ಅರಣ್ಯ ಇಲಾಖೆ ಜಾಣ ಕುರುಡು: ಆನೆ ಹಿಂಡು ಇರೋ ಜಾಗದಲ್ಲಿ ಬಿರಿಯಾನಿ, ಕಸದ ರಾಶಿ: ಪಿಕ್‌ನಿಕ್‌ ಸ್ಪಾಟ್‌ ಆದ Kabini Backwaters!

Published : Jun 22, 2026, 12:54 PM IST
Kabini Backwaters News

ಸಾರಾಂಶ

ಒಂದು ಕಾಲದಲ್ಲಿ ವನ್ಯಜೀವಿಗಳ ಸ್ವರ್ಗವಾಗಿದ್ದ ಕಬಿನಿ ಹಿನ್ನೀರು, ಇಂದು ಬೇಜವಾಬ್ದಾರಿ ಪ್ರವಾಸಿಗರಿಂದ ಕಸದ ತೊಟ್ಟಿಯಾಗುತ್ತಿದೆ. ಪ್ರವಾಸಿಗರು ಕಾಡಂಚಿನಲ್ಲಿ ಅಡುಗೆ ಮಾಡಿ, ಮೋಜು-ಮಸ್ತಿ ಮಾಡುತ್ತಿರುವುದು ಪರಿಸರ ವ್ಯವಸ್ಥೆಗೆ ಹಾನಿ ಉಂಟುಮಾಡುತ್ತಿದೆ.

ಮೈಸೂರು (ಜೂ.22): ಒಂದು ಕಾಲದಲ್ಲಿ ತನ್ನ ನಿಷ್ಕಲ್ಮಶ ನೈಸರ್ಗಿಕ ಸೌಂದರ್ಯ ಮತ್ತು ವನ್ಯಜೀವಿಗಳ ನೆಮ್ಮದಿಯ ತಾಣವಾಗಿ ಜಗತ್ಪ್ರಸಿದ್ಧಿಯಾಗಿದ್ದ ಕರ್ನಾಟಕದ ಹೆಮ್ಮೆಯ ಕಬಿನಿ ಹಿನ್ನೀರು (Kabini Backwaters), ಇತ್ತೀಚಿನ ದಿನಗಳಲ್ಲಿ ಕೇವಲ ನಗರದ ಜನನಿಬಿಡ ಪಿಕ್ನಿಕ್ ಸ್ಪಾಟ್‌ನಂತೆ ಬದಲಾಗುತ್ತಿರುವುದು ಪರಿಸರ ಪ್ರೇಮಿಗಳಲ್ಲಿ ತೀವ್ರ ಕಳವಳ ಮೂಡಿಸಿದೆ. ಪ್ರವಾಸಿಗರು ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಮರೆತು, ಕಾಡಿನ ಅಂಚಿನಲ್ಲಿ ರಾಜಾರೋಷವಾಗಿ ಒಲೆ ಹೂಡಿ ಬಿರಿಯಾನಿ ಹಾಗೂ ಮನೆ ಅಡುಗೆಯನ್ನು ಮಾಡುತ್ತಾ ಮೋಜು-ಮಸ್ತಿ ಮಾಡುತ್ತಿರುವ ವರದಿಗಳು ಪರಿಸರ ವ್ಯವಸ್ಥೆಗೆ ದೊಡ್ಡ ದಕ್ಕೆಯನ್ನು ತಂದಿಟ್ಟಿವೆ.

ಕಬಿನಿ ಹಿನ್ನೀರು ವನ್ಯಜೀವಿಗಳು ಮತ್ತು ಪ್ರಕೃತಿಗೆ ಸ್ವರ್ಗವಾಗಬೇಕೇ ಹೊರತು, ಸಾರ್ವಜನಿಕರ ಮನರಂಜನೆಯ ತ್ಯಾಜ್ಯದ ತೊಟ್ಟಿಯಾಗಬಾರದು. ಈ ಸೂಕ್ಷ್ಮ ವಲಯದಲ್ಲಿ ನಡೆಯುತ್ತಿರುವ ಅನಿಯಂತ್ರಿತ ಚಟುವಟಿಕೆಗಳು ಪ್ರಾಣಿಗಳ ಆವಾಸಸ್ಥಾನವನ್ನು ಧ್ವಂಸಗೊಳಿಸುತ್ತಿವೆ. ಈ ಕಹಿ ಸತ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಠಿಣ ಪದಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಅರಣ್ಯ ಇಲಾಖೆ ಎಲ್ಲಿದೆ?: ಜನರ ನೇರ ಪ್ರಶ್ನೆ

ಈ ಪರಿಸರ ನಾಶದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಕಮೆಂಟ್‌ಗಳು ಬರುತ್ತಿದ್ದು, ಅರಣ್ಯ ಇಲಾಖೆಯನ್ನು ಟ್ಯಾಗ್ ಮಾಡಿ ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ. ನೆಟ್ಟಿಗರೊಬ್ಬರು ಬೇಸರದಿಂದ, "ಅರಣ್ಯ ಇಲಾಖೆ ಇಂತಹ ಚಟುವಟಿಕೆಗಳನ್ನು ಏಕೆ ಕಣ್ಣಿಟ್ಟು ನೋಡುತ್ತಿಲ್ಲ? ಮನುಷ್ಯರೇ.. ಕನಿಷ್ಠ ವನ್ಯಜೀವಿಗಳ ಜಾಗವನ್ನಾದರೂ ಬಿಟ್ಟುಬಿಡಿ," ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಯೂಸರ್‌ಗಳು, "ಇದು ನಿಜಕ್ಕೂ ನಾಚಿಕೆಗೇಡಿನ ನಡವಳಿಕೆ ಮತ್ತು ಪ್ರಕೃತಿಯ ಮೇಲಿನ ಹಸ್ತಕ್ಷೇಪ. ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.

