ಕಣಬರಗಿಯಲ್ಲಿ ಬುಡಾ ಬಡಾವಣೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆಗೆ ರೈತರು ವಿರೋಧ ವ್ಯಕ್ತಪಡಿಸಿದ್ದು, ಟಯರ್‌ಗೆ ಬೆಂಕಿ ಹಚ್ಚಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ, (ಆಗಸ್ಟ್. 05): ನಗರದ ಹೊರವಲಯ ಕಣಬರಗಿಯಲ್ಲಿ ಯೋಜನೆ ಸಂಖ್ಯೆ 61ರಲ್ಲಿ ಹೊಸ ಬಡಾವಣೆ ಅಭಿವೃದ್ಧಿ ಪಡಿಸಲು 177.45 ಕೋಟಿ ರೂಪಾಯಿ ಮೊತ್ತದ ಅಂದಾಜು ಪಟ್ಟಿ ಪರಿಷ್ಕರಿಸಿ 127.71 ಕೋಟಿ ರೂಪಾಯಿ ಪರಿಷ್ಕೃತ ಅಂದಾಜು ಪಟ್ಟಿಗೆ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆಯಡಿ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಕಣಬರಗಿ ಗ್ರಾಮದ ರೈತರ ವಿರೋಧದ ನಡುವೆಯೂ ಹೊಸ ಬಡಾವಣೆ ನಿರ್ಮಾಣಕ್ಕೆ ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಳೆದ ಮೂರ್ನಾಲ್ಕು ವರ್ಷಗಳಿಂದ ಸತತ ಪ್ರಯತ್ನ ನಡೆಸಿದ್ದರು. ಈ ಯೋಜನೆ ಕೈಬಿಡುವಂತೆ ಆಗ್ರಹಿಸಿ ರೈತರು ಹಲವು ಭಾರೀ ಪ್ರತಿಭಟನೆಗಳನ್ನ ನಡೆಸಿದ್ದರು. ಆದ್ರೆ ಸದ್ಯ ರೈತರ ವಿರೋಧದ ನಡುವೆಯೂ ಬುಡಾ ಯೋಜನೆ ಸಂಖ್ಯೆ 61 ರ ಹೊಸ ಲೇಔಟ್ ನಿರ್ಮಾಣಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು ರೈತರನ್ನು ಕೆರಳಿಸಿದೆ.
Belagavi: ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ: ಸಿಸಿ ಕ್ಯಾಮರಾದಲ್ಲಿ ಚಲನವಲನ ಸೆರೆ
ಇಂದು(ಶುಕ್ರವಾರ) ಬೆಳಗಾವಿ-ಗೋಕಾಕ ಮಾರ್ಗದಲ್ಲಿ ರಸ್ತೆ ತಡೆ ನಡೆಸಿದ ನೂರಾರು ರೈತರು ನಾಲ್ಕಕ್ಕೂ ಹೆಚ್ಚು ಟಯರ್‌ಗಳಿಗೆ ಬೆಂಕಿ ಹಚ್ಚಿ ದಿಢೀರ್ ಪ್ರತಿಭಟನೆ ನಡೆಸಿದರು. ಈ ವೇಳೆ ಕಣಬರಗಿ ಬಳಿ ಬೆಳಗಾವಿ ಗೋಕಾಕ್ ರಸ್ತೆಯಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಇನ್ನು ನಾಲ್ಕಕ್ಕೂ ಹೆಚ್ಚು ಟಯರ್‌ಗಳಿಗೆ ಬೆಂಕಿ ಹಚ್ಚಿದ ರೈತರು, ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದರು. ತಕ್ಷಣ ಸ್ಥಳಕ್ಕೆ ಬಂದ ಡಿಸಿಪಿ ರವೀಂದ್ರ ಗಡಾದಿ, ಮಾಳಮಾರುತಿ ಠಾಣೆ ಸಿಪಿಐ ಸುನೀಲ್ ಪಾಟೀಲ್, ಮಾಳಮಾರುತಿ ಠಾಣೆ ಪಿಎಸ್ಐ ಹೊನ್ನಪ್ಪ ತಳವಾರ ಹರಸಾಹಸ ಪಟ್ಟು ಪ್ರತಿಭಟನಾನಿರತ ರೈತರ ಮನವೊಲಿಸಿದರು. 