ದೆಹಲಿಯಿಂದ ಹುಬ್ಬಳ್ಳಿಗೆ ಮರಳಿದ ಕನ್ನಡಿಗರು: ತಂದೆಯ ಕಂಡು ಕಣ್ಣೀರಿಟ್ಟ ಯುವತಿ..!

By Kannadaprabha NewsFirst Published May 17, 2020, 7:28 AM IST
Highlights

ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿ ಆಯಾ ಜಿಲ್ಲೆಗಳಿಗೆ ರವಾನೆ| ಶ್ರಮಿಕ್‌ ಎಕ್ಸ್‌ಪ್ರೆಸ್‌ ಮೂಲಕ ತವರಿಗೆ ಮರಳಿದ 320 ಕಾರ್ಮಿಕರು, ವಿದ್ಯಾರ್ಥಿಗಳು| ಧಾರವಾಡ ಜಿಲ್ಲೆಯ 41 ಜನರನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಕೃಷಿ ವಿಶ್ವವಿದ್ಯಾಲಯಕ್ಕೆ ಕ್ವಾರಂಟೈನ್‌ ಮಾಡಲು ಕಳಿಸಿದರು|

ಹುಬ್ಬಳ್ಳಿ(ಮೇ.17): ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಿಲುಕಿದ್ದ ರಾಜ್ಯದ 320 ಕಾರ್ಮಿಕರು, ವಿದ್ಯಾರ್ಥಿಗಳು ಶ್ರಮಿಕ್‌ ಎಕ್ಸ್‌ಪ್ರೆಸ್‌ ಮೂಲಕ ಶನಿವಾರ ತವರಿಗೆ ಮರಳಿದ್ದಾರೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಸಾಮಾಜಿಕ ಅಂತರದೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ ಮೂಲಕ ಆಯಾ ಜಿಲ್ಲೆಗಳಿಗೆ ಕಳಿಸಿಕೊಡಲಾಗಿದೆ.

ಬೆಳಗ್ಗೆ 11.30ಕ್ಕೆ ನೈಋುತ್ಯ ರೈಲ್ವೆ ಕೇಂದ್ರೀಯ ನಿಲ್ದಾಣಕ್ಕೆ ರೈಲು ಆಗಮಿಸಿತು. ಕಳೆದೆರಡು ತಿಂಗಳಿಂದ ಲಾಕ್‌ಡೌನ್‌ನಿಂದ ಸಿಲುಕಿ ನಲುಗಿದ್ದ ಜನರು ಕರ್ನಾಟದ ನೆಲಕ್ಕೆ ಬರುತ್ತಿದ್ದಂತೆ ನಿರಾಳರಾದರು. ಎಲ್ಲರಿಗೂ ಥರ್ಮಲ್‌ ಸ್ಕ್ರೀನಿಂಗ್‌ ಮೂಲಕ ಆರೋಗ್ಯ ಪರೀಕ್ಷಿಸಲಾಯಿತು. ಎಲ್ಲರ ಕೈಗಳಿಗೂ ಕ್ವಾರಂಟೈನ್‌ ಸೀಲ್‌ ಹಾಕಲಾಯಿತು. ಬಳಿಕ ಜಿಲ್ಲಾಡಳಿತದಿಂದ ಪೂರೈಸಲಾದ ಮಧ್ಯಾಹ್ನದ ಊಟ, ನೀರನ್ನು ಅಧಿಕಾರಿಗಳು ಒದಗಿಸಿದರು. ಆನಂತರ ಎಲ್ಲರನ್ನೂ ಅವರವರ ಜಿಲ್ಲೆಗಳಿಗೆ ಕಳಿಸಿಕೊಡುವ ವ್ಯವಸ್ಥೆ ಮಾಡಲಾಯಿತು.

ಕೊರೋನಾ ಸೋಂಕಿತ ಲಾರಿ ಚಾಲಕನ ಟ್ರಾವೆಲ್‌ ಹಿಸ್ಟರಿಗೆ ಬೆಚ್ಚಿ ಬಿದ್ದ ಧಾರವಾಡ..!

