
ಸಾಲಿಗ್ರಾಮ/ ಬೆಂಗಳೂರು (ನ. 26) ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯು ನೀಡುವ ಕಾಳಿಂಗ ನಾವಡ ಪ್ರಶಸ್ತಿ 2020 ರ ಕಾರ್ಯಕ್ರಮವು ಕಾಳಿಂಗ ನಾವಡರ ಮೂಲ ಮನೆಯಾದ ಗುಂಡ್ಮಿಯ ಭಾಗವತರ ಮನೆಯಲ್ಲಿ ಜರುಗಿತು.
ಯಕ್ಷಗಾನದ ಹಿರಿಯ ಕಲಾವಿದರಾದ ಹಂದಟ್ಟು ಗೋವಿಂದ ಉರಾಳರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿರಿಯ ಪುರೋಹಿತರಾದ ವೆಂಕಪ್ಪಯ್ಯ ಭಟ್ಟರು, ಕನ್ನಡ ಪ್ರಾಧ್ಯಾಪಕ ಡಾ.ಶ್ರೀಕಾಂತ್ ಸಿದ್ದಾಪುರ, ಯಕ್ಷಗಾನ ಭಾಗವತರಾದ ಸುರೇಂದ್ರ ಫಣಿಯೂರ್, ಹಂಗಾರಕಟ್ಟೆ ಯಕ್ಷ ಗಾನ ಕಲಾಕೇಂದ್ರದ ಕಾರ್ಯದರ್ಶಿಗ ರಾಜಶೇಖರ ಹೆಬ್ಬಾರ್, ಕಾಳಿಂಗ ನಾವಡರ ಸಹೋದರ ಶ್ರೀ ಗಣಪಯ್ಯ ನಾವಡ ಈ ಸಂದರ್ಭದಲ್ಲಿ ಹಾಜರಿದ್ದರು.
ಕಲಾಕದಂಬ ಆರ್ಟ್ ಸೆಂಟರ್ ನ ಅಂಬರೀಷ ಭಟ್ ಹಾಗೂ ಕಲಾಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರಾದ ಡಾ.ರಾಧಾಕೃಷ್ಣ ಉರಾಳ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸಭಾ ಕಾರ್ಯಕ್ರಮದ ನಂತರ ಲಂಬೋದರ ಹೆಗ್ಡೆ ಹಾಗೂ ಸುಜಯೀಂದ್ರ ಹಂದೆ ತಂಡದವರು ಯಕ್ಷ ಗಾನ ವೈಭವದ ಮೂಲಕ ಪ್ರೇಕ್ಷಕರ ಮನರಂಜಿಸಿದರು. ಈ ಸಂಪೂರ್ಣ ಕಾರ್ಯಕ್ರಮದ ನಿರ್ವಹಣೆಯನ್ನು ಮುರಳೀಧರ ನಾವಡ ಹಾಗೂ ವಿಶ್ವನಾಥ ಉರಾಳರು ನಿರ್ವಹಿಸಿದರು.
ಕಾಳಿಂಗ ನಾವಡರ ಕಂಠಸಿರಿಯನ್ನು ಯಕ್ಷಪ್ರೇಮಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ರಂಗದ ಮೇಲೆ ತಂದ ಪ್ರಯೋಗಗಳು ಇಂದಿಗೂ ಚಿರಸ್ಥಾಯಿಯಾಗಿ ಉಳಿದುಕೊಂಡಿವೆ.