ಮಳೆಗಾಲದಲ್ಲಿ ಜಗತ್ತಿನ ಸಂಪರ್ಕ ಕಡಿದುಕೊಂಡು ದ್ವೀಪದಂತಾಗುವ ಹಲವು ಗ್ರಾಮಗಳಿವೆ. ಅವುಗಳಲ್ಲಿ ಬೈಂದೂರು ಪಟ್ಟಣ ಪಂಚಾಯ್ತಿಯ ಎತ್ತಬೇರು ಒಂದು. ಸುತ್ತಲಿನ ಕಾಡು ಪ್ರದೇಶದಿಂದ ಮಳೆ ಹೆಚ್ಚು ಮತ್ತು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸಮಸ್ಯೆಗಳಿಗೆ ಮೂಲ
ಬೈಂದೂರು (ಜು.18): ಹೇಳಿಕೊಳ್ಳಲು ಈ ಗ್ರಾಮ ಇರುವುದು ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ, ಆದರೆ ಅಲ್ಲಿನ ಮೂಲಭೂತ ಸೌಕರ್ಯದ ಕೊರತೆ ನೋಡಿದರೆ ಕುಗ್ರಾಮ ಎಂದೆನಿಸದೇ ಇರದು! ಹೌದು ತಗ್ಗರ್ಸೆ ಗ್ರಾಮದ ಎತ್ತಬೇರು ಎನ್ನುವ ಪ್ರದೇಶ ಮಳೆಗಾಲ ಬಂತೆಂದರೆ ದ್ವೀಪದಂತಾಗುತ್ತದೆ. ಮಳೆ ಜೋರಾದರೆ ಇಲ್ಲಿನ ಜನ ಬೆಚ್ಚಿಬೀಳುತ್ತಾರೆ. ಕಾಡು (Forest) ಪ್ರದೇಶವಾದ ಕಾರಣ ಇಲ್ಲಿರುವ ಹೊಳೆ(River) ಮಳೆನೀರಿನಿಂದಾಗಿ ರಭಸವಾಗಿ ಮೈದುಂಬಿ ಹರಿಯುತ್ತದೆ. ಹಾಗಾಗಿ ಜನರ ಓಡಾಟಕ್ಕೆ ಸರಿಯಾದ ಮಾರ್ಗವಿಲ್ಲದೇ ಜನ ಪರದಾಡುತ್ತಾರೆ.
ಈ ಕುಗ್ರಾಮದಲ್ಲಿ ಒಟ್ಟು ಹದಿನೈದು ಬುಡಕಟ್ಟು ಕುಟುಂಬಗಳು ನೆಲೆಸಿದ್ದಾರೆ. ಹಲವಾರು ಮಕ್ಕಳು ಪ್ರತಿದಿನ ಇದೇ ಮಾರ್ಗವಾಗಿ ಶಾಲಾ ಕಾಲೇಜಿಗೆ ತೆರಳುತ್ತಾರೆ. ವೃದ್ಧರು, ಗರ್ಭಿಣಿಯರು, ಮಹಿಳೆಯರು ಈ ಹೊಳೆಯನ್ನು ದಾಟಲು ಹರಸಾಹಸ ಪಡಬೇಕಾಗುತ್ತದೆ. ರಸ್ತೆ, ಸೇತುವೆ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯ ನೀಡದೇ ಈ ಪ್ರದೇಶವನ್ನು ಪಟ್ಟಣ ಪಂಚಾಯಿತಿ ಗೆ ಸೇರಿಸಿದ್ದು, ಅಧಿಕಾರಿಗಳ, ಜನಪ್ರತಿನಿಧಿಗಳ ಬೇಜವಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ರಾಷ್ಟ್ರೀಯ ಹೆದ್ದಾರಿಯಿಂದ (Highway) ಕೇವಲ ನಾಲ್ಕು ಕಿ.ಮೀ. ನಷ್ಟುದೂರವಿದ್ದರೂ ಯಾವುದೇ ಮೂಲಭೂತ ಸೌಕರ್ಯ ಒದಗಿಸದೇ ಇರುವುದಕ್ಕೆ ಇಲ್ಲಿನ ನಿವಾಸಿಗಳ ಆಕ್ರೋಶ ವ್ಯಕ್ತಪಡಿಸುತ್ತಾರೆ. ಇದನ್ನೂ ಓದಿ: ಉಡುಪಿ: ಮಲ್ಪೆ ಬೀಚ್‌ನಲ್ಲಿ ಚಿನ್ನಕ್ಕಾಗಿ ಹುಡುಕಾಟ, ಕಡಲ ತೀರದಲ್ಲಿ ನಿಜಕ್ಕೂ ಗೋಲ್ಡ್