ಧಾರವಾಡ ಜಿಲ್ಲೆಯ 41 ಜನರನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಕೃಷಿ ವಿಶ್ವವಿದ್ಯಾಲಯಕ್ಕೆ ಕ್ವಾರಂಟೈನ್‌ ಮಾಡಲು ಕಳಿಸಿದರು. ಉಳಿದಂತೆ ಗದಗ 3, ಹಾವೇರಿ 13, ಬೆಳಗಾವಿ 46, ದಾವಣಗೆರೆ 8, ಶಿವಮೊಗ್ಗ 66, ಉತ್ತರಕನ್ನಡ 5, ದಕ್ಷಿಣ ಕನ್ನಡ 20, ಚಿಕ್ಕಮಗಳೂರು 4, ಬಾಗಲಕೋಟೆ 13, ವಿಜಯಪುರ 28, ಕೊಪ್ಪಳ 10, ಚಿತ್ರದುರ್ಗ 7, ಹಾಸನ 13 ಹಾಗೂ ಬಳ್ಳಾರಿಯ ಜನರನ್ನು ಬಸ್‌ಗಳ ಮೂಲಕ ಆಯಾ ಜಿಲ್ಲೆಗಳಿಗೆ ಕಳಿಸಿಕೊಡಲಾಯಿತು. ಕೆಲವರು ಸೆಲ್ಫ್‌ ಕ್ವಾರಂಟೈನ್‌ ಆಗುವುದಾಗಿ ತಿಳಿಸಿ ತಮ್ಮ ಖಾಸಗಿ ವಾಹನಗಳ ಮೂಲಕ ಮನೆಗಳಿಗೆ ತೆರಳಿದ್ದು, ಅವರ ಮೇಲೆ ಆಯಾ ಜಿಲ್ಲಾಡಳಿತ ನಿಗಾ ವಹಿಸಲಿದೆ.

ಧಾರವಾಡ ಮೂಲದ ಗಜಾನನ ಮಾತನಾಡಿ, ಐದಾರು ವರ್ಷದಿಂದ ದೆಹಲಿಯಲ್ಲಿ ನೆಲೆಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಲಾಕ್‌ಡೌನ್‌ನಿಂದ ಅಲ್ಲಿಯೆ ಸಿಲುಕುವಂತಾಗಿ ಸಾಕಷ್ಟುತೊಂದರೆ ಅನುಭವಿಸಿದ್ದೇವೆ. ಪ್ರತಿದಿನ ಮನೆಗೆ ಕರೆ ಮಾಡಿ ಪಾಲಕರ ಜತೆ ಮಾತನಾಡುತ್ತಿದ್ದೆವು. ಈಗ ವಾಪಸ್ಸಾದರೂ 14 ದಿನಗಳ ಬಳಿಕ ಮನೆಗೆ ಹೋಗಬೇಕಿದೆ. ಆದರೂ ವಾಪಸ್‌ ನಮ್ಮೂರಿಗೆ ಬಂದ ಖುಷಿಯಿದೆ ಎಂದರು.

ಸಮ್ಮೇದ ಪತ್ರಾವಳಿ, ಯುಪಿಎಸ್‌ಸಿ ಕೋಚಿಂಗ್‌ಗಾಗಿ ದೆಹಲಿಗೆ ತೆರಳಿದ್ದೆ. ಆದರೆ, ಲಾಕ್‌ಡೌನ್‌ನಿಂದ ಅಲ್ಲಿಯೆ ಸಿಲುಕುವಂತಾಯಿತು. ಅಲ್ಲಿ ಸಂಪೂರ್ಣ ರೆಡ್‌ಝೋನ್‌ ಇರುವುದರಿಂದ ಹೆಚ್ಚಿನ ಬಿಗು ಇತ್ತು. ಹೊರಹೋಗಲು ಸಾಧ್ಯವಾಗುತ್ತಿರಲಿಲ್ಲ. ರೈಲ್ವೆ ಮೂಲಕ ತೆರಳಲು ಅವಕಾಶ ನೀಡಿದ್ದರಿಂದ ವಾಪಸ್‌ ಊರಿಗೆ ಬರಲು ಸಾಧ್ಯವಾಗಿದೆ ಎಂದರು.

ಕಣ್ಣೀರಿಟ್ಟ ಯುವತಿ

ದೆಹಲಿಯಿಂದ ಬಂದ ಯುವತಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ತಂದೆಯನ್ನು ಕಂಡ ಕ್ಷಣ ಬಿಕ್ಕಳಿಸಿದಳು. ಐಎಎಸ್‌ ತರಬೇತಿಗಾಗಿ ದೆಹಲಿಯಲ್ಲಿರುವ ಈಕೆ ರಜೆಯ ಸಂದರ್ಭದಲ್ಲಿ ಮನೆಗೆ ಬರಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್‌ ಘೋಷಣೆಯಾಗಿತ್ತು. ಹೀಗಾಗಿ ಕುಟುಂಬದಿಂದ ಎರಡು ತಿಂಗಳು ದೂರ ಇರುವಂತಾಗಿತ್ತು. ಮಗಳು ಬರುವಿಕೆಗಾಗಿ ತಂದೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ತಂದೆ ಕಂಡ ತಕ್ಷಣ ಕಣ್ಣೀರಿಟ್ಟ ಯುವತಿಗೆ ತಂದೆಯೆ ದೂರದಿಂದ ಸಮಾಧಾನ ಹೇಳಿದರು.
 

click me!