ದೇಶದ್ರೋಹಿಗಳ ಹೆಡೆಮುರಿ ಕಟ್ತೇವೆ| ವಾರೀಸ್ ಪಠಾಣ್‌ಗೆ 2ನೇ ನೋಟಿಸ್: ಪೊಲೀಸ್ ಕಮೀಷನರ್ ನಾಗರಾಜ್| ವಾರೀಸ್ ವಿರುದ್ಧ ಪ್ರಚೋದನಕಾರಿ ಹೇಳಿಕೆ ಸಂಬಂಧ ಪ್ರಕರಣ ದಾಖಲು|
ಕಲಬುರಗಿ(ಮಾ.05): ದೇಶದ್ರೋಹದ ಪ್ರಕರಣಗಳಲ್ಲಿ ಚುರುಕಾಗಿ ಕೆಲಸ ಮಾಡುತ್ತಿಲ್ಲವೆಂದು ಕಲಬುರಗಿ ಪೊಲೀಸ್ ವಿರುದ್ಧ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಸುದ್ದಿಗೋಷ್ಠಿಯಲ್ಲಿ ಆರೋಪಿದ್ದಕ್ಕೆ ನಗರ ಪೊಲೀಸ್ ಆಯುಕ್ತ ಎಂ ಎನ್ ನಾಗರಾಜ್ ದೇಶ ದ್ರೋಹದ ಪ್ರಕರಣಗಳ ತನಿಖೆಯಲ್ಲಿ ಪೊಲೀಸರು ಹಿಂದೆ ಬಿದ್ದಿಲ್ಲ. ಪ್ರಕರಣಗಳ ತನಿಖೆಯ ಸ್ಥಿತಿಗತಿ, ರೌಡಿಶೀಟ್, ಬಂದೂಕು ಲೈಸನ್ಸ್‌ದಾರರ ಅಂಕಿ-ಸಂಖ್ಯೆ ಸಮೇತ ಮಾಹಿತಿ ಪೂರ್ಣ ಪ್ರತ್ಯುತ್ತರ ನೀಡಿದ್ದಾರೆ.
ದೇಶದ್ರೋಹಿಗಳ ವಿರುದ್ಧ ಪೊಲೀಸರು ಸುಮ್ಮನಿಲ್ಲ, ಕಾನೂನು ಕ್ರಮಕ್ಕೆ ತಾವು ಸಿದ್ಧ. ನಗರದಲ್ಲಿನ ಪೀರ್ ಬಂಗಾಲಿ ದರ್ಗಾ ಮೈದಾನದಲ್ಲಿ ನಡೆದ ಎಐಎಂಐಎಂ ಸಮಾವೇಶದಲ್ಲಿ ಪಕ್ಷದ ವಕ್ತಾರ ವಾರೀಸ್ ಪಠಾಣ ಮಾಡಿರುವ ಕೋಮು ದ್ವೇಷದ ಭಾಷಣದ ಹಿನ್ನೆಲೆಯಲ್ಲಿ ಆತನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದ್ದು ವಿಚಾರಣೆ ಚಾಲ್ತಿಯಲ್ಲಿದೆ ಎಂದು ಹೇಳಿದ್ದಾರೆ.
ವಾಕೀಸ್ ಪಠಾಣ್‌ಗೆ 2ನೇ ನೊಟೀಸ್ ಜಾರಿ:
ಈಗಾಗಲೇ ಮಾ.1ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೀಡಿದ್ದ ನೊಟೀಸ್‌ಗೆ ವಾರೀಸ್ ಸ್ಪಂದಿಸಿಲ್ಲ. ಮತ್ತೆ ಮಾ.8ಕ್ಕೆ ಹಾಜರಾಗುವಂತೆ ಎರಡನೇಯ ಬಾರಿಗೆ ನೊಟೀಸ್ ನೀಡಲಾಗಿದೆ. ಈ ಪ್ರಕರಣದ ತನಿಖೆಯನ್ನು ಗ್ರಾಮೀಣ ಠಾಣೆ ಪಿಐ ವಹಿಸಿಕೊಂಡಿದ್ದಾರೆ. ವಾರೀಸ್ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆಂಬ ದೂರಿನ ಅಡಿಯಲ್ಲಿ ಐಪಿಸಿ ಕಲಂ 117, 153, 153 (ಎ) ಅಡಿ ಪ್ರಕರಣ ದಾಖಲಾಗಿದೆ ಎಂದು ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈಗಾಗಲೇ ಸದರಿ ಸಮಾರಂಭ ಆಯೋಜಕರಾಗಿದ್ದ ಆ ಪಕ್ಷದ ಜಿಲ್ಲಾ ಮುಖಂಡ ಅಬ್ದುಲ್ ರಹೀಂ ಮಿರ್ಚಿ, ಗುರುಶಾಂತ ಪಟ್ಟೇದಾರ್ ಸೇರಿದಂತೆ 14 ಜನರ ವಿಚಾರಣೆ ಮಾಡಲಾಗಿದೆ ಎಂದೂ ಅವರು ವಿವರಿಸಿದ್ದಾರೆ.
