ಗದಗ: ಕಪ್ಪತ್ತಗುಡ್ಡದ ಸಸ್ಯ ಆಹುತಿ ಪಡೆಯುತ್ತಿರುವ ಬೆಂಕಿ..!

By Kannadaprabha News  |  First Published Mar 5, 2021, 1:27 PM IST

ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಬೆಂಕಿ| ಕೋಟ್ಯಂತರ ಮೌಲ್ಯದ ಸಸ್ಯ ಸಂಪತ್ತು ನಾಶ| ಅರಣ್ಯ ಇಲಾಖೆಯ ಅಸಹಾಯಕತೆ| ಪಕ್ಷಿಗಳ ಮೊಟ್ಟೆ ಹಾಗೂ ರೆಕ್ಕೆ ಮೂಡದ ಮರಿಗಳೂ ಬೆಂಕಿ ಕೆನ್ನಾಲಿಗೆ ಸಿಕ್ಕು ನಾಶ| 


ರಿಯಾಜ ಅಹಮ್ಮದ ಎಂ. ದೊಡ್ಡಮನಿ

ಡಂಬಳ(ಮಾ.05):  ಮುಂಡರಗಿ ಮತ್ತು ಶಿರಹಟ್ಟಿ ವಲಯದ ಕಪ್ಪತ್ತಗುಡ್ಡಕ್ಕೆ ಪದೇ ಪದೇ ಬೆಂಕಿ ಬೀಳುತ್ತಿದ್ದು, ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿದೆ.

Latest Videos

undefined

ಫೆ. 28, ಮಾ. 1, ಮಾ. 4ರಂದು ಮುಂಡರಗಿ ಮತ್ತು ಶಿರಹಟ್ಟಿವಲಯದಲ್ಲಿನ ಕಪ್ಪತ್ತಗುಡ್ಡಕ್ಕೆ ಬೆಂಕಿ ಹಚ್ಚಲಾಗಿದೆ. ಈಗಾಗಲೇ ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಯ ಜ್ವಾಲೆಗೆ ಸುಟ್ಟು ಕರಕಲಾಗಿದೆ. ಕಳೆದ ಒಂದು ತಿಂಗಳಲ್ಲಿ ನಡೆದ ಅವಘಡಗಳಲ್ಲಿ ನೂರಾರು ಜಾತಿಯ ವನಸ್ಪತಿ ಸಸ್ಯಗಳು, ಸರಿಸೃಪಗಳು ಬೆಂದುಕರಕಲಾಗಿವೆ. ಗುರುವಾರ ಮಧ್ಯಾಹ್ನ ಮತ್ತೆ ಕೆಂಪುಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ನಂದಿಸಲು ಶ್ರಮಿಸಿದ್ದಾರೆ.

ಫೆ. 28ರಂದು ಮುಂಜಾನೆ 10 ಗಂಟೆಗೆ ಡೋಣಿ ತಾಂಡಾ ಸಮೀಪ ಮುಂಡರಗಿ ವ್ಯಾಪ್ತಿಗೆ ಬರುವ ಕಪ್ಪತ್ತಗುಡ್ಡ ಪ್ರದೇಶದ ಎತ್ತಿನಗುಡ್ಡ, ಹೋಗಲಿ ಗುಡ್ಡ, ಹುಲಿಗುಡ್ಡದ ಸರವು,ದಿಂಡೂರ ಬೆಳದಡಿಯಲ್ಲಿ ಬೆಂಕಿ ಬಿದ್ದಿತ್ತು. ಮಾ. 1ರಂದು ರಾತ್ರಿ ಕಬಲಾದಗಟ್ಟಿ, ಕೋರ್ಲಹಳ್ಳಿ ಭಾಗ ಸೇರಿದಂತೆ 12 ಕಡೆಗಳಲ್ಲಿ ಕಪ್ಪತ್ತಗುಡ್ಡಕ್ಕೆ ಬೆಂಕಿ ಹಚ್ಚಲಾಗಿತ್ತು. ಮತ್ತೆ ಮಾ. 4ರಂದು ಕೆಂಪುಗುಡ್ಡದಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಶಿರಹಟ್ಟಿಮತ್ತು ಮುಂಡರಗಿ ವಿಭಾಗದ ಅರಣ್ಯ ಇಲಾಖೆಯು 85ಕ್ಕೂ ಅಧಿಕ ಸಿಬ್ಬಂದಿ ಬಿರು ಬಿಸಿಲಿನಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಸಂಜೆ 6 ಗಂಟೆಯಾದರೂ ಕಾರ್ಯಾಚರಣೆ ಮುಗಿದಿರಲಿಲ್ಲ. ಕಿಡಿಗೇಡಿ ಕೃತ್ಯಕ್ಕೆ ಇಲ್ಲಿಯ ವನ್ಯಜೀವಿಗಳು, ಪರಿಸರ ನಲಗುತ್ತಿದೆ.