ತಮ್ಮ ಮಕ್ಕಳನ್ನು ಹೊಳೆ ದಾಟಿಸಿ ಶಾಲೆಗೆ ಕಳುಹಿಸುವ ಪೋಷಕರು ಮತ್ತೆ ಪುನ: ಶಾಲೆ ಬಿಡುವ ಸಮಯದಲ್ಲಿ ಹೊಳೆಯ ದಂಡೆಯಲ್ಲಿ ಬಂದು ನಿಂತು ಮಕ್ಕಳನ್ನು ದಾಟಿಸಿಕೊಂಡು ಕರೆದೊಯ್ಯುತ್ತಾರೆ. ಸ್ವಲ್ಪ ಆಯ ತಪ್ಪಿದರೂ ಪ್ರಾಣಕ್ಕೆ ಸಂಚಕಾರ ಬರುವಂತಿದೆ ಇಲ್ಲಿನ ಪರಿಸ್ಥಿತಿ. ವ್ಯವಸ್ಥೆಯ ನಿರ್ಲಕ್ಷ್ಯದಿಂದ ಬೇಸತ್ತ ಇಲ್ಲಿನ ಬುಡಕಟ್ಟು ಕುಟುಂಬಗಳು ತಾವೇ ತಾತ್ಕಾಲಿಕ ಸಂಕವನ್ನು ನಿರ್ಮಿಸಿಕೊಂಡಿದ್ದರೂ ದೊಡ್ಡ ಮಳೆಯಿಂದ ಉಂಟಾಗುವ ನೆರೆಗೆ ಅದು ಪದೇ ಪದೇ ಕೊಚ್ಚಿಹೋಗುತ್ತಿರುತ್ತದೆ.
ದೊಡ್ಡ ಸೇತುವೆಯಲ್ಲದಿದ್ದರೂ ಚಿಕ್ಕ ಕಾಲ್ಸೇತುವೆಯನ್ನಾದರೂ ನಿರ್ಮಿಸಿಕೊಡಿ ಎಂದು ದಶಕಗಳಿಂದ ಅಂಗಲಾಚಿದರೂ ನಮ್ಮ ಜನಪ್ರತಿನಿಧಿಗಳಾಗಲೀ, ಸಂಬಂಧಪಟ್ಟಅಧಿಕಾರಿಗಳಾಗಲೀ ಇತ್ತ ಕಡೆ ಗಮನ ಹರಿಸಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ. ಮಳೆಗಾಲ ಬಂದೊಡನೇ ನೆರೆಯ ನೀರಿಗೆ ಮೈದುಂಬಿಕೊಳ್ಳುವ ಈ ಹೊಳೆಯಲ್ಲಿ ಅನಾಹುತ ಆಗುವ ಮುನ್ನ ಪ. ಪಂ. ಎಚ್ಚೆತ್ತುಕೊಂಡು ಸೂಕ್ತ ವ್ಯವಸ್ಥೆ ಮಾಡಬೇಕಿದೆ.
ಮಲ್ಪೆ ಸಮುದ್ರ ತೀರದಲ್ಲಿ ನಿಧಿ ಶೋಧ:
ಇಲ್ಲಿನ ಸಮುದ್ರ ತೀರ ಮಳೆಗಾಲದ ಅಬ್ಬರದ ಮಳೆಯ ನಂತರ ಕೆಲವು ಯುವಕರಿಗೆ ಅಮೂಲ್ಯ ನಿಧಿಯಾಗುತ್ತದೆ. ಪ್ರತಿವರ್ಷ ಅದೃಷ್ಟಯುವಕರಿಗೆ ಸಮುದ್ರ ಚಿನ್ನಬೆಳ್ಳಿ, ಪಂಚಲೋಹಗಳನ್ನೇ ನೀಡುತ್ತದೆ. ಗಾಳಿ ಮಳೆಗೆ ಮಲ್ಪೆ ಸಮುದ್ರ ತೀರ ಕೆಲವು ದಿನಗಳಿಂದ ಅಬ್ಬರಿಸುತಿದೆ. ಇದರ ನಡುವೆ ಕೆಲವು ದಿನಗಳಿಂದ ಸ್ಥಳೀಯ ಯುವಕರು ಬೀಚ್ ಮರಳಿನಲ್ಲಿ ಚಿನ್ನ, ಬೆಳ್ಳಿ, ಪಂಚಲೋಹ ವಿಗ್ರಹ ಸಹಿತ ಬೆಲೆಬಾಳುವ ವಸ್ತುಗಳಿಗೆ ಹುಡುಕುತ್ತಿದ್ದಾರೆ. ಕೆಳದ ಕೆಲವು ವರ್ಷಗಳಿಂದ ಇದೊಂದು ಸಂಪ್ರದಾಯದಂತೆ ಇಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಉಡುಪಿಯಲ್ಲೊಂದು ಶತಮಾನ ಕಂಡ ಎತ್ತಿನ ಗಾಡಿ!
