಹೆಮ್ಮೆಯಿಂದ ಹೇಳಬೇಕಾಗಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮೀಜಿ ನುಡಿದರು.

ನಗರದ 29ನೇ ವಾರ್ಡ್‌ ಮರಳೂರು ಬಡಾವಣೆಯ ಸದಾಶಿವನಗರದಲ್ಲಿ ಕರ್ನಾಟಕ ಬ್ಯಾಂಕಿನ ತುಮಕೂರು ಪ್ರಾದೇಶಿಕ ಕಚೇರಿ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

Latest Videos

undefined

ಬ್ಯಾಂಕಿನ ಅಧ್ಯಕ್ಷ ಪಿ.ಪ್ರದೀಪ್‌ಕುಮಾರ್‌ ಮಾತನಾಡಿ, ಬ್ಯಾಂಕಿನ ಶತಮಾನೋತ್ಸವದ ಈ ಶುಭ ಸಂದರ್ಭದಲ್ಲಿ ಇಂದು ತುಮಕೂರಿನ ಪ್ರಾದೇಶಿಕ ಕಚೇರಿಯ ನೂತನ ಕಟ್ಟಡದ ಉದ್ಘಾಟನೆಯಾಗಿದೆ. ಇದರ ಜೊತೆಗೆ ಇದೇ ಕಟ್ಟಡದಲ್ಲಿ 910ನೇ ಶಾಖೆಯೂ ಲೋಕಾರ್ಪಣೆಗೊಂಡಿದೆ. ಶತಮಾನೋತ್ಸವದ ಸಂದರ್ಭದಲ್ಲಿ 100 ಜನ ಗ್ರಾಹಕರಿಗೆ ವಿಶೇಷವಾಗಿ ಗೌರವಾರ್ಪಣೆ ಮಾಡಲಾಗಿದೆ ಎಂದರು.

ಬ್ಯಾಂಕನ್ನು ಡಿಜಿಟಲ್‌ ಬ್ಯಾಂಕ್‌ ಆಗಿ ಪರಿವರ್ತನೆ ಮಾಡಿ ಕಳೆದ 5 ವರ್ಷಗಳಿಂದ ಡಿಜಿಟಲ್‌ ತಂತ್ರಜ್ಞಾನವನ್ನೂ ಸಹ ಕರ್ನಾಟಕ ಬ್ಯಾಂಕ್‌ ಅಳವಡಿಸಿಕೊಂಡು ಅತ್ಯಂತ ಯಶಸ್ವಿಯಾಗಿ ಗ್ರಾಹಕರ ನೆಚ್ಚಿನ ಬ್ಯಾಂಕ್‌ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

-ಸದಾಶಿವನಗರ ಶಾಖೆ ಮತ್ತು ಮಿನಿ ಇ-ಲಾಬಿ ಉದ್ಘಾಟಿಸಿ ಮಾತನಾಡಿದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್‌ ಮಹಾಬಲೇಶ್ವರ್‌ ಎಂ.ಎಸ್‌., ಬ್ಯಾಂಕಿನ ಈ ಶತಮಾನೋತ್ಸವ ವರ್ಷದಲ್ಲಿ ಹಲವಾರು ಉಪಕ್ರಮಗಳನ್ನು ನಾವು ಹಾಕಿಕೊಂಡಿದ್ದೇವೆ. ಮುಖ್ಯವಾಗಿ ಬ್ಯಾಂಕನ್ನು ಡಿಜಿಟಲ್‌ ಬ್ಯಾಂಕ್‌ ಆಗಿ ಪರಿವರ್ತನೆ ಮಾಡಲಾಗಿದೆ. ಗ್ರಾಹಕ ಕೇಂದ್ರಿತ ಬ್ಯಾಂಕ್‌ ಆಗಿ 2ನೇ ಶತಮಾನದಲ್ಲಿ ಅತ್ಯುತ್ತಮ ಗ್ರಾಹಕ ಸೇವೆ ಹಾಗೂ ಅತ್ಯುತ್ತಮ ಡಿಜಿಟಲ್‌ ಸೌಲಭ್ಯಗಳನ್ನು ಕೊಡುತ್ತಾ ದೇಶದಾದ್ಯಂತ ನಮ್ಮ ಶಾಖಾ ವಿಸ್ತಾರ ಹಾಗೂ ವ್ಯವಹಾರದ ವಿಸ್ತಾರವನ್ನು ಮಾಡಬೇಕೆಂದು ದೃಢಸಂಕಲ್ಪ ಹೊಂದಿದ್ದೇವೆ ಎಂದರು.

