ರಜಾ ದಿನಗಳಲ್ಲಿ ಕೂಲಿ ಮಾಡುತ್ತಿದ್ದ ಹುಡುಗನಿಗೆ ಪೊಲೀಸ್ ಸಬ್ ಇನಸ್ಪೆಕ್ಟರ್ ಆಗುವ ಯೋಗ| ಪೊಲೀಸ್ ಅಧಿಕಾರಿಯಾಗಿ ಆಯ್ಕೆಯಾದ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬಾಪೂಜಿ ನಗರ (ಉದ್ಗಟ್ಟಿ ತಾಂಡಾ)ದ ಕೆ.ಮುರಳಿಧರ ನಾಯ್ಕ|
ಬಿ. ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ(ಸೆ.14): ಕುಗ್ರಾಮದ ಬಡ ಕುಟುಂಬದಲ್ಲಿ ಹುಟ್ಟಿ, ಹೊಟ್ಟೆ ತುಂಬಿಸಿಕೊಳ್ಳಲು ರಜಾ ದಿನಗಳಲ್ಲಿ ಕೂಲಿ ಮಾಡುತ್ತಿದ್ದ ಹುಡುಗನಿಗೆ ಈಗ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗುವ ಯೋಗ ಕೂಡಿ ಬಂದಿದೆ.
ಹರಪನಹಳ್ಳಿ ತಾಲೂಕಿನ ಬಾಪೂಜಿ ನಗರ (ಉದ್ಗಟ್ಟಿ ತಾಂಡಾ)ದಲ್ಲಿ ಕೆ. ಗುಪ್ಯಾನಾಯ್ಕ ಹಾಗೂ ಚಿಂಚಲಿಬಾಯಿ ಎಂಬ ಬಡ ದಂಪತಿಯ ಪುತ್ರ ಕೆ.ಮುರಳಿಧರ ನಾಯ್ಕ ಇದೀಗ ಪೊಲೀಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
25 ವರ್ಷದ ಈ ಯುವಕ ತಮ್ಮ ತಾಂಡಾದಲ್ಲೇ 1 ರಿಂದ 5ರ ವರೆಗೆ, 6 ರಿಂದ 10 ರ ವರೆಗೆ ಹಲುವಾಗಲು ಮೊರಾರ್ಜಿ ವಸತಿ ಶಾಲೆಯಲ್ಲಿ, ಪಿಯುಸಿಯನ್ನು ಹರಪನಹಳ್ಳಿ ಪಟ್ಟಣದ ಎಸ್‌ಎಸ್‌ಎಚ್ ಜೈನ್ ಕಾಲೇಜಿನಲ್ಲಿ ಹಾಗೂ ಬಿಇ ಸಿವಿಲ್ ಎಂಜಿನಿಯರಿಂಗ್ ಅನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಮುಗಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಆಗಬೇಕೆಂಬ ಗುರಿ ಇದ್ದರೂ ಸಹ 3 ವರ್ಷದ ಹಿಂದೆ ಸಹೋದರ ಸಂತೋಷ ನಾಯ್ಕ ಪೊಲೀಸ್ ಇಲಾಖೆ ಸೇರಿದ್ದು, ಇಲ್ಲಿ ನಾಲ್ಕು ಜನರಿಗೆ ಸಹಾಯ ಮಾಡಬಹುದು, ಪೊಲೀಸ್ ಇಲಾಖೆ ಸೇರಿಕೋ ಎಂದು ಸಲಹೆ ನೀಡಿದ್ದ ಮೇರೆಗೆ ಪಿಎಸ್‌ಐ ಪರೀಕ್ಷೆಗೆ ಸಿದ್ಧತೆ ನಡೆಸಲಾರಂಭಿಸಿದ. ಮೊದಲ ಬಾರಿಗೆ ಪರೀಕ್ಷೆ ಬರೆದಾಗ ಯಶಸ್ಸು ಸಿಗಲಿಲ್ಲ. ಪ್ರಯತ್ನ ಬಿಡದೆ ಎರಡನೇ ಬಾರಿ ಬರೆದಾಗ ಇರುವ 300 ಹುದ್ದೆಗಳಿಗೆ 184ನೇ ಕ್ರಮದಲ್ಲಿ ಆಯ್ಕೆಯಾಗಿದ್ದಾರೆ.
ಶಿರಹಟ್ಟಿ: PSI ನೇಮಕಾತಿಯಲ್ಲಿ ರಾಜ್ಯಕ್ಕೆ 26ನೇ ರ‌್ಯಾಂಕ್ ಪಡೆದ ಗ್ರಾಮೀಣ ಪ್ರತಿಭೆ ಸಹನಾ
ತಂದೆ-ತಾಯಿಗೆ ಮೂರು ಎಕರೆ ಜಮೀನಿದ್ದರೂ ನೀರಾವರಿ ಇಲ್ಲದಿದ್ದರಿಂದ ಬೆಳೆ ಬಾರದೇ ಇರುವ ಹಿನ್ನೆಲೆಯಲ್ಲಿ ಪ್ರತಿ ಬೇಸಿಗೆಯಲ್ಲಿ ಕಾಫಿ ನಾಡಿಗೆ ಗುಳೆ ಹೋಗುತ್ತಿದ್ದರು. ರಜೆ ಸಮಯದಲ್ಲಿ ಪೋಷಕರ ಜೊತೆ ಮುರಳಿಧರನಾಯ್ಕ ಸಹ ಹೋಗುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಗುಳೇ ಹೋಗಿಲ್ಲ, ಹೀಗೆ ಬಡತನದಿಂದ ಅಭ್ಯಾಸ ಮಾಡಿ ಇದೀಗ ಪಿಎಸ್‌ಐ ಆಗಿ ಆಯ್ಕೆಯಾಗಿ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.
ಬಡವನಾಗಿ ಸಾಧನೆ ಮಾಡಬೇಕೆಂಬ ಛಲ ಇತ್ತು, ಅದು ಈಡೇರಿದೆ, ಬಡವರಿಗೆ ಸಹಾಯ ಮಾಡುವ ಅದರಲ್ಲೂ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮಾಡುತ್ತೇನೆ. ಜನರಿಗೆ ನನ್ನ ವಾಪ್ತಿಯಲ್ಲಿ ಸಹಾಯ-ಸಹಕಾರ ಮಾಡುತ್ತೇನೆ ಎಂದು ಪಿಎಸ್‌ಐ ಆಗಿ ಆಯ್ಕೆಯಾದ ಯುವಕ ಕೆ.ಮುರಳಿಧರ ನಾಯ್ಕ ಅವರು ಹೇಳಿದ್ದಾರೆ.