ಪಾಕ್ ಜಿಂದಾಬಾದ್ ಎಂದವರ ವಿರುದ್ಧವೂ ಕಾನೂನು ಕ್ರಮ:
ನಗರದ ಚೌಕ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸಾತ ಗುಂಬಜ್ ಕ್ರಾಸ್ ಹತ್ತಿರದ ರಾಧಾಕೃಷ್ಣ ಗುತ್ತೇದಾರ್ ಹಾಗರಗಿಯವರ ಕಟ್ಟಡದ ಶೆಟರ್ ಅಂಗಡಿಯ ಬಲಭಾಗದ ಲ್ಲಿ ಕಪ್ಪು ಬಣ್ಣದಿಂದ ಪಾಕಿಸ್ತಾನ್ ಪರ ಹೇಳಿಕೆ, ಪ್ರಧಾನಿ ಮೋದಿಯವರ ವಿರುದ್ಧ ಅವಾಚ್ಯ ನಿಂದನೆಯ ಹೇಳಿಕೆ ಬರೆಯಲಾದಂತಹ ಪ್ರಕರಣದಲ್ಲಿಯೂ ಚೌಕ್ ಠಾಣೆಯಲ್ಲಿ ಐಪಿಸಿ ಕಲಂ 153 (ಎಂ), 153 (ಬಿ), 505 (೨) ಹಾಗೂ 124 (ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಸೂಕ್ಷ್ಮತೆ ಅರಿತು ಆರೋಪಿಗಳ ಪತ್ತೆ ಕುರಿತಂತೆ ಎಸಿಪಿ ಬಿ ಉಪ ವಿಭಾಗ ಇವರಿಗೇ ತನಿಖಾಧಿಕಾರಿ ಯನ್ನಾಗಿ ನೇಮಕ ಮಾಡಲಾಗಿದೆ. ಎಸಿಪಿಯವರ ನೇತೃತ್ವದಲ್ಲಿಯೇ 5 ಪೊಲೀಸ್ ಇನ್ಸಪೆಕ್ಟರ್‌ಗಳನ್ನು ಒಳಗೊಂಡಂ ತೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಕಾನೂನು- ಸುವ್ಯವಸ್ಥೆ ಡಿಸಿಪಿ ಇದರ ಮೇಲುಸ್ತುವಾರಿ ವಹಿಸದ್ದಾರೆ. ಕೂಡಲೆ ಸದರಿ ಪ್ರಕರಣ ಭೇದಿಸಲಾಗುತ್ತದೆ ಎಂದೂ ನಾಗರಾಜ್ ತಮ್ಮ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಕೇವಲ 4 ರೌಡಿ ಶೀಟ್ ಸಮಾಪನೆ:
ತಾವು ಕಲಬುರಗಿ ಪೊಲೀಸ್ ಆಯುಕ್ತಾಲಯದ ಆಯುಕ್ತರಾಗಿ ಅಧಿಕಾರವಹಿಸಿಕೊಂಡ ನಂತರ ಇಲ್ಲಿಯವರೆಗೂ ಕೇವಲ 4 ರೌಡಿ ಶೀಟರ್‌ಗಳ ಮೇಲಿನ ರೌಡಿ ಶೀಟ್ ಸಮಾಪನೆ ಮಾಡಿದ್ದಾಗಿ ಹೇಳಿರುವ ನಾಗರಾಜ್ ಈ ವಿಚಾರದಲ್ಲಿ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಸೆ. 