ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಆತ್ಮಹತ್ಯೆ ಯತ್ನ

By Kannadaprabha News  |  First Published Feb 27, 2021, 7:36 AM IST

ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 


ಕಲಬುರಗಿ (ಫೆ.27):  ಆತ್ಮಹತ್ಯೆ ಮಾಡಿಕೊಂಡು ಖಾಸಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಕರ ಬಿರಾದಾರ್‌ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಜೇವರ್ಗಿ ತಾಲೂಕಿನ ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಪ್ರಕಾಶ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು.

ಜಿಲ್ಲಾಧಿಕಾರಿ ಬರುವವರೆಗೂ ಇಲ್ಲಿಂದ ಕದಲುವುದಿಲ್ಲವೆಂದು ಪಟ್ಟುಹಿಡಿದರೂ ಜಿಲ್ಲಾಧಿಕಾರಿ ಮನವಿ ಸ್ವೀಕರಿಸದಿದ್ದರಿಂದ ಆಕ್ರೋಶಗೊಂಡ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಇದರಿಂದಾಗಿ ಕೆಲಹೊತ್ತು ಶಿಕ್ಷಕರ ಮಧ್ಯೆ ಆತಂಕ ಉಂಟಾಯಿತು. ಅಲ್ಲಿಯೇ ಇದ್ದ ಪೊಲೀಸ್‌ ವಾಹನದಲ್ಲಿ ಅಸ್ವಸ್ಥಗೊಂಡ ಪ್ರಕಾಶರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.

Latest Videos

undefined

ಪ್ರತಿಭಟನಾಕಾರರ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದರೂ ಸಿಬ್ಬಂದಿಯನ್ನು ಕಳಿಸಿದ್ದರಿಂದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸಾವನ್ನಪ್ಪಿದ್ದರೂ ಜಿಲ್ಲಾಧಿಕಾರಿಗೆæ ಕಳಕಳಿಯಿಲ್ಲ. ಶಿಕ್ಷಣ ಸಂಸ್ಥೆಗಳ ಸಮಸ್ಯೆ ಇವರಿಗೆ ಅರ್ಥವಾಗುತ್ತಿಲ್ಲವೆ ಎಂದು ಪ್ರತಿಭಟನಾಕಾರರು ಬೊಬ್ಬೆ ಹಾಕಿದರು. ಪ್ರತಿಭಟನೆಯ ಸ್ವರೂಪ ಬದಲಾಗುತ್ತಿದ್ದಂತೆಯೇ ಅಪರ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿದರು.

ವಿಶ್ವಗಂಗಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರ ಬಿರಾದಾರ್‌ ಸುಮಾರು 21 ವರ್ಷಗಳಿಂದ ಶಾಲೆ ಮತ್ತು ಇತರ ವೃತ್ತಿಪರ ತರಬೇತಿ ಸಂಸ್ಥೆಗಳನ್ನು ತೆರೆದಿದ್ದರು. ಸರ್ಕಾರದ ಕಠಿಣ ನಿಯಮಗಳಿಂದಾಗಿ ಹಾಗೂ ಖಾಸಗಿ ಲೇವಾದೇವಿ, ಬ್ಯಾಂಕ್‌, ಇನ್ನಿತರ ಹಣಕಾಸು ಸಂಸ್ಥೆಗಳ ಕಿರುಕುಳದಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಪಾದಿಸಿದರು.

ಕಟ್ಟಡದಿಂದ ಜಿಗಿದು ರಿಯಲ್‌ ಎಸ್ಟೇಟ್‌ ಏಜೆಂಟ್‌ ಆತ್ಮಹತ್ಯೆ ... 

ಶಂಕರ ಬಿರಾದಾರ್‌ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು. ಮುಂದಿನ ಶೈಕ್ಷಣಿಕ ವರ್ಷ ಶಾಲೆಗಳು ಆರಂಭವಾದ 3 ತಿಂಗಳವರೆಗೆ ಕಂತುಗಳನ್ನು ಕಟ್ಟಲು ಅವಕಾಶ ಮಾಡಿಕೊಡಬೇಕು. ಶಿಕ್ಷಣ ಇಲಾಖೆ ಶೀಘ್ರವಾಗಿ ಶಾಲೆಗಳ ನವೀಕರಣಕ್ಕೆ ವಿಧಿಸಿದ ನಿಯಮಗಳನ್ನು ಕೈಬಿಡಬೇಕು. ಪ್ರಸಕ್ತ ಸಾಲಿನ ಆರ್‌ಟಿಇ ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು. ಕೂಡಲೇ 1ನೇ ತರಗತಿಯಿಂದ 10ನೇ ತರಗತಿವರೆಗೆ ಶಾಲೆಗಳನ್ನು ಆರಂಭಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಪ್ಯಾಕೇಜ್‌ ಘೋಷಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಸುನೀಲ್‌ ಹುಡಗಿ, ಜಿಲ್ಲಾ ಸಂಚಾಲಕ ಅರುಣಕುಮಾರ ಪೋಚಾಲ, ಸಾಹೇಬಗೌಡ, ಜಿ.ಜಿ.ಯಾಳಗಿ, ಶಿವಕುಮಾರ ಪಾವರಿಯಾ, ಚನ್ನಬಸಪ್ಪ ಗಾರಂಪಳ್ಳಿ, ವಿಜಯಕುಮಾರ ಸುರವಾರ, ಭೀಮಶೆಟ್ಟಿಮುರಡಾ, ಸಿದ್ದಾರೆಡ್ಡಿ, ಬಾಬುರಾವ ಸುಳ್ಳದ, ಸಂತೋಷ ಪವಾರ, ಗೊಲ್ಲಾಳಪ್ಪ ಬಿರಾದಾರ ಇದ್ದರು.

click me!