373 ಮಂದಿ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಣೆ

By Kannadaprabha News  |  First Published Jul 18, 2022, 12:48 PM IST

ಬಸವ, ಅಂಬೇಡ್ಕರ್‌ ವಸತಿ ಯೋಜನೆಯಡಿ ಮನೆ ನಿರ್ಮಾಣ, ಫೆಬ್ರವರಿ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ರಾಜ್ಯ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ. ಬೋಪಯ್ಯಬೋಪಯ್ಯ ಸೂಚನೆ.


ಮಡಿಕೇರಿ (ಜು.18}: ಬಸವ, ಅಂಬೇಡ್ಕರ್‌ ವಸತಿ ಯೋಜನೆಯಡಿ ಮನೆ ನಿರ್ಮಾಣ, ಫೆಬ್ರವರಿ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ರಾಜ್ಯ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ. ಬೋಪಯ್ಯಬೋಪಯ್ಯ ಸೂಚಿಸಿದರು. ಬಸವ ಮತ್ತು ಅಂಬೇಡ್ಕರ್‌ ವಸತಿ ಯೋಜನೆಯಡಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕಿನ 373 ಫಲಾನುಭವಿಗಳ ಮನೆ ನಿರ್ಮಾಣಕ್ಕೆ  ಶನಿವಾರ ಕಾರ್ಯಾದೇಶ ಪತ್ರ ವಿತರಿಸಿದರು.

ನಗರದ ತಾಲೂಕು ಪಂಚಾಯಿತಿಯ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ವಸತಿ ಯೋಜನೆಯಡಿ (Housing Scheme) ಫಲಾನುಭವಿಗಳ ಮನೆ ನಿರ್ಮಾಣದ ಆದೇಶ ಪತ್ರ ವಿತರಿಸಿ ಬೋಪಯ್ಯ (K. G. Bopaiah )ಮಾತನಾಡಿದರು. ವಸತಿ ರಹಿತರಿಗೆ ಮನೆ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದ್ದು, ಫೆಬ್ರವರಿ ಅಂತ್ಯದೊಳಗೆ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವಂತೆ ಸಲಹೆ ಮಾಡಿದರು. ಇದನ್ನೂ ಓದಿ:  ಕೊಡವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದಾತ ಬಂಧನ

Tap to resize

Latest Videos

ವಸತಿ ರಹಿತ ಫಲಾನುಭವಿಗಳ ಸಂಬಂಧ ಗ್ರಾ.ಪಂ.ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸಲ್ಲಿಸಿರುವ ಪಟ್ಟಿಗೆ ಒಪ್ಪಿಗೆ ನೀಡಲಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಬಡವರಿಗೂ ಸರ್ಕಾರದ ವಸತಿ ಯೋಜನೆಗಳು ತಲುಪಬೇಕು. ಯಾರು ಕೂಡ ವಾಸಿಸಲು ಮನೆ ಹಾಗೂ ವಿದ್ಯುತ್‌ ಸಂಪರ್ಕ ಇಲ್ಲ ಎಂಬುದು ಕೇಳಿ ಬರಬಾರದು. ಆ ನಿಟ್ಟಿನಲ್ಲಿ ಗ್ರಾ.ಪಂ.ಗಳು ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ಕೆ.ಜಿ. ಬೋಪಯ್ಯ ತಿಳಿಸಿದರು. ಮಡಿಕೇರಿ ತಾಲೂಕಿಗೆ 830 ಮನೆಗಳ ನಿರ್ಮಾಣಕ್ಕೆ ಅವಕಾಶ ಆಗಿದ್ದು, ಆ ನಿಟ್ಟಿನಲ್ಲಿ ಪ್ರಥಮ ಹಂತದಲ್ಲಿ 373 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ಪತ್ರ ವಿತರಿಸಲಾಗಿದೆ. ಅಂಬೇಡ್ಕರ್‌ ವಸತಿ ಯೋಜನೆಯಡಿ 2.20 ಲಕ್ಷ ರು. ಹಾಗೂ ಬಸವ ವಸತಿ ಯೋಜನೆಯಡಿ 1.62 ಲಕ್ಷ ರು. ಹಂತ ಹಂತವಾಗಿ ದೊರೆಯಲಿದೆ. ಜೊತೆಗೆ ಫಲಾನುಭವಿಗಳು ಕೂಡ ಹಣ ಹೊಂದಿಸಿ ಉತ್ತಮ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬಹುದು. ಆದರೂ ಸರ್ಕಾರದ ಮಾರ್ಗಸೂಚಿಯಂತೆ ಮನೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಬೋಪಯ್ಯ ಸಲಹೆ ಮಾಡಿದರು.

