Davanagere: ಕಾಡುಗೊಲ್ಲರ ಎಸ್‌ಟಿ ಸೇರ್ಪಡೆಗೆ ಹಕ್ಕೊತ್ತಾಯ: ನಾಳೆ ಸಮುದಾಯದ ಮುಖಂಡರ ಸಭೆ

By Sathish Kumar KHFirst Published Dec 24, 2022, 4:29 PM IST
Highlights

ಕಾಡುಗೊಲ್ಲರನ್ನು ಎಸ್‌ಟಿಗೆ ಸೇರ್ಪಡಿಸುವಂತೆ ಹಕ್ಕೊತ್ತಾಯ ಮಾಡಲು ಡಿ.25 ರಂದು‌ ಬೆಳಗ್ಗೆ10 ಕ್ಕೆ‌ ನಗರದ ರೋಟರಿ ಬಾಲಭವನದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು‌ ಜಿಲ್ಲಾ‌ಕಾಡುಗೊಲ್ಲರ ಸಂಘದ ಅಧ್ಯಕ್ಷ ಸುಂಕಪ್ಪ ಹೇಳಿದರು.

ವರದಿ : ವರದರಾಜ್ ಏಷ್ಯಾನೆಟ್‌ ಸುವರ್ಣ ನ್ಯೂಸ್

ದಾವಣಗೆರೆ (ಡಿ.24) : ಕಾಡುಗೊಲ್ಲರನ್ನು ಎಸ್‌ಟಿಗೆ ಸೇರ್ಪಡಿಸುವಂತೆ ಹಕ್ಕೊತ್ತಾಯ ಮಾಡಲು ಡಿ.25 ರಂದು‌ ಬೆಳಗ್ಗೆ10 ಕ್ಕೆ‌ ನಗರದ ರೋಟರಿ ಬಾಲಭವನದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು‌ ಜಿಲ್ಲಾ‌ಕಾಡುಗೊಲ್ಲರ ಸಂಘದ ಅಧ್ಯಕ್ಷ ಸುಂಕಪ್ಪ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪೂರ್ವಭಾವಿ ಸಭೆಯನ್ನು ರಾಜ್ಯ ಕಾಡುಗೊಲ್ಲ ಸಂಘದ ಅಧ್ಯಕ್ಷ ರಾಜಣ್ಣ ಸಭೆಯ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಸಹಾಯಕ ಆಯುಕ್ತ ಸಿ.ಬಸವರಾಜು,ಸಂಘದ ಗೌರವಾಧ್ಯಕ್ಷ ಮೀಸೆ ಮಹಾಲಿಂಗಪ್ಪ,ಪ್ರಧಾನ ಕಾರ್ಯದರ್ಶಿ ಎಂ.ಎಸ್ ದೇವರಾಜ್,ಎಸ್ ಸಣ್ಣಬಾಲಪ್ಪ, ರಾಜಕುಮಾರ್, ಪ್ರಭುದೇವ್ ಆಗಮಿಸಲಿದ್ದಾರೆ ಎಂದು ಹೇಳಿದರು. ಬಳಿಕ ಮಾತನಾಡಿದ ಅವರು, ಕಾಡುಗೊಲ್ಲ ಸಮುದಾಯವು ಅತ್ಯಂತ ಹೀನಾಯಸ್ಥಿತಿಯಲ್ಲಿದೆ. ಕಾಡುಗೊಲ್ಲ ಸಮುದಾಯ ವ್ಯವಸ್ಥೆಯ ನಿರ್ಲಕ್ಷದಿಂದಾಗಿ ಕಷ್ಟದಲ್ಲಿ ಜೀವನ‌ಸಾಗಿಸುತ್ತಿದೆ. ಹಿಂದಿನಿಂದಲೂ ಕಾಡುಗೊಲ್ಲ ಸಮುದಾಯ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬುಡಕಟ್ಟು ಕಾಡುಗೊಲ್ಲರಿಗೂ ಎಸ್ಟಿ ಮೀಸಲು ಕಲ್ಪಿಸಿ; ಚೇತನ್‌ ಆಗ್ರಹ

