ಕಾರ್ಕಳ: ಉಷ್ಣಾಂಶ ಏರಿಕೆ, ಮಳೆ ವಿಳಂಬದಿಂದ ಮೊಳಕೆಯೊಡೆಯದ ಕಲ್ಲಣಬೆ

By Kannadaprabha News  |  First Published Jun 25, 2023, 6:25 AM IST

ಮಲೆನಾಡ ತಪ್ಪಲಿನ ಭಾಗಗಳಲ್ಲಿ ಗುಡುಗಿನೊಡನೆ ಬರುವ ಮೊದಲ ಮುಂಗಾರು ಮಳೆಯ ಸಂದರ್ಭದಲ್ಲಿ ಕಲ್ಲಣಬೆಯು ಮೊಳಕೆಯೊಡೆಯುವುದು ಸಾಮಾನ್ಯ. ಈ ಬಾರಿ ಚಂಡಮಾರುತದ ಪರಿಣಾಮದಿಂದಾಗಿ ಮುಂಗಾರು ಮಳೆ ತಡವಾಗಿ ಆರಂಭವಾಗಿದೆ. ಈ ಬಾರಿ ಮುಂಗಾರು ಪೂರ್ವ ಮಳೆ ತಡವಾಗಿ ಆರಂಭವಾದ ಹಿನ್ನೆಲೆಯಲ್ಲಿ ಕಲ್ಲಣಬೆಗಳು ಕೂಡ ತಡವಾಗಿ ಮೊಳಕೆಯೊಡೆದಿವೆ.


ಕಾರ್ಕಳ (ಜೂ.25) ಮಲೆನಾಡ ತಪ್ಪಲಿನ ಭಾಗಗಳಲ್ಲಿ ಗುಡುಗಿನೊಡನೆ ಬರುವ ಮೊದಲ ಮುಂಗಾರು ಮಳೆಯ ಸಂದರ್ಭದಲ್ಲಿ ಕಲ್ಲಣಬೆಯು ಮೊಳಕೆಯೊಡೆಯುವುದು ಸಾಮಾನ್ಯ. ಈ ಬಾರಿ ಚಂಡಮಾರುತದ ಪರಿಣಾಮದಿಂದಾಗಿ ಮುಂಗಾರು ಮಳೆ ತಡವಾಗಿ ಆರಂಭವಾಗಿದೆ. ಈ ಬಾರಿ ಮುಂಗಾರು ಪೂರ್ವ ಮಳೆ ತಡವಾಗಿ ಆರಂಭವಾದ ಹಿನ್ನೆಲೆಯಲ್ಲಿ ಕಲ್ಲಣಬೆಗಳು ಕೂಡ ತಡವಾಗಿ ಮೊಳಕೆಯೊಡೆದಿವೆ.

ಅಣಬೆ ಪ್ರಿಯರಿಗೆ ಸುಗ್ಗಿ: ಈ ಬಾರಿ ಹಳ್ಳಿಗಳಲ್ಲಿ ಅಣಬೆ ಪ್ರಿಯರು ಚೂಪಾದ ಕಟ್ಟಿಗೆ, ಕತ್ತಿ ಹಾಗೂ ಚೀಲವನ್ನು ಹಿಡಿದುಕೊಂಡು ಹಳ್ಳಿಗಳಲ್ಲಿ ಪೊದೆಯ ಬದಿಗಳಲ್ಲಿ ಜೌಗು ಮಣ್ಣಿನ ಪ್ರದೇಶಗಳಲ್ಲಿ ಕಲ್ಲಣಬೆಯನ್ನು ಹುಡುಕುವ ದೃಶ್ಯ ಸಾಮಾನ್ಯವಾಗಿದೆ. ಕಾರ್ಕಳ ತಾಲೂಕಿನ ಎಳ್ಳಾರೆ, ಶಿರ್ಲಾಲು, ಕೆರುವಾಶೆ, ಮಿಯ್ಯಾರು, ಹೊಸ್ಮಾರು, ಈದು, ಬಜಗೋಳಿ, ಹೆಬ್ರಿ ತಾಲೂಕಿನ ಮುನಿಯಾಲು, ಮುದ್ರಾಡಿ, ನಾಡ್ಪಾಲು ಹೆಬ್ರಿಗಳಲ್ಲಿ ಗ್ರಾಮೀಣ ಜನರು ಕಾಡಿನ ಅಂಚಿನ ಭಾಗಗಳಲ್ಲಿ ಗುಂಪಾಗಿ ಸೇರಿಕೊಂಡು ಅಣಬೆಗಳನ್ನು ಹುಡುಕಲು ಹೊರಡುತ್ತಿದ್ದಾರೆ.

