ಬಿಜೆಪಿ ಮುಚ್ಚುತ್ತಿದ್ದ ಎಪಿಎಂಸಿಗಳಿಗೆ ಕಾಂಗ್ರೆಸ್‌ನಿಂದ ಜೀವಕಳೆ: ಸಚಿವ ಶಿವಾನಂದ ಪಾಟೀಲ್

Published : May 05, 2026, 10:25 PM IST
Shivanand Patil

ಸಾರಾಂಶ

ಈ ಹಿಂದೆ ನಷ್ಟದಲ್ಲಿದ್ದ ಎಪಿಎಂಸಿಗಳನ್ನು ಬಿಜೆಪಿ ಸರ್ಕಾರ ಮುಚ್ಚುತ್ತಿತ್ತು. ಅದನ್ನು ವಿರೋಧಿಸಿ ಕಾಂಗ್ರೆಸ್ ಸರ್ಕಾರ ಎಪಿಎಂಸಿಗಳನ್ನು ಉಳಿಸಿ ರೈತರಿಗೆ ಬೆನ್ನೆಲುಬಾಗಿ ನಿಂತಿತು ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು.

ಕುಕನೂರು (ಮೇ.05): ಈ ಹಿಂದೆ ನಷ್ಟದಲ್ಲಿದ್ದ ಎಪಿಎಂಸಿಗಳನ್ನು ಬಿಜೆಪಿ ಸರ್ಕಾರ ಮುಚ್ಚುತ್ತಿತ್ತು. ಅದನ್ನು ವಿರೋಧಿಸಿ ಕಾಂಗ್ರೆಸ್ ಸರ್ಕಾರ ಎಪಿಎಂಸಿಗಳನ್ನು ಉಳಿಸಿ ರೈತರಿಗೆ ಬೆನ್ನೆಲುಬಾಗಿ ನಿಂತಿತು. ಸದ್ಯ ರಾಜ್ಯದಲ್ಲಿ 36 ಸಾವಿರ ಕೋಟಿ ಕ್ವಿಂಟಲ್‌ ಆಹಾರ ಪದಾರ್ಥ ಹಾಳಾಗದಂತೆ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.

ರಾಜ್ಯದಲ್ಲಿ ಎಪಿಎಂಸಿಯಿಂದ 20 ಕೋಲ್ಡ್ ಸ್ಟೋರೇಜ್, ತೋಟಗಾರಿಕೆಯಿಂದ 9 ಕೋಲ್ಡ್ ಸ್ಟೋರೇಜ್ ನಿರ್ಮಾಣ ಈ ವರ್ಷವಾಗುತ್ತಿದೆ. ರಾಜ್ಯದಲ್ಲಿ ವರ್ಷಕ್ಕೆ 36 ಸಾವಿರ ಕೋಟಿ ಕ್ವಿಂಟಲ್‌ ಆಹಾರ ಪದಾರ್ಥ ಸಂರಕ್ಷಣೆ ಇಲ್ಲದೆ ಹಾಳಾಗುತ್ತಿದೆ. ಇದರಿಂದ ರೈತರಿಗೆ ನಷ್ಟ ಆಗುತ್ತದೆ. ರೈತ ಬೆಳೆದರೂ ಯೋಗ್ಯ ಬೆಲೆ ನೀಡುವ ಕಾನೂನು ಇಲ್ಲ. ಇದು ದುರ್ದೈವ. ಹಾಗಾಗಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಬಿಜೆಪಿ ಎಪಿಎಂಸಿಗಳನ್ನು ರಾಷ್ಟ್ರಮಟ್ಟದಲ್ಲಿ ಮುಚ್ಚುವ ಕಾರ್ಯಕ್ಕೆ ಮುಂದಾಗಿತ್ತು. ಕಾಂಗ್ರೆಸ್ ಎಪಿಎಂಸಿ ಪರ ಹೋರಾಟ ಮಾಡಿ ಉಳಿಸಿಕೊಂಡಿತು. 2021-22ರಲ್ಲಿ ನಷ್ಟದಲ್ಲಿದ್ದ ಎಪಿಎಂಸಿಗಳಿಂದ ಸದ್ಯ ₹600 ಕೋಟಿ ಆದಾಯ ಬರುತ್ತಿದೆ. ಸದ್ಯ ರಾಜ್ಯದಲ್ಲಿ ಎಪಿಎಂಸಿಯಿಂದ ₹82 ಸಾವಿರ ಕೋಟಿ ವ್ಯವಹಾರ ಇದೆ. ಬೆಂಗಳೂರಿನಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಎಪಿಎಂಸಿ ನಿರ್ಮಾಣ ಕನಸಿದೆ ಎಂದರು.

