ಎಸ್‌ಟಿ ಪಟ್ಟಿಗೆ ಸೇರಲು ಕಾಡುಗೊಲ್ಲರು ಅರ್ಹರು: ಸಚಿವ ಡಿ.ಸುಧಾಕರ್

By Kannadaprabha NewsFirst Published Mar 18, 2024, 12:51 PM IST
Highlights

ಬಿಜೆಪಿ ಮೀಸಲಾತಿ ವಿರೋಧಿಯಾಗಿದ್ದು, ಕಾಡುಗೊಲ್ಲರು ಎಸ್‌ಟಿ ಪಟ್ಟಿಗೆ ಸೇರಲು ಅರ್ಹರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. 
 

ಹಿರಿಯೂರು (ಮಾ.18): ಬಿಜೆಪಿ ಮೀಸಲಾತಿ ವಿರೋಧಿಯಾಗಿದ್ದು, ಕಾಡುಗೊಲ್ಲರು ಎಸ್‌ಟಿ ಪಟ್ಟಿಗೆ ಸೇರಲು ಅರ್ಹರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವತಿಯಿಂದ ನಡೆದ ಕಾಡುಗೊಲ್ಲ ಜನಾಂಗದವರಿಗೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕಾಡುಗೊಲ್ಲರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇತಿಹಾಸದಿಂದಲೂ ಕಾಡುಗೊಲ್ಲರು ಅವರದೇ ಆದ ಸಂಸ್ಕೃತಿ, ಬುಡಕಟ್ಟನ್ನು ಪಾಲನೆ ಮಾಡಿಕೊಂಡು ಬಂದಿದ್ದಾರೆ. ಸಾಮಾಜಿಕ ನ್ಯಾಯ ಒದಗಿಸುವುದು ಕಾಂಗ್ರೆಸ್ ಪಕ್ಷದ ಸಿದ್ಧಾಂತವಾಗಿದ್ದು, ಎಲ್ಲಾ ವರ್ಗದ ಜನರನ್ನು ಪಕ್ಷ ಬೆಳೆಸುತ್ತದೆ. 

2008ರಲ್ಲಿ ನಾನು ಸಮಾಜ ಕಲ್ಯಾಣ ಸಚಿವನಾಗಿದ್ದ ಸಂದರ್ಭದಲ್ಲಿ 5 ಕೋಟಿಯಷ್ಟು ಹಣವನ್ನು ಈ ಸಮಾಜಕ್ಕೆ ಮೀಸಲಿಟ್ಟಿದ್ದೆ. ಈಗಾಗಲೇ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಕಾಡುಗೊಲ್ಲ ರನ್ನು ಎಸ್‌ಟಿ ಪಟ್ಟಿಗೆ ಸೇರಿಸಿ ಎಂಬ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳಿಸಲಾಗಿತ್ತು. ಆದರೆ ಕೇಂದ್ರದ ನಿರಾಸಕ್ತಿಯಿಂದ ಎಸ್‌ ಟಿ ಸೇರ್ಪಡೆ ಕಾರ್ಯ ಹಾಗೇ ಉಳಿದಿದೆ. ಕಾಡುಗೊಲ್ಲ ಜನಾಂಗ ನೆನಪಿನಲ್ಲಿಟ್ಟುಕೊಳ್ಳಿ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರ ಕಾಡುಗೊಲ್ಲರು ಎಸ್‌ಟಿ ಪಟ್ಟಿ ಸೇರುವ ಹಾದಿ ಸುಗಮ ವಾಗುತ್ತದೆ.