Latest Videos

undefined

ಅಣಬೆ ಕೃಷಿಯಿಂದಲೂ ಇಷ್ಟು ಸಂಪಾದಿಸ್ಬಹುದಾ? ಕೇರಳದ ಈ ತಾಯಿ-ಮಗನ ದಿನದ ಗಳಿಕೆ 40 ಸಾವಿರ ರೂ.!

ಬಲು ದುಬಾರಿ: ಕಳೆದ ಬಾರಿ ಕಲ್ಲಣಬೆ ಒಂದು ಸೇರಿಗೆ 800 ರಿಂದ 1000 ರು. ಬೆಲೆಗೆ ಮಾರಾಟವಾಗುತಿತ್ತು. ಈ ಬಾರಿ ಮಳೆ ತಡವಾದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಕಲ್ಲಣಬೆ ಸಿಗುತ್ತಿಲ್ಲ. ಆದ್ದರಿಂದ ಸೇರಿಗೆ 1000 ದಿಂದ 1500 ರುಪಾಯಿಗೆ ದರ ಏರಿದ್ದು, ಅಣಬೆ ಪ್ರಿಯರು ದರ ಹೆಚ್ಚಾದರೂ ಕೊಂಡುಕೊಳ್ಳುತ್ತಿದ್ದಾರೆ. ಮಳೆ ಬಾರದ ಜೊತೆಗೆ ಉಷ್ಣತೆಯೂ ಏರುಪೇರಾಗಿದ್ದರಿಂದ ಕಲ್ಲಣಬೆಗಳು ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿಲ್ಲ. ಕಳೆದ ಎರಡು ವರ್ಷಗಳಲ್ಲಿ ಬೇಸಗೆಯಲ್ಲೆ ಸಾಕಷ್ಟುಮಳೆ ಸುರಿದಿದ್ದರಿಂದ ಮಳೆಗಾಲ ಶುರುವಾಗುವ ಮೊದಲೇ ಕಲ್ಲಣಬೆ ಮಾರುಕಟ್ಟೆಪ್ರವೇಶಿಸಿತ್ತು. ಆದರೆ ಈ ಬಾರಿ ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಭಾರಿ ಉಷ್ಣತೆ ಕಂಡುಬಂದಿತ್ತು. ಅಲ್ಲದೆ ಕರಾವಳಿ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯೇ ಸುರಿದಿಲ್ಲ. ಭೂಮಿ ತಂಪಾದರೆ ಮಾತ್ರ ಕಲ್ಲಣಬೆಗಳು ಹುಟ್ಟುತ್ತವೆ. ಈ ಬಾರಿ ಮಳೆಯೂ ಇಲ್ಲದೆ, ಉಷ್ಣಾಂಶವೂ ಹೆಚ್ಚಿದ್ದರಿಂದ ಕಲ್ಲಣಬೆಗಳು ಮೊಳಕೆಯೊಡೆದಿಲ್ಲ.

ಮುಂಗಡ ಬುಕ್ಕಿಂಗ್‌ಗೆ ಗ್ರಾಹಕರು ರೆಡಿ: ಗ್ರಾಮೀಣ ಪ್ರದೇಶಗಳಲ್ಲಿ ಕಲ್ಲಣಬೆ ರುಚಿಯನ್ನು ಸವಿದಿರುವ ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದ್ದರಿಂದ ಮುಂಬಯಿ, ಬೆಂಗಳೂರು ನಗರಗಳಲ್ಲಿ ವಾಸಿಸುವ ಜನರು 2000 ರುಪಾಯಿ ನೀಡಿ ಬುಕ್ಕಿಂಗ್‌ ಮಾಡಲು ಸಿದ್ಧರಾಗಿದ್ದಾರೆ. ಅದರೆ ಕಲ್ಲಣಬೆಗಳು ಸಾಕಷ್ಟುಪ್ರಮಾಣದಲ್ಲಿ ಸಿಗುತ್ತಿಲ್ಲವಾದ ಕಾರಣ ಬುಕ್ಕಿಂಗ್‌ ಮಾಡುವುದಿಲ್ಲ ಎನ್ನುತ್ತಾರೆ ಕಾರ್ಕಳ ವ್ಯಾಪಾರಿ ಮಹಾವೀರ ಜೈನ್‌.

