
ಮಂಗಳೂರು: ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸ್ಯಾಕ್ಸೋಫೋನ್ ವಾದನದ ಮೂಲಕ ಜಾಗತಿಕ ಮಟ್ಟದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ್ದ ದಿವಂಗತ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್ ಅವರ ಸ್ಮರಣಾರ್ಥ ಮಂಗಳೂರಿನಲ್ಲಿ ಸ್ಥಾಪಿಸಲಾಗಿದ್ದ 'ಸ್ಯಾಕ್ಸೋಫೋನ್ ಕಲಾಕೃತಿ' ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಂಗಳೂರಿನ ಕದ್ರಿ ಮಲ್ಲಿಕಟ್ಟೆ ಜಂಕ್ಷನ್ ಬಳಿ ಇರುವ 'ಸಿಟಿ ಸೆಂಟ್ರಲ್ ಲೈಬ್ರರಿ' ಆವರಣದಲ್ಲಿ ಅಳವಡಿಸಲಾಗಿದ್ದ ಈ ನೆನಪಿನ ಸ್ಮಾರಕ ಕಲಾಕೃತಿಯನ್ನು ದುಷ್ಕರ್ಮಿಗಳು ಕದ್ದು ಕೊಂಡೊಯ್ದಿದ್ದಾರೆ.
ಸೆಪ್ಟೆಂಬರ್ 25ರಂದು ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಗ್ರಂಥಾಲಯದ ಆವರಣದಿಂದಲೇ ಕಲಾಕೃತಿಯನ್ನು ಅಪಹರಿಸಿರುವುದು ಕಲಾ ಪ್ರೇಮಿಗಳು, ಸ್ಥಳೀಯರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕಲಾಭಿಮಾನಿಗಳು, ತಕ್ಷಣವೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸುವಂತೆ ಹಾಗೂ ಕಳುವಾದ ಕಲಾಕೃತಿಯನ್ನು ಮರಳಿ ಸ್ಥಾಪಿಸುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ.
ಕರ್ನಾಟಕ ಸಂಗೀತ ಪದ್ಧತಿಗೆ ಸ್ಯಾಕ್ಸೋಫೋನ್ ನಂತಹ ಪಾಶ್ಚಿಮಾತ್ಯ ವಾದ್ಯವನ್ನು ಅತ್ಯಂತ ಯಶಸ್ವಿಯಾಗಿ ಅಳವಡಿಸಿ, ಅದಕ್ಕೆ ಜಗತ್ಪ್ರಸಿದ್ಧಿ ತಂದುಕೊಟ್ಟ ಹಿರಿಮೆ ಡಾ. ಕದ್ರಿ ಗೋಪಾಲನಾಥ್ ಅವರಿಗೆ ಸಲ್ಲುತ್ತದೆ.
1950ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ 'ಸಜಿಪ ಮೂಡ' ಗ್ರಾಮದಲ್ಲಿ ಜನಿಸಿದ ಇವರಿಗೆ ಸಂಗೀತ ತಂದೆ ತನಿಯಪ್ಪ ಅವರಿಂದ ರಕ್ತಗತವಾಗಿಯೇ ಒಲಿದು ಬಂದಿತ್ತು. ತಂದೆ ತನಿಯಪ್ಪನವರು ಪ್ರಸಿದ್ಧ ನಾಗಸ್ವರ ವಿದ್ವಾಂಸರಾಗಿದ್ದರು.
ಕಠಿಣ ಅಭ್ಯಾಸ ಹಾಗೂ ಅಪಾರ ಪ್ರತಿಭೆಯ ಮೂಲಕ ಸ್ಯಾಕ್ಸೋಫೋನ್‌ನಲ್ಲಿ ರಾಗ-ತಾನ-ಪಲ್ಲವಿಗಳನ್ನು ನುಡಿಸುವ ಮೂಲಕ ಭಾರತೀಯ ಸಂಗೀತ ಲೋಕವನ್ನು ಬೆರಗುಗೊಳಿಸಿದ್ದರು. ಇವರ ಅದ್ವಿತೀಯ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವು 'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಿತ್ತು.
ರಾಜ್ಯದ ಹೆಮ್ಮೆಯ ವಾದಕ ಡಾ. ಕದ್ರಿ ಗೋಪಾಲ್‌ನಾಥ್ ಅವರು 2019ರ ಅಕ್ಟೋಬರ್ ತಿಂಗಳಿನಲ್ಲಿ ತಮ್ಮ 70ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಅವರ ನಿಧನದ ನಂತರ, ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಅಪ್ರತಿಮ ಕೊಡುಗೆಯನ್ನು ಸ್ಮರಿಸಲು ಹಾಗೂ ಮುಂಬರುವ ಪೀಳಿಗೆಗೆ ಪ್ರೇರಣೆಯಾಗಲು ಮಂಗಳೂರಿನ ಮಲ್ಲಿಕಟ್ಟೆ ಗ್ರಂಥಾಲಯದ ಆವರಣದಲ್ಲಿ ಈ ಸುಂದರ ಸ್ಯಾಕ್ಸೋಫೋನ್ ಮಾದರಿಯ ಕಲಾಕೃತಿಯನ್ನು ಗೌರವಪೂರ್ವಕವಾಗಿ ನಿರ್ಮಾಣ ಮಾಡಲಾಗಿತ್ತು. ಇದೀಗ ಸಾಂಸ್ಕೃತಿಕ ಮೌಲ್ಯವಿರುವ ಈ ಸ್ಮಾರಕವನ್ನೇ ಕಳವು ಮಾಡಿರುವ ಕಿಡಿಗೇಡಿಗಳ ಕೃತ್ಯಕ್ಕೆ ಮಂಗಳೂರಿನ ಜನತೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.