ಭಾರತದ ವಿದ್ಯುತ್ ಭವಿಷ್ಯದಲ್ಲಿ ಕರ್ನಾಟಕವೇ ಹೈಲೈಟ್‌: ಬೆಂಗಳೂರಿನಲ್ಲಿ Elecrama 2027 ಮೊದಲ ರೋಡ್‌ಶೋ ನಡೆಸಿದ IEEMA

Published : Oct 24, 2026, 04:01 PM IST
elecrama 2027

ಸಾರಾಂಶ

ಬೆಂಗಳೂರಿನಲ್ಲಿ ಐಇಇಎಮ್‌ಎ ವತಿಯಿಂದ 'ಎಲೆಕ್ಟ್ರಾಮಾ 2027 ಪ್ರೀವ್ಯೂ ಮೀಟ್' ಯಶಸ್ವಿಯಾಗಿ ಜರುಗಿತು. 2027ರ ಫೆಬ್ರವರಿಯಲ್ಲಿ ನಡೆಯಲಿರುವ ಈ ಬೃಹತ್ ಜಾಗತಿಕ ವಿದ್ಯುತ್ ಪ್ರದರ್ಶನವು ಭಾರತದ ಇಂಧನ ಕ್ಷೇತ್ರದಲ್ಲಿ ಕರ್ನಾಟಕದ ನಾಯಕತ್ವವನ್ನು ಎತ್ತಿಹಿಡಿಯಲಿದೆ.

ಬೆಂಗಳೂರು (ಅ.24): 'ಭಾರತೀಯ ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಕರ ಸಂಘ' (IEEMA) ಶುಕ್ರವಾರ ರಾಜಧಾನಿ ಬೆಂಗಳೂರಿನಲ್ಲಿ 'ಎಲೆಕ್ಟ್ರಾಮಾ 2027 ಪ್ರೀವ್ಯೂ ಮೀಟ್' (ELECRAMA 2027 Preview Meet) ಅನ್ನು ಯಶಸ್ವಿಯಾಗಿ ಆಯೋಜಿಸಿತು. ದೇಶದ 90 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಬೃಹತ್ ವಿದ್ಯುತ್ ಕ್ಷೇತ್ರದಲ್ಲಿ ದಕ್ಷಿಣ ಭಾರತ, ಅದರಲ್ಲೂ ವಿಶೇಷವಾಗಿ ಕರ್ನಾಟಕ ರಾಜ್ಯದ ವಿದ್ಯುತ್ ಉಪಕರಣ ತಯಾರಿಕಾ ಉದ್ಯಮದ ಮಹತ್ವದ ಕೊಡುಗೆ ಹಾಗೂ ತಾಂತ್ರಿಕ ನಾವೀನ್ಯತೆಗಳನ್ನು ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಯಿತು.

ವಿಶ್ವದ ಅತಿದೊಡ್ಡ ವಿದ್ಯುತ್ ಪ್ರದರ್ಶನ ಮೇಳವೆಂದೇ ಹೆಸರುವಾಸಿಯಾಗಿರುವ 'ಎಲೆಕ್ಟ್ರಾಮಾ 2027' ರ ಜಾಗತಿಕ ಜಾಗೃತಿ ಅಭಿಯಾನದ ಭಾಗವಾಗಿ ಈ ಕಾರ್ಯಕ್ರಮ ನೆರವೇರಿದ್ದು, ಭಾರತದ ಇಂಧನ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಕರ್ನಾಟಕದ ಬೆಳೆಯುತ್ತಿರುವ ಲೀಡರ್‌ಷಿಪ್‌ ಪಾತ್ರವನ್ನು ಪುನರುಚ್ಚರಿಸಿದೆ.

ಫೆಬ್ರವರಿ 20 ರಿಂದ 24 ರವರೆಗೆ ‘ಎಲೆಕ್ಟ್ರಾಮಾ 2027’

ಜಾಗತಿಕ ವಿದ್ಯುತ್ ಉದ್ಯಮದ ಹೆಗ್ಗುರುತಾಗಿರುವ 'ಎಲೆಕ್ಟ್ರಾಮಾ 2027' ರ ಬೃಹತ್ ಪ್ರದರ್ಶನವನ್ನು 2027 ರ ಫೆಬ್ರವರಿ 20 ರಿಂದ 24 ರವರೆಗೆ ನಡೆಸಲು ಐಇಇಎಮ್‌ಎ (IEEMA) ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಗಾತ್ರ, ಭಾಗಿಗಳ ಸಂಖ್ಯೆ ಹಾಗೂ ಜಾಗತಿಕ ಮಟ್ಟದ ತಲುಪುವಿಕೆಯಲ್ಲಿ ಇದು ಆವೃತ್ತಿಯಲ್ಲೇ ಅತಿ ದೊಡ್ಡ ಪ್ರದರ್ಶನವಾಗಲಿದ್ದು, ಹೊಸ ದಾಖಲೆಗಳನ್ನು ಬರೆಯಲಿದೆ.

