'5 ಸ್ಥಾನದಲ್ಲಿ ಜೆಡಿಎಸ್ ಗೆಲ್ಲೋದು ಪಕ್ಕಾ'

By Kannadaprabha News  |  First Published Nov 27, 2019, 11:03 AM IST

ರಾಜ್ಯದಲ್ಲಿ ಇನ್ನು ಕೆಲವೇ ದಿನ ಉಪ ಚುನಾವಣೆ ಬಾಕಿ ಉಳಿದಿದ್ದು, 5 ಸ್ಥಾನಗಳು ಜೆಡಿಎಸ್ ಗೆ ಪಕ್ಕಾ ಎಂದು ಶಾಸಕರೋರ್ವರು ಭವಿಷ್ಯ ನುಡಿದಿದ್ದಾರೆ. 


ಕೆ.ಆರ್.ಪೇಟೆ[ನ.27]: ದಲಿತ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ ಮಾಜಿ ಪ್ರಧಾನಿ ಎಚ್ .ಡಿ. ದೇವೇಗೌಡರು, ಮಾಜಿ ಸಿಎಂ ಕೈ ಬಲಪಡಿಸಲು ಸಮುದಾಯದ ಜನರು ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜುಗೆ ಮತ ನೀಡಬೇಕು ಎಂದು ಮಳವಳ್ಳಿ ಕ್ಷೇತ್ರದ ಶಾಸಕ ಡಾ.ಕೆ. ಅನ್ನದಾನಿ  ಮನವಿ ಮಾಡಿದರು. 

ಪಟ್ಟಣದ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ನಿವಾಸದಲ್ಲಿ ದಲಿತ ಸಮುದಾಯದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ದೇವೇಗೌಡರು ಸಿಎಂ ಆಗಿದ್ದಾಗ ಗಂಗಾಕಲ್ಯಾಣ ಯೋಜನೆಯಡಿ ದಲಿತರ ಜಮೀನಿಗೆ ನೀರಾವರಿ ಸೌಲಭ್ಯ ಕೊಟ್ಟಿದ್ದಾರೆ. ಸ್ಥಳೀಯ ಆಡಳಿತದಲ್ಲಿ ಮೀಸಲಾತಿ ನೀಡಿದ್ದಾರೆ. 

Latest Videos

undefined

ದಲಿತರು ರಾಜಕೀಯವಾಗಿ ಅಭಿವೃದ್ಧಿ ಹೊಂದಿದ್ದಾರೆ. ಅವರು ದಲಿತಪರ ಹಲವು ಯೋಜನೆ ನೀಡಿದ್ದಾರೆ. ಆದ್ದರಿಂದ ದಲಿತರು ಜೆಡಿಎಸ್‌ಗೆ ಮತಹಾಕಬೇಕು ಎಂದು ಕೋರಿದರು. ದೇವೇಗೌಡರು ಕ್ಷೇತ್ರಕ್ಕೆ ಹೇಮಾವತಿ ನೀರು ನೀಡಲು ಶ್ರಮಿಸಿದ್ದಾರೆ. ನಾರಾಯಣಗೌಡರ ಸ್ವಾರ್ಥಕ್ಕಾಗಿ ಉಪಚುನಾವಣೆ ಬಂದಿದೆ. ದಲಿತರು ಜಾತ್ಯತೀತ ಪಕ್ಷಕ್ಕೆ ಸಾಂಪ್ರದಾಯಿಕವಾಗಿ ಮತ ಕೊಟ್ಟಿದೆ. ಬಿಜೆಪಿ ಮನುವಾದ, ದಲಿತ, ಹಿಂದುಳಿದ
ವರ್ಗಗಳ ತಾತ್ಸರ ಮಾಡುತ್ತಿರುವುದರಿಂದ ನಮ್ಮ ಸಮುದಾಯ ಬಿಜೆಪಿಗೆ ಮತ ಕೊಡಲ್ಲ ಎಂದರು. ಸಿಎಂ ಯಡಿಯೂರಪ್ಪ ಸರ್ಕಾರ ಈಗಲೂ ಅಸ್ಥಿರವಾಗಿದೆ. ಚುನಾವಣೆಯಲ್ಲಿ 10 ಸ್ಥಾನ ಗೆಲ್ಲದಿದ್ದರೆ ಸರ್ಕಾರ ಬೀಳಲಿದೆ. 5 ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಲಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಲೂಕಿನಲ್ಲಿ ದಲಿತ ಸಂಘಟನೆ ಸಮಿತಿ ಜೆಡಿಎಸ್ ಪರವಾಗಿ ಕೆಲಸ ಮಾಡಲಿದೆ. ಕೆ. ಆರ್. ಪೇಟೆ ಕ್ಷೇತ್ರ ಜೆಡಿಎಸ್ ಭದ್ರಕೋಟೆ ಆಗಿದೆ. ಬಿ.ಎಲ್. ದೇವರಾಜು ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎರಡು ಬಾರಿ ಅಂಬೇಡ್ಕರ್ ಸೋಲಿಸಿದ್ದವರೇ ಕಾಂಗ್ರೆಸ್. ಅದರ ನಡೆ ಕೂಡ ದಲಿತ ವಿರೋಧಿ ಆಗಿತ್ತು ಎಂಬುದನ್ನು ಅಂಬೇಡ್ಕರ್ ಹೇಳಿದ್ದಾರೆ. ಕಾಂಗ್ರೆಸ್ ದಲಿತ ವಿರೋಧಿ, ಬಿಜೆಪಿ ಮನುವಾದಿ ನಂಬಬೇಡಿ ಎಂದು ಹೇಳಿದ್ದಾರೆ. 

ಹಾಗಾಗಿಯೇ ಜಾತ್ಯತೀತ ಪಕ್ಷವಾಗಿರುವ ಜೆಡಿಎಸ್‌ಅನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಬಿ. ಶ್ರೀನಿವಾಸ್ ಮಾತನಾಡಿದರು. ಎಸ್ ಸಿ ಎಸ್ ಟಿ ಘಟಕದ ಜಿಲ್ಲಾಧ್ಯಕ್ಷ ಶಾತನೂರು ಜಯರಾಮ್, ನರಸಿಂಹ, ಟಿಎಪಿಸಿಎಂಎಸ್ ನಿರ್ದೇಶಕ ನಾಗರಾಜು, ಪರಮೇಶ್, ಕೆಂಪೇಗೌಡ, ಗಣೇಶ್, ಚನ್ನಕೃಷ್ಣ ಸೇರಿ ಹಲವರಿದ್ದರು.

ಡಿಸೆಂಬರ್ 5 ರಂದು ಚುನಾವಣೆ ನಡೆಯಲಿದ್ದು ಡಿಸೆಂಬರ್ 9ಕ್ಕೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. 

click me!