ಮತ್ತೊಮ್ಮೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. 2023ಕ್ಕೆ ಎಚ್ಡಿಕೆಗೆ ಸಿಎಂ ಪಟ್ಟ ಒಲಿಯಲಿದೆ ಎಂದು ಭವಿಷ್ಯ ನುಡಿಯಲಾಗಿದೆ.
ಪಾಂಡವಪುರ (ಫೆ.27): ‘ಜೆಡಿಎಸ್ ಎಲ್ಲಿದೆ, ಜೆಡಿಎಸ್ ಜೊತೆ ಹೋಗಲೇಬಾರದು ಎಂದು ಮೊನ್ನೆಯ ತನಕ ಹೇಳುತ್ತಲೇ ಇದ್ದರು. ಈಗ ನಾವು ಬೇಡ ಎಂದರೂ ಮೈಸೂರು ಮಹಾನಗರ ಪಾಲಿಕೆ ಅಧ್ಯಕ್ಷರ ಚುನಾವಣೆಯಲ್ಲಿ ಬಂದು ಮತ ಹಾಕಿದರು. ಈಗ ಗೊತ್ತಾಯಿತೇ ಜೆಡಿಎಸ್ ಶಕ್ತಿ ಏನೆಂದು?’ ಎಂದು ಕೆ.ಆರ್.ನಗರ ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷದ ಶಕ್ತಿ ಏನೆಂಬುದನ್ನು ಅರ್ಥ ಮಾಡಿಕೊಳ್ಳದವರಿಗೆ ಇದು ದೊಡ್ಡ ಸಾಕ್ಷಿ. ಸಿದ್ದರಾಮಯ್ಯಗೆ ಏನಾದರೂ ಅಧಿಕಾರ ಸಿಕ್ಕಿದ್ದರೆ ಅದು ಜೆಡಿಎಸ್‌ನಿಂದ ಮಾತ್ರ. ಜೆಡಿಎಸ್ ಇನ್ನೂ ಸಶಕ್ತವಾಗಿದೆ. ದೇವೇಗೌಡರು, ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ನಿಖಿಲ್, ಪ್ರಜ್ವಲ್ ಇದ್ದಾರೆ. ಮೈಸೂರು ಮಹಾನಗರ ಪಾಲಿಕೆ ಅಧ್ಯಕ್ಷರ ಚುನಾವಣೆ 2023ರ ಚುನಾವಣೆಯ ಸಂದೇಶವಾಗಿದೆ. ರಾಷ್ಟ್ರೀಯ ಪಕ್ಷಗಳು ಬಲಿಷ್ಠವಾಗಿದ್ದರೂ 2023ಕ್ಕೆ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದು ಖಚಿತ ಎಂದು ವಿಶ್ವಾಸದಿಂದ ಹೇಳಿದರು.
'ಸಿದ್ದು, ಹೆಚ್‌ಡಿಕೆಯಿಂದ ಮುಸ್ಲಿಮರ ಓಲೈಕೆಗಾಗಿ ತುಷ್ಟೀಕರಣ ರಾಜಕಾರಣ'
ರೈತರ ಪರವಾಗಿ ಸಮರ್ಥವಾಗಿ ಶಕ್ತಿ ಇರೋದು ಕೇವಲ ಜೆಡಿಎಸ್ ಪಕ್ಷಕ್ಕೆ ಮಾತ್ರ. ಇದೇ ಕಾರಣಕ್ಕೆ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ಕೂಡಲೇ ರೈತರ 23 ಸಾವಿರ ಕೋಟಿ ರು. ಸಾಲಮನ್ನಾ ಮಾಡಿದರು. ಪಿತೂರಿ ನಡೆಸಿ ಅಧಿಕಾರದಿಂದ ಕೆಳಗಿಳಿಸಿದರು. ರಾಜ್ಯದಲ್ಲಿ ಈಗೇನಾಗಿದೆ. ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವರ್ಗಾವಣೆ, ಟೆಂರ್ಡ ಹಂಚಿಕೆಯಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ. ರೈತರ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದವರು ಲೂಟಿ ಹೊಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.