ಈ ಬಾರಿಯ ಪ್ರದರ್ಶನದಲ್ಲಿ 1,100 ಕ್ಕೂ ಹೆಚ್ಚು ಪ್ರದರ್ಶಕರು (Exhibitors) ಪಾಲ್ಗೊಳ್ಳಲಿದ್ದಾರೆ. 5 ಲಕ್ಷಕ್ಕೂ ಹೆಚ್ಚು ವೀಕ್ಷಕರು ಮತ್ತು ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ ಎನ್ನಲಾಗಿದ್ದು, 25,000 ಕ್ಕೂ ಹೆಚ್ಚು ಉದ್ಯಮದಿಂದ ಉದ್ಯಮದ (B2B) ದ್ವಿಪಕ್ಷೀಯ ಸಭೆಗಳು ನಡೆಯಲಿವೆ. 500 ಕ್ಕೂ ಹೆಚ್ಚು ವಿದೇಶಿ ಆಹ್ವಾನಿತ ಗ್ರಾಹಕರು/ಖರೀದಿದಾರರು (Hosted buyers) ಭಾಗವಹಿಸಲಿದ್ದಾರೆ. 10 ಕ್ಕೂ ಹೆಚ್ಚು ದೇಶಗಳ ಪ್ರತ್ಯೇಕ Pavilions ಇರಲಿದ್ದು, ಜರ್ಮನಿ ದೇಶವು 'ಪಾಲುದಾರ ದೇಶ'ವಾಗಿ (Partner Country) ಭಾಗವಹಿಸುತ್ತಿದೆ.

ಈ ಬಾರಿಯ ಪ್ರದರ್ಶನವು ‘ಐ ಶಕ್ತಿಯ ಬಳಕೆ’ (Harnessing the Power of I) ಎನ್ನುವ ವಿಶೇಷ ಆಶಯದೊಂದಿಗೆ (Theme) ನಡೆಯಲಿದ್ದು, ಜಾಗತಿಕ ವಿದ್ಯುತ್ ಮಾರುಕಟ್ಟೆಯಲ್ಲಿ ಭಾರತದ ಬೆಳೆಯುತ್ತಿರುವ ಪ್ರಾಬಲ್ಯ, ತಾಂತ್ರಿಕ ನಾವೀನ್ಯತೆ ಹಾಗೂ ಭಾರತೀಯ ತಯಾರಿಕಾ ವಲಯದ ಅಂತರರಾಷ್ಟ್ರೀಯ ಹೆಜ್ಜೆಯನ್ನು ವಿಶ್ವಕ್ಕೆ ಪ್ರದರ್ಶಿಸಲಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಎಲೆಕ್ಟ್ರಾಮಾ ಅಧ್ಯಕ್ಷ ಹಾಗೂ ಹರ್ಟೆಕ್ ಗ್ರೂಪ್‌ನ ಅಧ್ಯಕ್ಷರಾದ ಹರ್ಟೆಕ್ ಸಿಂಗ್, "ಎಲೆಕ್ಟ್ರಾಮಾ ವಿಶ್ವದ ಅತಿದೊಡ್ಡ ಸ್ವತಂತ್ರ ವಿದ್ಯುತ್ ಎಕ್ಸಿಬಿಷನ್‌ ಆಗಿದೆ. ಭಾರತದ ವಿದ್ಯುತ್ ವಲಯದ ಭವಿಷ್ಯವನ್ನು ರೂಪಿಸಲು ಉದ್ಯಮದ ನಾಯಕರು, ಸಂಶೋಧಕರು ಮತ್ತು ಶೇರುದಾರರನ್ನು ಒಂದೇ ವೇದಿಕೆಗೆ ತರುವ ಪ್ರಮುಖ ವೇದಿಕೆ ಇದಾಗಿದೆ. 'ಹಾರ್ನೆಸಿಂಗ್ ದಿ ಪವರ್ ಆಫ್ ಐ' ಥೀಮ್ ಮೂಲಕ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ತಯಾರಿಕೆ ಮತ್ತು ಇಂಧನ ಪರಿವರ್ತನೆಯಲ್ಲಿ ಭಾರತದ ನಾಯಕತ್ವದ ಮೇಲೆ ನಾವು ಬೆಳಕು ಚೆಲ್ಲುತ್ತಿದ್ದೇವೆ. ಪಾಲುದಾರ ದೇಶ ಜರ್ಮನಿ ಮಾತ್ರವಲ್ಲದೆ ಜಗತ್ತಿನ ಮೂಲೆ ಮೂಲೆಗಳಿಂದ ಭಾರಿ ಜಾಗತಿಕ ಭಾಗವಹಿಸುವಿಕೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ" ಎಂದರು.