ಸಮುದ್ರ ತನ್ನ ಒಡಲಿಗೆ ಸೇರಿದ ವಸ್ತುಗಳನ್ನು ಕೆಲ ದಿನಗಳ ನಂತರ ದಡಕ್ಕೆ ತಂದು ಎಸೆಯುತ್ತದೆ. ಅದು ಮನುಷ್ಯನ ನಿರ್ಜೀವ ದೇಹವೇ ಆಗಿರಬಹದು ಅಥವಾ ಕಸಕಡ್ಡಿಯೇ ಆಗಿರಬಹುದು, ಇದು ಸಮುದ್ರದ ನಿಯಮ. ಈಗ ದೈತ್ಯ ಅಲೆಗಳು ದಡಕ್ಕೆ ಭಾರಿ ಪ್ರಮಾಣದಲ್ಲಿ ಕಸಗಡ್ಡಿಗಳನ್ನು ಬೀಚಿಗೆ ತಂದೊಡ್ಡುತ್ತಿದೆ. ಅದರಲ್ಲಿ ಅನೇಕ ಬಾರಿ ಅಮೂಲ್ಯ ವಸ್ತುಗಳು ಇರುತ್ತವೆ.
ಪ್ರತಿವರ್ಷ ಮಲ್ಪೆ ತೀರಕ್ಕೆ 25 ಲಕ್ಷ ಕ್ಕೂ ಅಧಿಕ ಮಂದಿ ವಿಹಾರಕ್ಕೆ ಬರುತ್ತಾರೆ, ಅನೇಕ ಬಾರಿ ಅವರ ಸರ, ಉಂಗುರ, ಕಾಲ್ಗೆಜ್ಜೆ ಇತ್ಯಾದಿಗಳು ನೀರಿನಲ್ಲಿ ಜಾರಿ ಸಮುದ್ರ ಪಾಲಾಗುತ್ತವೆ. ಕೆಲವು ದೇವಸ್ಥಾನ, ದೈವಸ್ಥಾನಗಳಲ್ಲಿ ವಿಸರ್ಜಿಸಿದ ದೇವದೈವಗಳ ಬೆಳ್ಳಿ, ಪಂಚಲೋಹಗಳ ವಿಗ್ರಹಗಳನ್ನು ಸಮುದ್ರದಲ್ಲಿ ವಿಸರ್ಜಿಸುವುದಿದೆ. ಅವು ನೇರವಾಗಿ ಮರಳಿನಡಿ ಸೇರಿಕೊಳ್ಳುತ್ತವೆ.
ಮಲೆಗಾಲದಲ್ಲಿ ಕಡಲಿನಡಿಯಿಂದ ಅಲೆಗಳು ಎದ್ದು ಬಂದಾಗ ಗೇಣು ಅಡಿ ಮರಳಿನಲ್ಲಿ ಹೂತಿರುವ ಚಿನ್ನ, ಬೆಳ್ಳಿ ಆಭರಣ, ಲೋಹದ ವಸ್ತುಗಳನ್ನು ದಡಕ್ಕೆ ತಂದು ಹಾಕುತ್ತದೆ. ಇದನ್ನು ತಿಳಿದಿರುವ ಸ್ಥಳೀಯ ಯುವಕರು ಪ್ರತಿವರ್ಷ ಕಡಲ ತೀರದ ಕಸದ ರಾಶಿಯಲ್ಲಿ ಚಿನ್ನ- ಬೆಳ್ಳಿಗಾಗಿ ಹುಡುಕಾಡುತ್ತಾರೆ, ಅದೃಷ್ಟಇದ್ದವರು ಅದನ್ನು ಪಡೆಯುತ್ತಾರೆ.