ಪ್ರಾದೇಶಿಕ ಕಚೇರಿಯ ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ ಸುಬ್ಬರಾಮು ಎಲ್‌., ಮಾತನಾಡಿ, ತುಮಕೂರಿನಲ್ಲಿ 73 ಕರ್ನಾಟಕ ಬ್ಯಾಂಕ್‌ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಅಭಿವೃದ್ಧಿಗೆ ಹಾಗೂ ಕೃಷಿಗೆ ನಿರಂತರ ಪೋ›ತ್ಸಾಹ ನೀಡುತ್ತಾ ಬಂದಿದೆ. ಪಟ್ಟಣ ಮತ್ತು ಅರೆ ಪಟ್ಟಣಗಳಲ್ಲಿ 42 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ತುಮಕೂರು ಪ್ರಾದೇಶಿಕ ಕಚೇರಿಯ ವಹಿವಾಟು ಸುಮಾರು 2200 ಕೋಟಿ ರು.ಗಳಷ್ಟುಇದ್ದು, ಅದರಲ್ಲಿ 4550 ಕೋಟಿ ರು. ಠೇವಣಿ ರೂಪದಲ್ಲಿ ಮತ್ತು 2650 ಕೋಟಿ ರು. ಮುಂಗಡ ರೂಪದಲ್ಲಿರುತ್ತದೆ ಎಂದು ವಿವರಿಸಿದರು.

ಸಮಾರಂಭದಲ್ಲಿ 100 ಜನ ಕರ್ನಾಟಕ ಬ್ಯಾಂಕ್‌ ಗ್ರಾಹಕರನ್ನು ಗೌರವಿಸಲಾಯಿತು. ಈ ವೇಳೆ ಬ್ಯಾಂಕಿನ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಶೇಖರ್‌, ಆಡಳಿತ ಮಂಡಳಿಯ ನಿರ್ದೇಶಕರಾದ ಕೇಶವಕೃಷ್ಣ ದೇಸಾಯಿ, ಬಿ.ಆರ್‌.ಅಶೋಕ್‌, ಡಾ.ಡಿ.ಎಸ್‌.ರವೀಂದ್ರನ್‌, ಜೀವನ್‌ದಾಸ್‌ ನಾರಾಯಣ್‌, ಬಾನುಕೃಷ್ಣ, ಪ್ರಾದೇಶಿಕ ಕಚೇರಿಯ ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ ಸುಬ್ಬರಾಮು, ಬ್ರಾಂಚ್‌ ವ್ಯವಸ್ಥಾಪಕರಾದ ಆರ್‌.ಸತ್ಯಕಿರಣ, ಬ್ಯಾಂಕಿನ ಎಲ್ಲಾ ನಿರ್ದೇಶಕ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.

ಹೆಮ್ಮರವಾಗಿ ಬೆಳೆದ ಬ್ಯಾಂಕ್‌: ಸ್ವಾಮೀಜಿ

ಇಂದು ಅಮೆರಿಕಾ ಸೇರಿದಂತೆ ವಿದೇಶಗಳಲ್ಲಿ ಅನೇಕ ಬ್ಯಾಂಕುಗಳು ಮುಚ್ಚಲ್ಪಡುತ್ತಿವೆ. ಇಂತಹ ಸನ್ನಿವೇಶದಲ್ಲಿ ನಮ್ಮ ಭಾರತದಲ್ಲಿ ಬ್ಯಾಂಕುಗಳು ಬೆಳೆಯುತ್ತಿವೆ ಎಂದರೆ ನಮ್ಮ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಎಂದು ಭಾವಿಸಬೇಕಾಗಿದೆ. ಕರ್ನಾಟಕ ಬ್ಯಾಂಕ್‌ ಪ್ರಾರಂಭವಾಗಿ ನೂರು ವರ್ಷಗಳು ಕಳೆಯುತ್ತಿವೆ. ನೂರು ವರ್ಷಗಳ ಹಿಂದೆ ಹಿರಿಯರು ಹಾಕಿದಂತಹ ಬೀಜ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ತನ್ನ ಶಾಖೋಪ ಶಾಖೆಗಳನ್ನು ದೇಶದಾದ್ಯಂತ ವಿಸ್ತರಿಸಿಕೊಂಡು ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ಒದಗಿಸುವ ಮುಖಾಂತರ ಆರ್ಥಿಕವಾಗಿ ಸೌಲಭ್ಯವನ್ನು ತಂದುಕೊಡುವಂತಹ ಕೆಲಸವನ್ನು ಈ ಬ್ಯಾಂಕ್‌ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದು ಸಿದ್ಧಗಂಗಾ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

click me!