* ನಾನು ಹಣಕ್ಕೆ ಬೇಡಿಕೆ ಇಡದೆ ಒಳ್ಳೆ ಸ್ಥಾನ ಕೇಳಿದ್ದೆ
* ಕೃಷಿ ಖಾತೆ ಕೊಟ್ಟರೆ ಚನ್ನಾಗಿ ನಿಭಾಯಿಸಿಕೊಂಡು ಹೋಗ್ತೇನೆ
* ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶ್ರೀಮಂತ ಪಾಟೀಲ
ಕಾಗವಾಡ(ಸೆ.12): ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರುವಾಗ ನನಗೆ ಹಣದ ಆಫರ್ ಬಂದಿತ್ತು. ಆದರೆ ಯಾವುದೇ ಹಣದ ಬೇಡಿಕೆ ಇಡದೆ ಕ್ಷೇತ್ರದ ಹಾಗೂ ಜನತೆಯ ಸೇವೆ ಮಾಡಲು ನನಗೆ ಒಳ್ಳೆಯ ಸ್ಥಾನಮಾನ ನೀಡುವಂತೆ ಕೇಳಿಕೊಂಡಿದ್ದೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಅವರು ಶನಿವಾರ ಬೆಳಗಾವಿ ಜಿಲ್ಲೆಯ ಐನಾಪುರ ಪಟ್ಟಣದಲ್ಲಿ ಒಂದು ಕೋಟಿ ರು. ಅನುದಾನದಡಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ ವೇಳೆ ಮಾಧ್ಯಮದ ಜೊತೆ ಮಾತನಾಡಿದದರು.
undefined
ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರುವಾಗ ಹಣದ ಆಫರ್ ಬಂದದ್ದು ನಿಜ. ಆದರೆ ಹಣ ತೆಗೆದುಕೊಳ್ಳದೆ ನನಗೆ ಒಳ್ಳೆಯ ಸ್ಥಾನಮಾನ ನೀಡುವಂತೆ ಹೇಳಿದ್ದೆ. ಅದರಂತೆ ನನಗೆ ಯಡಿಯೂರಪ್ಪನವರ ಮಂತ್ರಿ ಮಂಡಳದಲ್ಲಿ ಕೈಮಗ್ಗ ಹಾಗೂ ಜವಳಿ ಮತ್ತು ಅಲ್ಪಸಂಖ್ಯಾತರ ಖಾತೆ ಕೊಟ್ಟಿದ್ದರು. ಆದರೆ ಈಗ ಬಸವರಾಜ ಬೊಮ್ಮಾಯಿ ಅವರು ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದಾರೆ. ಮುಂಬರುವ ದಿನಮಾನಗಳಲ್ಲಿ ಮತ್ತೇ ಸಚಿವ ಸ್ಥಾನ ಕೊಡುತ್ತಾರೆ ಎಂಬ ಭರವಸೆಯನ್ನು ಹೈಕಮಾಂಡ್ ನೀಡಿದೆ ಎಂದರು.
ನೇಮಕವಾದರೂ ಆದೇಶವಿಲ್ಲ: ಸಚಿವ ಶ್ರೀಮಂತ ಪಾಟೀಲ ಮನೆ ಎದುರು ಪ್ರತಿಭಟನೆ
ಈ ವಿಚಾರದಲ್ಲಿ ಹಿರಿಯ ನಾಯಕರೊಟ್ಟಿಗೆ ಚರ್ಚಿಸಿದ್ದೇನೆ. ನನಗೆ ಸಚಿವ ಸ್ಥಾನ ನೀಡುವಂತೆ ಮರಾಠ ಸಮುದಾಯ ಕೂಡ ಒತ್ತಾಯ ಮಾಡುತ್ತಿದೆ. ವರಿಷ್ಠರು ಮುಂಬರುವ ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಕೃಷಿ ಇಲಾಖೆ ಬೇಡಿಕೆ:
ಕಳೆದ 20 ವರ್ಷಗಳಿಂದ ಒಕ್ಕಲುತನ ಮಾಡುತ್ತಾ ಬಂದಿದ್ದೇನೆ. ಕೃಷಿ ಪದವೀಧರನೂ ಇದ್ದೇನೆ. ನನಗೆ ಆ ವೇಳೆ ಕೃಷಿ ಇಲಾಖೆ ಕೊಡಬೇಕಾಗಿತ್ತು. ನನಗೆ ಕೊಟ್ಟ ಜವಳಿ ಹಾಗೂ ಅಲ್ಪಸಂಖ್ಯಾತರ ಖಾತೆಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಇನ್ನು ಮುಂದೆ ಬಸವರಾಜ ಬೊಮ್ಮಾಯಿ ಅವರು ಸಚಿವ ಸ್ಥಾನ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಕೃಷಿ ಖಾತೆ ಕೊಟ್ಟರೆ ಚನ್ನಾಗಿ ನಿಭಾಯಿಸಿಕೊಂಡು ಹೋಗುವುದಾಗಿ ಶ್ರೀಮಂತ ಪಾಟೀಲ ಹೇಳಿದರು.