ಎಚ್ಚರಿಕೆ ಅಗತ್ಯ: ಮಳೆ ಬೀಳುತ್ತಿದ್ದಂತೆ ಕಾಡಿನಲ್ಲಿ, ಪೊದೆಗಳಲ್ಲಿ ಅಣಬೆಗಳು ಭೂಮಿಯಿಂದ ಮೇಲೇಳುತ್ತವೆ. ಆದರೆ ಹೀಗೆ ಕಂಡಕಂಡ ಅಣಬೆಗಳೆಲ್ಲವೂ ಸೇವಿಸಲು ಯೋಗ್ಯವಲ್ಲ. ಬಿಳಿ ಬಣ್ಣದ ಕಲ್ಲಣಬೆಯನ್ನು ಸೇವಿಸಬಹುದು. ಆದರೆ ತಿಳಿ ಕಂದು ಬಣ್ಣದಲ್ಲಿರುವ ಕಲ್ಲಣಬೆಗಳು ವಿಷಕಾರಿಯಾಗಬಹುದು. ಹೀಗಾಗಿ ಸೇವಿಸುವ ಮುನ್ನ ಎಚ್ಚರಿಕೆ ವಹಿಸುವುದ ಅಗತ್ಯ.

Belthangady: ವಿಷಪೂರಿತ ಅಣಬೆ ಅಡುಗೆ ಸೇವನೆ: ಕುಟುಂಬದ ಇಬ್ಬರ ಸಾವು

ಕಳೆದ ಒಂದು ವಾರದಲ್ಲಿ ಒಂದು ಬಾರಿ ಮಾತ್ರ ಕಲ್ಲಣಬೆ ಮಾರಾಟಕ್ಕೆ ಬಂದಿದೆ. ಸೇರೊಂದಕ್ಕೆ 1500 ರು. ದರಕ್ಕೆ ಮಾರಾಟವಾಗಿದೆ. ಅಣಬೆಗಳು ಹೆಚ್ಚು ಸಿಕ್ಕಿದರೆ ದರವೂ ಇಳಿಯುತ್ತದೆ. ಆದರೆ ಬೇಡಿಕೆ ಹೆಚ್ಚಿದ್ದರೆ ದರ ಮತ್ತೂ ಏರುವ ಸಾಧ್ಯತೆಯೂ ಇರುತ್ತದೆ

- ಪ್ರಮೋದ್‌ ಹೆಗ್ಡೆ ಎಣ್ಣೆಹೊಳೆ, ವ್ಯಾಪಾರಸ್ಥರು ಕಾರ್ಕಳ

ಅತಿ ರುಚಿಕರವಾದ ಕಲ್ಲಣಬೆಗಳಲ್ಲಿ ಪೌಷ್ಟಿಕಾಂಶ ಹೇರಳವಾಗಿದೆ. ಯಾವುದೇ ರಾಸಾಯನಿಕ ಮಿಶ್ರಿತವಲ್ಲದ ಆಹಾರ ಇದಾಗಿದೆ. ಈ ಬಾರಿ ದುಬಾರಿಯಾಗಿದ್ದರೂ ಪರವಾಗಿಲ್ಲ, ವರ್ತಕರಲ್ಲಿ ಮೊದಲೇ ಬುಕ್ಕಿಂಗ್‌ ಮಾಡಿದ್ದೇವೆ

- ಮಾಲಾಶ್ರೀ ಹೆಗ್ಡೆ ಬಜಕಳ, ನಿಟ್ಟೆ

ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಲ್ಲಿ ಹೆಚ್ಚಾಗಿ ಸಿಗುವ ಈ ವಿಶಿಷ್ಟಕಲ್ಲಣಬೆಗಳು ವಿಶಿಷ್ಟರುಚಿ ಹೊಂದಿರುತ್ತವೆ. ಕಲ್ಲಣಬೆಗಳಿಂದ ಸಾಂಬಾರು, ಸುಕ್ಕ, ಪಲ್ಯ ಮಾಡಲು ಬಳಸುತ್ತಾರೆ. ಬೋವಿನ ಮರದ ಬುಡಗಳ ಭಾಗಗಳಲ್ಲಿ ಹೆಚ್ಚಾಗಿ ಇವು ಕಾಣ ಸಿಗುತ್ತವೆ. ಕಲ್ಲಣಬೆಗಳನ್ನು ತುಳುವಿನಲ್ಲಿ ಕಲಲಾಂಬು ಎಂದು ಕರೆಯುತ್ತಾರೆ. ಈ ಕಲ್ಲಣಬೆಗಳು ಒಂದೇ ದಿನಕ್ಕೆ ಮಾತ್ರ ಬಾಳಿಕೆ ಬರುತ್ತವೆ. ಮಾರನೆ ದಿನ ಕಪ್ಪು ಬಣ್ಣಕ್ಕೆ ತಿರುಗಿ ಹಾಳಾಗುತ್ತವೆ.

click me!