ಆದ್ದರಿಂದ ಬರುವ ದಿನಗಳಲ್ಲಿ ಕಾಡುಗೊಲ್ಲರು ಇನ್ನಷ್ಟು ಬಲವಾಗಿ ಪಕ್ಷದ ಪರ ನಿಲ್ಲಬೇಕಾಗಿದೆ. ಕಾಡುಗೊಲ್ಲರನ್ನು ಎಸ್‌ಟಿಗೆ ಸೇರಿಸಲು ನಾವು ಬದ್ಧರಿದ್ದೇವೆ ಎಂದರು. ಕಾಡುಗೊಲ್ಲ ಸಮಾಜದ ಅಧ್ಯಕ್ಷ ಪಿ.ಆರ್.ದಾಸ್ ಮಾತನಾಡಿ, ನಮ್ಮ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ ಎಂಬ ಕೊರಗು ಕೊನೆಗೂ ಬಗೆ ಹರಿದಿದೆ. ಇಂದಿನಿಂದ ಅರ್ಹ ದಾಖಲೆ ಒದಗಿಸಿ ಕಾಡುಗೊಲ್ಲರು ಜಾತಿ ಪ್ರಮಾಣ ಪತ್ರ ಪಡೆಯಬಹುದು. ಈ ಹಿಂದೆಯೇ ಕೃಷ್ಣ ಭವನ ಮಂಜೂರು ಮಾಡಿದ್ದ ಸಚಿವರು ಇದೀಗ ಮತ್ತೆ ಒಂದು ಕೋಟಿ ಅನುದಾನ ನೀಡಿ ಕೃಷ್ಣ ಭವನ ಕಾಮಗಾರಿ ಮುಂದುವರೆಯಲು ಸಹಕಾರಿಯಾಗಿದ್ದಾರೆ. ಕಾಡುಗೊಲ್ಲರ ಪರವಾಗಿ ಅವರು ಯಾವಾಗಲೂ ಇದ್ದಾರೆ. ಬರುವ ದಿನಗಳಲ್ಲಿ ನಾವೂ ಸಹ ಅವರ ಬೆನ್ನಿಗೆ ನಿಲ್ಲುತ್ತೇವೆ ಎಂದರು.

ಗುಲಾಮಗಿರಿಗೆ ಬಗ್ಗದ ಸ್ವಾಭಿಮಾನಿ ಎಂಬ ತೃಪ್ತಿ ಇದೆ: ಸಂಸದ ವಿ.ಶ್ರೀನಿವಾಸ ಪ್ರಸಾದ್‌

ರೈತ ಸಂಘದ ಅಧ್ಯಕ್ಷ, ಕಾಡುಗೊಲ್ಲ ಮುಖಂಡ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಕಾಡುಗೊಲ್ಲ ಜನಾಂಗಕ್ಕೆ ಸಚಿವರು ಧ್ವನಿಯಾಗಿದ್ದಾರೆ. ಕಾಡುಗೊಲ್ಲ ಅಭಿವೃದ್ಧಿ ನಿಗಮದಿಂದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ದೊರೆಯಲಿ. ನಾವೂ ಸಹ ಕಾಡುಗೊಲ್ಲರ ಅಭಿವೃದ್ಧಿಗೆ ಬದ್ಧವಾಗಿರುವ ಸಚಿವರ ಬೆಂಬಲಕ್ಕೆ ಇದ್ದೇವೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಉಪ ತಹಶೀಲ್ದಾರ್ ಶಿವಕುಮಾರ್, ಕಾಡುಗೊಲ್ಲ ಸಮಾಜದ ಮುಖಂಡರಾದ ಎಸ್ ಆರ್ ತಿಪ್ಪೇಸ್ವಾಮಿ, ಹೇಮಂತ್ ಯಾದವ್, ಷಡಕ್ಷರಿ, ವಕೀಲ ನಾಗರಾಜ್, ಕಲ್ಲಟ್ಟಿ ತಿಪ್ಪೇಸ್ವಾಮಿ,ರಾಮಕೃಷ್ಣಪ್ಪ,ಯಲ್ಲದಕೆರೆ ಮಂಜುನಾಥ್, ಶಿವರಂಜಿನಿ, ಮಹoತೇಶ್, ಪ್ರಭು ಯಾದವ್, ತಿಮ್ಮಯ್ಯ, ಮಹೇಶ್, ಗೋಪಿಯಾದವ್ ಮುಂತಾದವರು ಉಪಸ್ಥಿತರಿದ್ದರು.

click me!