ಎಲೆಕ್ಟ್ರಾಮಾ ಉಪಾಧ್ಯಕ್ಷ ಹಾಗೂ ಪಾಲಿಕ್ಯಾಬ್ ಸಂಸ್ಥೆಯ ನಿರ್ದೇಶಕ ಮತ್ತು ಸಿಇಒ ಶಶಿ ಅಮೀನ್ ಮಾತನಾಡಿ, "ಭಾರತದ ಸುಧಾರಿತ ವಿದ್ಯುತ್ ಮೂಲಸೌಕರ್ಯವು ನಾವೀನ್ಯತೆ ಮತ್ತು ಬೆಳವಣಿಗೆಗೆ ಅಪಾರ ಅವಕಾಶಗಳನ್ನು ನೀಡುತ್ತಿದೆ. ಸುಸ್ಥಿರ ವಿದ್ಯುತ್ ವ್ಯವಸ್ಥೆಯನ್ನು ರೂಪಿಸಲು ಎಲೆಕ್ಟ್ರಾಮಾ ಸಹಕಾರಿ ವಾತಾವರಣವನ್ನು ಸೃಷ್ಟಿಸುತ್ತದೆ. ಜರ್ಮನಿಯು ಪಾಲುದಾರ ದೇಶವಾಗಿ ಸೇರಿಕೊಂಡಿರುವುದು ಪ್ರದರ್ಶನಕ್ಕೆ ಜಾಗತಿಕ ಆಯಾಮ ತಂದಿದ್ದು, ಭಾರತೀಯ ಉದ್ಯಮದ ಸಾಮರ್ಥ್ಯವನ್ನು ಜಾಗತಿಕ ಮಾರುಕಟ್ಟೆಗೆ ಜೋಡಿಸಲಿದೆ" ಎಂದರು.

ದಕ್ಷಿಣ ಭಾರತದಲ್ಲಿ ಸ್ಟಾರ್ಟ್‌ಅಪ್ ಕ್ರಾಂತಿ ಮತ್ತು ಐಡಿಯಾಥಾನ್

ಐಇಇಎಮ್‌ಎ ದಕ್ಷಿಣ ಪ್ರಾದೇಶಿಕ ಅಧ್ಯಕ್ಷ ಹಾಗೂ ಸಿಕಾಮೆ ಇಂಡಿಯಾ ಕನೆಕ್ಟರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶೈನ್ ದಾಮೋದರನ್ ಮಾತನಾಡಿ, "ದಕ್ಷಿಣ ಭಾರತದಲ್ಲಿ ಐಇಇಎಮ್‌ಎ ಸತತ ಸಭೆಗಳು ಮತ್ತು ರಾಜ್ಯ ಮಟ್ಟದ ಪವರ್ ಕಾನ್ಕ್ಲೇವ್‌ಗಳ ಮೂಲಕ ಉದ್ಯಮದ ಪ್ರಗತಿಗೆ ಭಾರಿ ವೇಗ ನೀಡಿದೆ. ಎಲೆಕ್ಟ್ರಾಮಾ 2027 ರಲ್ಲೂ ದಕ್ಷಿಣ ಭಾರತದಿಂದ ಭಾರಿ ಸಂಖ್ಯೆಯ ಪ್ರದರ್ಶಕರು ಭಾಗವಹಿಸಲಿದ್ದಾರೆ" ಎಂದರು.

ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಕಚೇರಿಗಳನ್ನು ವಿಸ್ತರಿಸುತ್ತಿರುವ ಐಇಇಎಮ್‌ಎ, ತನ್ನ ಪ್ರತ್ಯೇಕ ಸ್ಟಾರ್ಟ್‌ಅಪ್ ನೀತಿ 'ಎಲೆಕ್ಟ್ರಾವರ್ಸ್' (Electraverse) ಮೂಲಕ ಡಿಸೆಂಬರ್ ತಿಂಗಳಿನಲ್ಲಿ 'ಐಡಿಯಾಥಾನ್' (Ideathon) ಸೇರಿದಂತೆ ಹಲವು ಸರಣಿ ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ರೂಪಿಸಿದೆ.

ಐಇಇಎಮ್‌ಎ ಮತ್ತು ಎಲೆಕ್ಟ್ರಾಮಾ ಹಿನ್ನೆಲೆ

ಐಇಇಎಮ್‌ಎ (IEEMA): 1948 ರಲ್ಲಿ ಸ್ಥಾಪನೆಯಾದ ಐಇಇಎಮ್‌ಎ, ಭಾರತದ ಎಲೆಕ್ಟ್ರಿಕಲ್, ಕೈಗಾರಿಕಾ ಎಲೆಕ್ಟ್ರಾನಿಕ್ಸ್ ಮತ್ತು ಸಂಯೋಜಿತ ಉಪಕರಣ ತಯಾರಕರ ಅತ್ಯುನ್ನತ ಸಂಸ್ಥೆಯಾಗಿದೆ. ಇದು ಭಾರತದ ಮೊದಲ ಐಎಸ್‌ಒ (ISO) ಪ್ರಮಾಣೀಕೃತ ಉದ್ಯಮ ಸಂಘಟನೆಯಾಗಿದ್ದು, ವಿದ್ಯುತ್ ಉತ್ಪಾದನೆ, ಸಾಗಣೆ, ಹಂಚಿಕೆ ಮತ್ತು ನವೀಕರಿಸಬಹುದಾದ ಇಂಧನ ವಲಯದ ಸಂಪೂರ್ಣ ಮೌಲ್ಯ ಸರಪಳಿಯನ್ನು ಪ್ರತಿನಿಧಿಸುತ್ತದೆ.

ಎಲೆಕ್ಟ್ರಾಮಾ (ELECRAMA): ಇದು ಐಇಇಎಮ್‌ಎ ಸಂಸ್ಥೆಯ ಪ್ರಮುಖ ಪ್ರದರ್ಶನವಾಗಿದ್ದು, ಮೂಲದಿಂದ ಹಿಡಿದು ಸಾಕೆಟ್‌ವರೆಗೆ ವಿದ್ಯುತ್ ಕ್ಷೇತ್ರದ ಸಂಪೂರ್ಣ ತಂತ್ರಜ್ಞಾನ ವ್ಯವಸ್ಥೆಯನ್ನು ಪ್ರದರ್ಶಿಸುತ್ತದೆ. ಇದು ಜಾಗತಿಕ ತಂತ್ರಜ್ಞಾನ, ನೂತನ ಟ್ರೆಂಡ್‌ಗಳು ಮತ್ತು ಇಂಧನ ಪರಿವರ್ತನೆಗೆ ಭಾರತೀಯ ಉದ್ಯಮವನ್ನು ಪ್ರಪಂಚದೊಂದಿಗೆ ಜೋಡಿಸುವ ಬೃಹತ್ ವೇದಿಕೆಯಾಗಿದೆ.

PREV
Read more Articles on
click me!

Recommended Stories

ಹೆಸರು ಪ್ರಿಯಾಂಕಾ ಅಲ್ವಾ, ಅವರು ಯಾವಾಗಲು ಕ್ಯಾತೆ ಸಚಿವ, ಒಕೆ ಅಲ್ಲ; ಆರ್ ಅಶೋಕ್ ಟಾಂಗ್
ದರ್ಶನ್ ರಿಲೀಸ್‌ಗೆ ಕೆಲವರು ನಾಟಕ ಮಾಡ್ತಿದ್ದಾರೆ, ವಿಜಯಲಕ್ಷ್ಮಿ ವಿರುದ್ಧವೇ ದೂರು ನೀಡಿದ ನಟ ಧನ್ವೀರ್