ಮತ್ತೆ ಕಪ್ಪತ್ತಗುಡ್ಡಕ್ಕೆ ಬೆಂಕಿ: ಬೆಂಕಿಗೆ ಆಹುತಿಯಾದ ಮೂಕ ಪ್ರಾಣಿಗಳು

ಬೆಂಕಿಗೆ ಹಲವು ಸಸ್ಯಗಳು ನಾಶ:

ಬೆಟ್ಟದಲ್ಲಿರುವ ಚಿತ್ರಮೂಲ, ಹನಮಹಸ್ತ, ಅಂಟನಾಳ, ಹಿಪ್ಪಲಿ, ಕದಂಬ, ಸೋನ್ನಕೆ, ಶಿಖ ಮಾಚಪತ್ರಿ, ಹೆಗ್ಗೊಳಿ, ಮದಗುಣಕಿ, ಮಧುನಾಶಿನಿ, ಗುಲಗಂಜಿ, ಕಕ್ಕಿಕಾರೆ, ಅಡಸೋಗಿ,ಬೇವು, ಅತ್ತಿ, ಕಾಡಿಗ್ಗರಗ, ಕಾಮಕಸ್ತೂರಿ, ಹೊನ್ನವರೆ ಜತೆಗೆ ಹುಲಸಾಗಿ ಬೆಳೆದ ಹುಲ್ಲು ಬೆಂಕಿಗೆ ಆಹುತಿಯಾಗಿದೆ. ವನಸ್ಪತಿಗಳ ಹೂ, ಕಾಯಿ, ಬೇರು ಕಾಂಡಗಳು ಸುಟ್ಟು ಕರಕಲಾಗಿವೆ.

ಕಾಡಿನಲ್ಲಿದ್ದ ನವಿಲು, ಜಿಂಕೆ, ನರಿ, ಕತ್ತೆಕಿರುಬ, ಮೊಲ, ಮುಂಗುಸಿ, ಕಾಡುಬೆಕ್ಕು, ಚಿರತೆ, ತೋಳಗಳು ಜೀವಭಯದಿಂದ ತತ್ತರಿಸಿ ಕಾಡುತೊರೆದಿವೆ. ಕೆಲವು ರೈತರ ಹೊಲಗಳಿಗೆ, ನಾಡಿಗೆ ಲಗ್ಗೆ ಇಟ್ಟಿವೆ. ಬೆಂಕಿ ವೇಗವಾಗಿ ಹಬ್ಬುತ್ತಿರುವಂತೆ ಹಲವು ಮೊಲ, ಸರಿಸೃಪಗಳು, ಉಡ, ಕಪ್ಪೆ, ಹಾವು, ಚೇಳು, ಊಸರವಳ್ಳಿ, ಓತಿಕ್ಯಾತಗಳು ಕರಕಲಾಗಿವೆ. ಪಕ್ಷಿಗಳ ಮೊಟ್ಟೆ ಹಾಗೂ ರೆಕ್ಕೆ ಮೂಡದ ಮರಿಗಳೂ ಬೆಂಕಿ ಕೆನ್ನಾಲಿಗೆ ಸಿಕ್ಕು ನಾಶವಾಗಿವೆ.

ಅರಣ್ಯ ಇಲಾಖೆಯ ಅಸಹಾಯಕತೆ:

ಪ್ರತಿವರ್ಷ ಬೇಸಿಗೆ ಆರಂಭಗೊಂಡರೆ ಸಾಕು, ಕಪ್ಪತ್ತಗಿರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚುತ್ತಾರೆ. ಆದರೆ ಅರಣ್ಯ ಇಲಾಖೆ ಬೆಂಕಿ ನಂದಿಸಲು ಓಬೇರಾಯನ ಕಾಲದ ಉಪಾಯಗಳನ್ನು ಬಳಕೆ ಮಾಡುತ್ತಿದೆ. ಹಸಿ ಬರಲು ಕೈಯಲ್ಲಿ ಹಿಡಿದು ಬೆಂಕಿಯ ಮುಂದುಗಡೆ ಹೊಡೆಯುವುದನ್ನು ಬಿಟ್ಟರೆ ಬೇರೆ ಉಪಾಯ ಅರಣ್ಯ ಇಲಾಖೆಯಲ್ಲಿ ಇಲ್ಲ. ಬೆಟ್ಟದ ಪ್ರದೇಶ ಉತ್ತರ ಭಾಗದಲ್ಲಿ ಬೆಂಕಿ ಆವರಿಸಿದಾಗ ಕಲ್ಲು-ಮುಳ್ಳುಗಳಲ್ಲಿ ಹೋಗಿ ಬೆಂಕಿ ನಂದಿಸುವುದು ಕಷ್ಟಕರ. ಹೊಸ ತಂತ್ರಜ್ಞಾನ ಬಂದಿದ್ದರೂ ಬೆಂಕಿ ನಂದಿಸುವ ವಾಹನ, ಪರಿಕರ ಇಲ್ಲದೇ ಅರಣ್ಯ ಇಲಾಖೆ ಕೈ ಚೆಲ್ಲಿ ಕುಳಿತಿದೆ.

ಮುಂಡರಗಿ ವಲಯದ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಬೆಂಕಿ ನಂದಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ದಿನಗೂಲಿ ನೌಕರರು ಸೇರಿ ಪ್ರಯತ್ನಿಸಿದ್ದಾರೆ. ಬೆಟ್ಟದಲ್ಲಿ ಹುಲ್ಲು ಹುಲುಸಾಗಿ ಬೆಳೆದಿರುವುದರಿಂದ ಬೆಂಕಿ ವೇಗವಾಗಿ ಹಬ್ಬಿದೆ ಎಂದು ಮುಂಡರಗಿ ಆರ್‌ಎಫ್‌ಒ ಪ್ರದೀಪ ಎಸ್‌. ಪವಾರ್‌ ತಿಳಿಸಿದ್ದಾರೆ. 
 

click me!