2019 ರಿಂದ ಇಲ್ಲಿಯವರೆಗೂ 4 ರೌಡಿ ಶೀಟ್‌ಗಳ ಮುಕ್ತಾಯ ಮಾಡಲಾಗಿದೆಯೇ ವಿನಹಃ ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಇಲ್ಲ. ಉಪ ವಿಭಾಗ ಎ ರಲ್ಲಿ 762, ಬಿ ರಲ್ಲಿ 339, ಸಿ ರಲ್ಲಿ 327 ಸೇರಿದಂತೆ ನಗರದಲ್ಲಿ 1428 ರೌಡಿಶೀಟರ್‌ಗಳಿದ್ದಾರೆ. ಜ. 2019ರಿಂದ ಸೆಪ್ಟೆಂಬರ್‌ವರೆಗೂ ಎಸ್ಪಿಯವರು ತಮ್ಮ ವ್ಯಾಪ್ತಿಯಲ್ಲಿ 7 ರೌಡಿ ಶೀಟ್‌ಗಳನ್ನು ಮುಕ್ತಾಯ ಮಾಡಿದ್ದಾರೆ. ತಾವು ಬಂದ ನಂತರ ಕೇವಲ 4 ರೌಡಿ ಶೀಟ್ ಮುಕ್ತಾಯ ಮಾಡಿದ್ದಾಗಿ ನಾಗರಾಜ್ ತಿಳಿಸಿದ್ದಾರೆ.
ಬಂದೂಕು ಲೈಸನ್ಸ್‌ನಲ್ಲೂ ಬಿಗಿ:
ಜಿಲ್ಲೆಯಲ್ಲಿ ಒಟ್ಟು 2739 ಆಯುಧ ಪರವಾನಿಗೆದಾರರು ಇದ್ದಾರೆ. ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ 584 ಆಯುಧ ಪರವಾನಿಗೆದಾರರು ಇದ್ದಾರೆ. ಜಿಲ್ಲಾಧಿಕಾರಿ ಕಚೇರಿಯಿಂದ ಬಂದ 34 ಅರ್ಜಿಗಳ ಪಕಿ ಪರಿಶೀಲನೆ ನಡೆಸಿ 10ಕ್ಕೆ ಹಾಗೂ ನೇರವಾಗಿ ಕಮೀಷ್ನರೇಟ್‌ಗೆ ಬಂದ 94 ಅರ್ಜಿಗಳಲ್ಲಿ 29 ಜನರಿಗೆ ಬಂದೂಕು ಪರವಾನಿಗೆ ನೀಡಲಾಗಿದೆ. ಮಾಧ್ಯಮಗಳಲ್ಲಿ ಬಂದಂತೆ ತಾವು 300 ಜನರಿಗೆ ಆಯುಧ ಪರವಾನಿಗೆ ನೀಡಿಲ್ಲ, ಈ ವಿಚಾರದಲ್ಲಿ ಅಂಕಿ-ಅಂಶಗಳೇ ಕನ್ನಡಿ ಎಂದು ನಾಗರಾಜ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಕಲಬುರಗಿ ಜಿಲ್ಲೆ ಮತ್ತು ಆಯುಕ್ತಾಲಯ ಆದ ನಂತರದ ಅಪರಾಧ ಪ್ರಕರಣಗಳ ನೋಟದ ಪರಾಮರ್ಶೆಯ ಮಾಹಿತಿ ಕೆಲವೇ ದಿನಗಳಲ್ಲಿ ಸಿದ್ಧಪಡಿಸಿ ನೀಡಲಾಗುತ್ತದೆ. ಕಾನೂನು ಸುವ್ಯವಸ್ಥೆ ಕಲಬುರಗಿ ಮಹಾ ನಗರದಲ್ಲಿ ಅತ್ಯುತ್ತಮ ವಾಗಿದೆ. ಮುಂದಿನ ದಿನಗಳಲ್ಲಿ ಬರುವ ಹೋಳಿ ಹುಣ್ಣಿಮೆಯ ಹಬ್ಬದಲ್ಲಿಯೂ ಅಹಿತಕರ ಘಟನೆಗಳು ಜರುಗದಂತೆ ಮುಲಾಜಿಲ್ಲದೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.