ಉತ್ತರಕನ್ನಡದಲ್ಲೇ ಬೃಹತ್ ಯೋಜನೆ: ₹220 ಕೋಟಿ ವೆಚ್ಚದ, 46 ಕೆರೆಗಳಿಗೆ ನೀರುಣಿಸುವ ಕಾಳಿ ನದಿ ನೀರಾವರಿ ಯೋಜನೆ ಶೀಘ್ರ ಆರಂಭ!

Kannadaprabha News   | Kannada Prabha
Published : Oct 14, 2026, 08:55 AM IST
Kali River Irrigation Project

ಸಾರಾಂಶ

ಹಳಿಯಾಳ ತಾಲೂಕಿನ ಕುಡಿಯುವ ನೀರು ಮತ್ತು ಅಂತರ್ಜಲ ವೃದ್ಧಿಸುವ 220 ಕೋಟಿ ರೂ. ವೆಚ್ಚದ ಕಾಳಿ ನದಿ ನೀರಾವರಿ ಯೋಜನೆಯ ಕಾಮಗಾರಿಯನ್ನು ಶಾಸಕ ಆರ್.ವಿ. ದೇಶಪಾಂಡೆ ಪರಿಶೀಲಿಸಿದರು. ಈ ಯೋಜನೆಯಿಂದ 46 ಕೆರೆಗಳು ಮತ್ತು 19 ಬಾಂದಾರುಗಳಿಗೆ ನೀರು ಪೂರೈಕೆ, ಪ್ರಾಯೋಗಿಕವಾಗಿ ನೀರು ತುಂಬಿಸುವ ಕಾರ್ಯ ಆರಂಭಗೊಂಡಿದೆ.

ಹಳಿಯಾಳ(ಅ.14): ಕಾಳಿ ನದಿ ನೀರಾವರಿ ಯೋಜನೆ(Kali River Irrigation Project) ಸಂಪೂರ್ಣವಾಗಿ ಕಾರ್ಯಾರಂಭಗೊಂಡರೆ ತಾಲೂಕಿನ ಕುಡಿಯುವ ನೀರು ಮತ್ತು ಅಂತರ್ಜಲ ವೃದ್ಧಿಗೆ ಬಹುದೊಡ್ಡ ಕೊಡುಗೆಯನ್ನು ನೀಡಲಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ(R.V. Deshpande) ಹೇಳಿದರು.

ಕಾಳಿನದಿ ನೀರಾವರಿ ಯೋಜನೆ ಕಾಮಗಾರಿ ಪರಿಶೀಲನೆ

ಮಂಗಳವಾರ ತಾಲೂಕಿನ ಯಡೋಗಾ ಗ್ರಾಮಕ್ಕೆ ಭೇಟಿ ನೀಡಿದ ಅವರು, ಗ್ರಾಮದಲ್ಲಿರುವ ಪಂಪ್ ಹೌಸ್‌ಗೆ ತೆರಳಿ ಕಾಳಿನದಿ ನೀರಾವರಿ ಯೋಜನೆಯ ಅಂತಿಮ ಹಂತದ ಕಾಮಗಾರಿಯನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಜನವರಿಯಿಂದ ಜೂನ್‌ವರೆಗೆ 151 ದಿನಗಳ ಕಾಲ ಕೆರೆಗೆ ನೀರು

ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಯೋಜನೆ ಕಾರ್ಯಾರಂಭದಲ್ಲಿ ವಿಳಂಬವಾಗಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಯೋಜನೆಗೆ 0.812 ಟಿಎಂಸಿ ನೀರು ಅಗತ್ಯವಿದ್ದು, ಪ್ರತಿವರ್ಷ ಜನವರಿಯಿಂದ ಜೂನ್‌ವರೆಗೆ 151 ದಿನಗಳ ಕಾಲ ಪಂಪಿಂಗ್ ಮೂಲಕ ಕೆರೆ- ಬಾಂದಾರುಗಳನ್ನು ತುಂಬಿಸಲಾಗುತ್ತದೆ ಎಂದರು.ತಾಲೂಕಿನ 46 ಕೆರೆಗಳು ಮತ್ತು 19 ಬಾಂದಾರುಗಳಿಗೆ ನೀರು ಪೂರೈಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಮಹತ್ವಾಕಾಂಕ್ಷಿ ಏತ ನೀರಾವರಿ ಯೋಜನೆ ಇದಾಗಿದೆ. ಈಗಾಗಲೇ ಯೋಜನೆಯ ವ್ಯಾಪ್ತಿಯ ಅರ್ಧದಷ್ಟು ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ತುಂಬಿಸುವ ಕಾರ್ಯ ಆರಂಭಗೊಂಡಿದೆ. ಎಲ್ಲಿ ನೀರು ಪೋಲಾಗುತ್ತಿದೆ, ಪೈಪ್‌ಗಳು ಎಲ್ಲಿ ಲೀಕೇಜ್ ಆಗಿವೆ ಎಂಬುದನ್ನು ಪರಿಶೀಲಿಸಿ ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದರು.

ಜಿಲ್ಲೆಯಲ್ಲೇ ಬೃಹತ್ ನೀರಾವರಿ ಯೋಜನೆ

₹220 ಕೋಟಿ ವೆಚ್ಚದ ಈ ನೀರಾವರಿ ಯೋಜನೆ ಜಿಲ್ಲೆಯಲ್ಲೇ ಅಥವಾ ಈ ಭಾಗದಲ್ಲಿ ಕೈಗೊಳ್ಳಲಾಗಿರುವ ಅತಿದೊಡ್ಡ ಬೃಹತ್ ಯೋಜನೆ ಇದಾಗಿದೆ. ಯೋಜನೆಯಡಿ ತಾಲೂಕಿನ ಒಟ್ಟು 7150 ಹೆಕ್ಟೇರ್ ನೀರಾವರಿ ಪ್ರದೇಶದ ಪೈಕಿ 6000 ಹೆಕ್ಟೇರ್ ಪ್ರದೇಶವು ಕೆರೆಗಳು ಹಾಗೂ ಬಾಂದಾರುಗಳ ವ್ಯಾಪ್ತಿಯಲ್ಲಿವೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಯುವ ಕಾಂಗ್ರೆಸ್ ಮುಖಂಡ ರವಿ ತೋರಣಗಟ್ಟಿ, ವೆಂಕಟೇಶ ಸಾಳುಂಕೆ ಹಾಗೂ ಯಡೋಗಾ ಗ್ರಾಮಸ್ಥರು ಹಾಗೂ ನೀರಾವರಿ ಯೋಜನೆಯ ಗುತ್ತಿಗೆಯನ್ನು ಪಡೆದ ಕಂಪನಿಯ ತಂತ್ರಜ್ಞರು ಇದ್ದರು.

ಪರಿಶೀಲನೆ: ಇದೇ ಸಂದರ್ಭದಲ್ಲಿ ಪಂಪ್ ಹೌಸನ್ನು ಪರಿಶೀಲಿಸಿದ ಶಾಸಕರು, ಯೋಜನೆಯ ಪ್ರಗತಿಯ ಕುರಿತು ಪಂಪ್ ಹೌಸನ ತಾಂತ್ರಿಕ ಸಿಬ್ಬಂದಿಗಳೊಂದಿಗೆ ಮಾಹಿತಿ ಕಲೆಹಾಕಿ, ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ಹಾಗೂ ನಿಗದಿತ ಅವಧಿಯಲ್ಲಿ ಮುಕ್ತಾಯಗೊಳಿಸುವಂತೆ ತಾಕೀತು ಮಾಡಿದರು.

ನಂತರ ಯಡೋಗಾ ಹಾಗೂ ಸಮೀಪದ ಗ್ರಾಮಗಳ ರೈತರು ಹಾಗೂ ಗ್ರಾಮಸ್ಥರ ಅಹವಾಲು ಆಲಿಸಿದರು. ಬಳಿಕ ಪಟ್ಟಣಕ್ಕೆ ತೆರಳುವಾಗ ಮಾರ್ಗಮಧ್ಯೆ ಯಡೋಗಾ ಸೇತುವೆ ಬಳಿ ವಾಹನದಿಂದ ಇಳಿದು ತಟ್ಟಿಹಳ್ಳಕ್ಕೆ ಪ್ರಾಯೋಗಿಕವಾಗಿ ಬಿಡಲಾಗುತ್ತಿರುವ ಕಾಳಿನದಿ ನೀರಿನ ವೇಗವನ್ನು ವೀಕ್ಷಿಸಿದರು.

PREV
Read more Articles on
click me!

Recommended Stories

ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು’ ನಾಮಕರಣ: ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನ
Belagavi: ಇದೇ ಅಕ್ಟೋಬರ್ 17ರಂದು ಶಿವಂ ಅಸೋಸಿಯೇಟ್ಸ್‌ ವಸ್ತುಗಳ ಬಹಿರಂಗ ಹರಾಜು!