ಭೂಕಂಪನ ಆತಂಕ ಬೇಡ: ಚೆಂಬು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಭವಿಸಿದ ಭೂಕಂಪನಕ್ಕೆ ಯಾರೂ ಆತಂಕ ಪಡಬೇಕಿಲ್ಲ, ಆದರೆ ಜಾಗ್ರತೆ ವಹಿಸುವುದು ಮುಖ್ಯ ಎಂದರು. ಪ್ರಾಕೃತಿಕ ವಿಕೋಪದಡಿ ಪ್ರತಿ ಗ್ರಾ.ಪಂ.ಗೆ ಜಿಲ್ಲಾಡಳಿತದಿಂದ 50 ಸಾವಿರ ರು. ಬಿಡುಗಡೆ ಆಗಿದೆ. ಆ ನಿಟ್ಟಿನಲ್ಲಿ ಗ್ರಾ.ಪಂ. ಕಾರ್ಯಪಡೆಯು ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಬೇಕು ಎಂದು ಶಾಸಕರು ಹೇಳಿದರು. ಇದನ್ನೂ ಓದಿ:ಮಳೆ ಹಾನಿ ಸಂತ್ರಸ್ತರಿಗೆ ಕ್ಷಿಪ್ರವಾಗಿ ಸ್ಪಂದಿಸಿ: ಸಚಿವ ನಾಗೇಶ್‌

ವಿದ್ಯುತ್‌ ವ್ಯತ್ಯಯಕ್ಕೆ ಸಂಬಂಧಿಸಿದಂತೆ ಸಹಾಯವಾಣಿ (1912)ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಸಮಸ್ಯೆಗಳಿದ್ದಲ್ಲಿ ತಮ್ಮ ಗಮನಕ್ಕೆ ತರುವಂತಾಗಬೇಕು ಎಂದು ಶಾಸಕರು ತಿಳಿಸಿದರು.

94ಸಿ, ನಮೂನೆ-57 ರಡಿ ಕೃಷಿ ಮಾಡುತ್ತಿರುವವರಿಗೆ ಅರ್ಜಿ ಸಲ್ಲಿಸಲು ಇನ್ನೂ ಅವಕಾಶವಿದ್ದು, ಅರ್ಹರು ತಹಸೀಲ್ದಾರರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು. ಈ ಸಂಬಂಧ ಗ್ರಾ.ಪಂ. ಮಟ್ಟದಲ್ಲಿ ಮಾಹಿತಿ ನೀಡುವಂತೆ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳಿಗೆ ಶಾಸಕರು ತಿಳಿಸಿದರು. ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿರುವುದರಿಂದ ಬೆಳೆ ಪರಿಹಾರ ಸಂಬಂಧ ಸರ್ವೆ ಕಾರ್ಯ ಆರಂಭವಾಗಲಿದೆ. ಆ ಸಂದರ್ಭದಲ್ಲಿ ಎಲ್ಲರೂ ಕೈಜೋಡಿಸಿ ಕಾರ್ಯನಿರ್ವಹಿಸಬೇಕು ಎಂದರು.

ತಾ.ಪಂ. ಇಒ ಶೇಖರ್‌ ಮಾತನಾಡಿ, ಸರ್ವರಿಗೂ ಸೂರು ಕಲ್ಪಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಮಡಿಕೇರಿ ತಾಲೂಕಿನ 830 ಫಲಾನುಭವಿಗಳ ಗುರಿಯಲ್ಲಿ ಮೊದಲ ಹಂತದಲ್ಲಿ 373 ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗುತ್ತಿದೆ. ವಿವಿಧ ವಸತಿ ಯೋಜನೆಗೆ ಆಯ್ಕೆಯಾಗಿರುವ ಫಲಾನುಭವಿಗಳು ಮನೆ ನಿರ್ಮಾಣ ಮಾಡಿಕೊಳ್ಳಲು ಮುಂದಾಗಬೇಕು. ಶಾಸಕರ ಪ್ರಯತ್ನದಿಂದ ಮಡಿಕೇರಿ ತಾಲೂಕಿನ ವಸತಿ ರಹಿತರಿಗೆ ಮನೆ ನಿರ್ಮಾಣಕ್ಕೆ ಅವಕಾಶವಾಗಿದೆ ಎಂದು ಹೇಳಿದರು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕಿನ ವಿವಿಧ ಗ್ರಾ.ಪಂ.ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಫಲಾನುಭವಿಗಳು ಇತರರು ಇದ್ದರು. ಮೇಕೇರಿ ಗ್ರಾ.ಪಂ. ಪಿಡಿಒ ಶ್ರೀಧರ ಸ್ವಾಗತಿಸಿದರು. ಅಕ್ಷಿತಾ ನಿರೂಪಿಸಿದರು. ಸುನೀತಾ, ನವಾನಿ, ನಿಶಾರಾಣಿ ಪ್ರಾರ್ಥಿಸಿದರು. ಮದೆನಾಡು ಗ್ರಾ.ಪಂ. ಪಿಡಿಒ ಡಿ. ನಂಜುಂಡಸ್ವಾಮಿ ವಂದಿಸಿದರು.

click me!