ಒಂದು ವರ್ಷದಿಂದ ನಿಗಮಕ್ಕೆ ಅಧ್ಯಕ್ಷರ ನೇಮಕವಿಲ್ಲ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಎಸ್‌ಟಿಗೆ ಸೇರ್ಪಡೆಗೆ ಕುಲಶಾಸ್ತ್ರ ಅಧ್ಯಯನ ನಡೆಸಿ ವರದಿ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ ಇಲ್ಲಿಯವರೆಗೂ ಸೇರ್ಪಡೆ ಮಾಡಿಲ್ಲ. ಇದಲ್ಲದೇ ಕಾಡುಗೊಲ್ಲ ನಿಗಮ ಸ್ಥಾಪನೆ ಮಾಡಿ ಒಂದೂವರೆ ವರ್ಷ ಕಳೆದರೂ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಜೊತೆಗೆ ನಿಗಮಕ್ಕೆ 14 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಹಿಂಪಡೆಯಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಸಮುದಾಯ ಅಭಿವೃದ್ಧಿಗೆ ಸರ್ಕಾರ ವಿಫಲ: ಕಾಡುಗೊಲ್ಲ ಸಮಾಜಕ್ಕೆ ಸವಲತ್ತು ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಅಲೆಮಾರಿ ಜನಾಂಗವಾದ ಕಾಡುಗೊಲ್ಲ ಸಮಾಜ ಕುರಿ ಸಾಕಾಣಿಕೆ, ಪಶುಪಾಲನೆ ಮಾಡುತ್ತಾ ಬಂದಿರುವ ಸಮಾಜ. ಊರುಗೊಲ್ಲರ ಆಚಾರ ವಿಚಾರಕ್ಕೂ ಹಾಗೂ ಕಾಡುಗೊಲ್ಲರ ಆಚಾರ ವಿಚಾರಕ್ಕೂ ವಿಭಿನ್ನವಾಗಿದೆ ಎಂದರು.

ಸಂಘಟಿತ ಹೋರಾಟ ನಡೆಸಿದಲ್ಲಿ ಕಾಡುಗೊಲ್ಲರಿಗೆ ಯಶಸ್ಸು: ಸಿ.ಟಿ.ರವಿ

ಸರ್ಕಾರದ ನಿರ್ಲಕ್ಷ್ಯಕ್ಕೆ ತಕ್ಕ ಶಾಸ್ತಿ: ಕೇವಲ ಚುನಾವಣೆಯಲ್ಲಿ ನಮ್ಮನ್ನು ನೆನಪು ಮಾಡಿಕೊಳ್ಳುವ ಜನಪ್ರತಿನಿಧಿಗಳು ನಮ್ಮ ಸಮಾಜವನ್ನು ಎಸ್ ಟಿ ಸೇರ್ಪಡೆ ಮಾಡುವಲ್ಲಿ ನಿರ್ಲಕ್ಷ್ಯವಹಿಸುತ್ತಿದೆ. ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡಬೇಕು. ಈ ಸಂಬಂಧ ನಾಳೆ ನಡೆಯುವ ಸಭೆಯಲ್ಲಿ ಎಲ್ಲಾ ಜಿಲ್ಲೆಗಳಿಂದ ಸಮಾಜ ಬಾಂಧವರು ಆಗಮಿಸಲಿದ್ದಾರೆ. ಸರ್ಕಾರ ಎಸ್‌ಟಿಗೆ ಸೇರ್ಪಡಿಸುವಲ್ಲಿ ನಿರ್ಲಕ್ಷ್ಯ ಮಾಡಿದಲ್ಲಿ ಮುಂದಿನ ನಿರ್ಧಾರ ಏನೆಂಬುದು ನಾಳೆಯ ಸಭೆಯಲ್ಲಿ ಚರ್ಚಿಸಿ ಮುಂದುವರಿಯಲಿದ್ದೇವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಂ.ಕೆಂಪಣ್ಣ,ಜಿ.ಎಸ್ ಕೃಷ್ಣಪ್ಪ,ಸಿದ್ದಪ್ಪ ಮತ್ತಿತರರಿದ್ದರು.

click me!