ಕೆಲವರು ಇನ್ನೂ ಸಿಟ್ಟಿನಿಂದ ಮಾತನಾಡಿದ್ದು, "ಅಲ್ಲಿಗೂ ಹೋಗಿ ಶೋಕಿ ಮಾಡಿ, ಪ್ರಾಣಿಗಳು ದಾಳಿ ಮಾಡಿ ಸಾಯಿಸಿದರೆ ಕೊನೆಗೆ ಪ್ರಾಣಿಗಳನ್ನೇ ದೂರುತ್ತಾರೆ. ಕೆಲವರು ಕಬಿನಿಯನ್ನು ಅತ್ತೆ ಮನೆ ಮಾಡಿಕೊಂಡಿದ್ದಾರೆ. ಅಲ್ಲಿಗೆ ಹೋಗಿ ಎಂಜಾಯ್ ಮಾಡಿ ಕಸವನ್ನೆಲ್ಲಾ ಎಸೆದು ಬರುತ್ತಾರೆ," ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್‌ಫ್ಲುಯೆನ್ಸರ್ ಮತ್ತು ವ್ಲಾಗರ್‌ಗಳ ಕಾಟ!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮತ್ತು ವ್ಯೂಸ್‌ಗಳಿಗಾಗಿ ಕಬಿನಿಯಂತಹ ಸೂಕ್ಷ್ಮ ತಾಣಗಳನ್ನು ಜಿಯೋಟ್ಯಾಗ್ ಮಾಡಿ ಜನಪ್ರಿಯಗೊಳಿಸುತ್ತಿರುವ ವ್ಲಾಗರ್‌ಗಳ ವಿರುದ್ಧವೂ ಭಾರಿ ಆಕ್ರೋಶ ವ್ಯಕ್ತವಾಗಿದೆ. "ಒಬ್ಬ ಇನ್‌ಫ್ಲುಯೆನ್ಸರ್ ಒಂದು ಜಾಗಕ್ಕೆ ಕಾಲಿಟ್ಟರೆ ಆ ಜಾಗ ಮುಗಿಯಿತು ಎಂದೇ ಅರ್ಥ. ಕೇವಲ ವ್ಯೂಸ್‌ಗಾಗಿ ಇಂತಹ ಸೂಕ್ಷ್ಮ ಪರಿಸರವನ್ನು ಬಲಿ ಕೊಡುತ್ತಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಇವು ಕಸದ ರಾಶಿಯ ಪಿಕ್ನಿಕ್ ಜೋನ್‌ಗಳಾಗಿ ಬದಲಾಗುತ್ತವೆ. ಪ್ರಕೃತಿಯ ಮೇಲೆ ನಿಜವಾದ ಕಾಳಜಿ ಇದ್ದರೆ ದಯವಿಟ್ಟು ಕಂಟೆಂಟ್‌ಗಾಗಿ ಇವುಗಳನ್ನು ಬಳಸಬೇಡಿ, ಅವುಗಳನ್ನು ವನ್ಯಜೀವಿಗಳಿಗಾಗಿಯೇ ಬಿಡಿ," ಎಂಬ ಕಮೆಂಟ್‌ಗಳು ಪರಿಸ್ಥಿತಿಯ ಗಂಭೀರತೆಯನ್ನು ಸಾರುತ್ತವೆ.

ಇದೇ ವೇಳೆ ಕೇವಲ 'ಬಿರಿಯಾನಿ'ಯಂತಹ ನಿರ್ದಿಷ್ಟ ಪದ ಬಳಸಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಬೇಡಿ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಪ್ರಕೃತಿಯನ್ನು ರಕ್ಷಿಸುವುದು ಮತ್ತು ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಕರ್ನಾಟಕವು ತನ್ನ ಮುಂದಿನ ಪೀಳಿಗೆಗಾಗಿ ಎಲ್ಲವನ್ನೂ ಉಳಿಸಲು ಹೋರಾಡುತ್ತಿದ್ದರೆ, ಜವಾಬ್ದಾರಿಯಿಲ್ಲದ ಪ್ರವಾಸೋದ್ಯಮ ಎಲ್ಲವನ್ನೂ ನಾಶಪಡಿಸುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ. ಈಗಲಾದರೂ ಅರಣ್ಯ ಇಲಾಖೆ ಕಠಿಣ ಕ್ರಮ ಕೈಗೊಂಡು, ಕಬಿನಿಯ ನೈಸರ್ಗಿಕ ಪರಂಪರೆಯನ್ನು ಉಳಿಸಬೇಕಿದೆ.

 

 

 

PREV
Read more Articles on
click me!

Recommended Stories

ಕಾಫಿ ನಗರಿಯಲ್ಲಿ ಚಹಾ ಅಧಿಪತ್ಯ: ಮುಂಬೈ, ಹೈದರಾಬಾದ್‌ನ್ನು ಹಿಂದಿಕ್ಕಿದ ಬೆಂಗಳೂರು ಈಗ ಭಾರತದ 'ಟೀ' ರಾಜಧಾನಿ!
ಮಳೆ ಬರದಿದ್ದರೆ ಬೆಂಗಳೂರಿಗೆ ತೀವ್ರ ಜಲ ಕಂಟಕ: ಕಾವೇರಿ ನೀರಿಗಾಗಿ ಜಲಮಂಡಳಿ ಭವಿಷ್ಯದ ಹೆಜ್ಜೆ!