ಕೋಲ್ಡ್ ಸ್ಟೋರೇಜ್ ಇದೆ

ರೈತರು ಒಂದೇ ಬೆಳೆ ಬೆಳೆಬಾರದು. ಒಂದೇ ಬೆಳೆಯ ಹಿಂದೆ ಬೆನ್ನು ಹತ್ತಬೇಡಿ. ವೈಜ್ಞಾನಿಕ ಕೃಷಿ ಮಾಡಬೇಕು. ಕುಕನೂರಿನ ಎಪಿಎಂಸಿಗೆ ಅನ್ನದಾನೀಶ್ವರ ಹೆಸರಿಡುವ ಕಾರ್ಯ ಮಾಡುತ್ತೇನೆ ಎಂದರು. ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಯಲಬುರ್ಗಾ ಕ್ಷೇತ್ರ ಅಭಿವೃದ್ಧಿಗಾಗಿ ಬಸವರಾಜ ರಾಯರಡ್ಡಿ ಅವರು ಬಜೆಟ್‌ನ ಶೇ. 1ರಷ್ಟು ಅನುದಾನ ತಂದಿದ್ದಾರೆ ಎಂದರು. ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ರಾಯಚೂರು ಬಿಟ್ಟರೆ ಕುಕನೂರಲ್ಲಿ ಕೋಲ್ಡ್ ಸ್ಟೋರೇಜ್ ಇದೆ. ಮತ್ತೆಲ್ಲೂ ಇಲ್ಲ ಎಂದರು.

ಮುಂಡರಗಿ ಡಾ. ಅನ್ನದಾನೀಶ್ವರ ಶ್ರೀ ಮಾತನಾಡಿ, ಯಲಬುರ್ಗಾ ಎಪಿಎಂಸಿಗೆ ಅನ್ನದಾನೀಶ್ವರ ಹೆಸರಿಡುವುದು ಸೂಕ್ತ. ಇದನ್ನು ಶಾಸಕರು ಪೂರೈಸಬೇಕು ಎಂದರು. ಡಿಸಿ ಡಾ. ಸುರೇಶ ಇಟ್ನಾಳ್ ಮಾತನಾಡಿ, ಕುಕನೂರಲ್ಲಿ ತಹಸೀಲ್ದಾರ್, ಕೋರ್ಟ್‌, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶೀಘ್ರ ಟೆಂಡರ್ ಪ್ರಕ್ರಿಯೆ ಜರುಗಲಿದೆ. ಜಾಗದ ಬಗ್ಗೆ ಇದ್ದ ವ್ಯಾಜ್ಯ ಬಗೆಹರಿದು ಹಸಿರು ನಿಶಾನೆ ದೊರೆತಿದೆ. ಶೀಘ್ರ ಕಟ್ಟಡ ನಿರ್ಮಾಣ ಆಗಲಿದೆ ಎಂದರು.

PREV
Read more Articles on
click me!

Recommended Stories

ವಿಜಯಪುರ: ಮಗುವನ್ನು ಕಚ್ಚಿ 100 ಅಡಿ ದೂರ ಎಳೆದೊಯ್ದ ಬೀದಿ ನಾಯಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!
ಮನೆ ಮ್ಯೂಟೇಷನ್‌ಗೆ ₹5 ಲಕ್ಷ ಲಂಚ; 2.5 ಲಕ್ಷ ಹಣದ ಸಮೇತ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ!