ಪ್ರಧಾನಿ ಮೋದಿಯಿಂದ ರಾಜ್ಯಕ್ಕೆ ಮಲತಾಯಿ ಧೋರಣೆ: ಬೃಹತ್ ಪ್ರತಿಭಟನೆ

By Suvarna NewsFirst Published Jan 4, 2020, 7:25 AM IST
Highlights

ಅತಿವೃಷ್ಟಿ, ಮಹದಾಯಿ ಚಕಾರ ಎತ್ತದ ಪ್ರಧಾನಿ| ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ಕಳಸಾ- ಬಂಡೂರಿ ಹೋರಾಟಗಾರರ ಆಕ್ರೋಶ| ಕೇಂದ್ರ ಸರ್ಕಾರ ಹಾಗೂ ಪ್ರಧಾನಿಗಳ ವಿರುದ್ಧ ಘೋಷಣೆ |ಕೂಡಲೇ ಕೇಂದ್ರ ಸರ್ಕಾರ ಉತ್ತರ ಕರ್ನಾಟಕದ ಜನರ ಕಷ್ಟಕ್ಕೆ ಸ್ಪಂದಿಸಲಿ|

ಹುಬ್ಬಳ್ಳಿ[ಜ.04]: ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದರೂ ಕಳಸಾ- ಬಂಡೂರಿ ಬಗ್ಗೆ ಚಕಾರ ಎತ್ತಲಿಲ್ಲ. ಅತಿವೃಷ್ಟಿ ಪರಿಹಾರ ವಿತರಣೆ ಬಗ್ಗೆ ಮಾತನಾಡಲಿಲ್ಲ ಎಂದು ಆರೋಪಿಸಿ ಕಳಸಾ- ಬಂಡೂರಿ ರೈತ ಹೋರಾಟ ಸಮಿತಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು. ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿತು.

ಇಲ್ಲಿನ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಜಮೆಯಾದ ಹೋರಾಟಗಾರರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿಗಳ ವಿರುದ್ಧ ಘೋಷಣೆ ಕೂಗಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಹಲವಾರು ಕುಟುಂಬಗಳು ಮನೆ ಕಳೆದುಕೊಂಡಿದ್ದಾರೆ. ಜನಜೀವನ ಈಗಲೂ ಸಹಜ ಸ್ಥಿತಿಗೆ ಬರುತ್ತಿಲ್ಲ. ಈಗಲೂ ಹಲವಾರು ಕಡೆಗಳಲ್ಲಿ ಕಾಳಜಿ ಕೇಂದ್ರಗಳಲ್ಲೇ ವಾಸವಾಗಿದ್ದಾರೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಬಗ್ಗೆ ನಿಷ್ಕಾಳಜಿ ತೋರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಪರಿಹಾರ ನೀಡದೇ ಮಲತಾಯಿ ಧೋರಣೆ ತೋರಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ತುಮಕೂರಿನಲ್ಲಿ ನಡೆದ ರೈತರಿಗೆ ಕಿಸಾನ್‌ ಸಮ್ಮಾನ ಹಣ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಪರಿಹಾರದ ಬಗ್ಗೆ ಮನವಿ ಮಾಡಿದ್ದರೂ ಕೂಡ ಅದಕ್ಕೆ ಉತ್ತರ ನೀಡಲಿಲ್ಲ. ಮಹದಾಯಿ, ಕಳಸಾ- ಬಂಡೂರಿ ಬಗ್ಗೆಯೂ ಚಕಾರ ಎತ್ತಲಿಲ್ಲ ಎಂದರು.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರ ಉತ್ತರ ಕರ್ನಾಟಕದ ಜನತೆಗೆ ಸ್ಪಂದನೆ ಮಾಡುವಲ್ಲಿ ವಿಫಲವಾಗಿದೆ. 45,000 ಕೋಟಿ ರು. ಅತಿವೃಷ್ಟಿಯಿಂದ ಹಾಳಾಗಿದ್ದು, ಸರಕಾರ ಕೇವಲ ಕಾಟಾಚಾರಕ್ಕೆ 10,000 ರು.ಗಳನ್ನು ಕುಟುಂಬಗಳಿಗೆ ನೀಡಿದೆ.

ಕೂಡಲೇ ಕೇಂದ್ರ ಸರ್ಕಾರ ಉತ್ತರ ಕರ್ನಾಟಕದ ಜನರ ಕಷ್ಟಕ್ಕೆ ಸ್ಪಂದಿಸಲಿ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತೆ. ಮಹದಾಯಿ ವಿಷಯವಾಗಿಯೂ ಶೀಘ್ರವೇ ಕ್ರಮ ಕೈಗೊಳ್ಳಬೇಕು. ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು. ಬಳಿಕ ಪ್ರಧಾನಿ ಮೋದಿ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಸಿದ್ದಣ್ಣ ತೇಜಿ, ಬಾಬಾಜಾನ ಮುಧೋಳ, ಅನ್ವರ ಮುಧೋಳ, ವಿಜಯ ಗುಂಟ್ರಾಳ, ರಮೇಶ ಬೋಸಲೆ, ಎಂ.ಬಿ.ಪಮ್ಮಾರ, ಎಸ್‌.ಎ.ಫಿರಜಾದೆ, ಪರೀದಾ ಬೆಂಗಳೂರಿ ಸೇರಿದಂತೆ ಹಲವರು ಇದ್ದರು.
 

click me!