159.23 ಎಕರೆ ಪೈಕಿ 50 ಎಕರೆ 18 ಗುಂಟೆ ಜಮೀನು ನೀಡಲು ವಿರೋಧ ವ್ಯಕ್ತಪಡಿಸಿರುವ ರೈತರು ಈಗಾಗಲೇ ಕೋರ್ಟ್ ಮೊರೆ ಹೋಗಿದ್ದಾರೆ. ಅಷ್ಟೇ ಅಲ್ಲದೇ ಇದೇ ಪ್ರದೇಶದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳನ್ನ ನಿರ್ಮಾಣ ಮಾಡಲಾಗಿದೆ. ಮನೆಗಳು ನಿರ್ಮಾಣಗೊಂಡಿರುವ ಜಾಗವನ್ನ ಬಿಟ್ಟು ಕೊಡ್ತೀವಿ ಎಂದು ಬುಡಾ ಅಧಿಕಾರಿಗಳು ಹೇಳಿದ್ದಾರೆ. ಕಳೆದ 10 ವರ್ಷಗಳಿಂದ ನಾವು ಇಲ್ಲಿ ವಾಸವಾಗಿದ್ದೇವೆ. ಹೀಗಾಗಿ ಮನೆಗಳನ್ನು ನಿರ್ಮಿಸಿದವರಿಗೆ ಎನ್‌ಓಸಿ ನೀಡುವಂತೆ ರೈತರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.
ಕಳೆದ ಹದಿನೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಬಡಾವಣೆ ನಿರ್ಮಾಣದ ಪ್ರಸ್ತಾವನೆಯಲ್ಲಿ ಇರುವ ಜಮೀನಿನ ಪೈಕಿ 29.15 ಎಕರೆ ಜಮೀನಿಗೆ ಹೈಕೋರ್ಟ್ ತಡೆಯಾಜ್ಞೆ ಇರುವುದರಿಂದ ಕಾಮಗಾರಿ ಟೆಂಡರ್ ಕರೆಯುವ ಸಮಯದಲ್ಲಿ 29.15 ಎಕರೆ ಜಮೀನು ಬಿಟ್ಟು ಬಾಕಿ ಉಳಿಯುವ ಜಮೀನಿಗೆ ಮಾತ್ರ ಟೆಂಡರ್ ಕರೆಯಬೇಕು, ಬಡಾವಣೆಗಾಗಿ ಸರ್ಕಾರದಿಂದ ಅನುದಾನ ಕೇಳುವಂತಿಲ್ಲ ಎಂದು ಸರ್ಕಾರ ಷರತ್ತು ವಿಧಿಸಿದೆ. ಇದೀಗ 14 ವರ್ಷಗಳ ಬಳಿಕ ಬೆಳಗಾವಿ ನಗರದಲ್ಲಿ ಹೊಸ ಬಡಾವಣೆ ನಿರ್ಮಾಣ ಆಗುತ್ತಿದೆ.
ಒಟ್ಟಿನಲ್ಲಿ ಬುಡಾ ಅಧಿಕಾರಿಗಳ ವಿರುದ್ದ ಕಣಬರಗಿ ರೈತರು ರೊಚ್ಚಿಗೆದ್ದಿದ್ದು ಯಾವುದೇ ಕಾರಣಕ್ಕೂ ಬುಡಾ ಲೇಔಟ್ ನಿರ್ಮಾಣಕ್ಕೆ ತಮ್ಮ ಜಮೀನು ನೀಡಲ್ಲ ಅಂತಾ ರೈತರು ಪಟ್ಟು ಹಿಡಿದಿದ್ದಾರೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸದ್ಯ ಅಧಿಕಾರಿಗಳ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.