Mandya : ಎಚ್‌.ಟಿ.ಮಂಜು ಜೆಡಿಎಸ್‌ ಟಿಕೆಟ್‌ಗೆ ಕಂಟಕ?

By Kannadaprabha NewsFirst Published Mar 12, 2023, 5:56 AM IST
Highlights

ಮಹತ್ವದ ಬೆಳವಣಿಗೆಯಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಘೋಷಿತ ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ.ಮಂಜು ಅವರನ್ನು ಬದಲಿಸಿ ಕುರುಬ ಸಮುದಾಯಕ್ಕೆ ಸೇರಿದ ತಾಲೂಕಿನ ಆಲಂಬಾಡಿ ಕಾವಲು ಗ್ರಾಮಕ್ಕೆ ಸೇರಿದ ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜನ್‌ ಅವರನ್ನು ಕಣಕ್ಕಿಳಿಸುವ ಹೊಸ ಚಿಂತನೆ ಜೆಡಿಎಸ್‌ ಪಾಳಯದಲ್ಲಿ ನಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ

 ಕೆ.ಆರ್‌.ಪೇಟೆ :  ಮಹತ್ವದ ಬೆಳವಣಿಗೆಯಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಘೋಷಿತ ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ.ಮಂಜು ಅವರನ್ನು ಬದಲಿಸಿ ಕುರುಬ ಸಮುದಾಯಕ್ಕೆ ಸೇರಿದ ತಾಲೂಕಿನ ಆಲಂಬಾಡಿ ಕಾವಲು ಗ್ರಾಮಕ್ಕೆ ಸೇರಿದ ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜನ್‌ ಅವರನ್ನು ಕಣಕ್ಕಿಳಿಸುವ ಹೊಸ ಚಿಂತನೆ ಜೆಡಿಎಸ್‌ ಪಾಳಯದಲ್ಲಿ ನಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಕ್ಷೇತ್ರದ ಕೆಲವು ಪ್ರಭಾವಿ ಮುಖಂಡರ ವಿರೋಧದ ನಡುವೆಯೂ ನಿರ್ದೇಶಕ ಎಚ್‌.ಟಿ.ಮಂಜು ಅವರಿಗೆ ಮೊದಲ ಸುತ್ತಿನಲ್ಲಿಯೇ ಜೆಡಿಎಸ್‌ ಟಿಕೆಟ್‌ ಘೋಷಿಸಿದೆ. ಎದುರಿಸುವ ಉತ್ಸಾಹದೊಂದಿಗೆ ಎಚ್‌.ಟಿ.ಮಂಜು ತಾಲೂಕಿನಾದ್ಯಂತ ಪ್ರಚಾರದ ಭರಾಟೆಯಲ್ಲಿ ತೊಡಗಿದ್ದಾರೆ.

Latest Videos

ಗೆಲ್ಲುವ ಅಭ್ಯರ್ಥಿಗಳ ಕೊರತೆ ಹಿನ್ನೆಲೆಯಲ್ಲಿ ಜೆಡಿಎಸ್‌ ಈಗಾಗಲೇ ಘೋಷಣೆ ಮಾಡಿರುವ ಸಂಭವನೀಯ ಅಭ್ಯರ್ಥಿಗಳಲ್ಲಿ ಕೆಲವು ಬದಲಾವಣೆ ಮಾಡಲು ಚಿಂತನೆ ನಡೆಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣದಿಂದ ರಾಜ್ಯಾದ್ಯಂತ ಜೆಡಿಎಸ್‌ ಪಕ್ಷದ ವಿರುದ್ಧ ಮುನಿಸಿಕೊಂಡಿರುವ ಕುರುಬ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಜೆಡಿಎಸ್‌ ಪಾಳಯದಲ್ಲಿ ಹೊಸ ಚಿಂತನೆ ನಡೆಯುತ್ತಿದೆ.

ಕುರುಬ ಸಮುದಾಯದವರಿಗೆ ಟಿಕೆಟ್‌:

ಕಾಂಗ್ರೆಸ್‌ ವಿರುದ್ಧ ಕುರುಬ ಸಮಾಜ ತಿರುಗಿ ಬೀಳುವಂತೆ ಮಾಡಲು ಜೆಡಿಎಸ್‌ ಜಿಲ್ಲೆಗೊಬ್ಬರಂತೆ ಕುರುಬ ಸಮುದಾಯದ ಒಬ್ಬರಿಗೆ ಟಿಕೆಟ್‌ ನೀಡಲು ಚಿಂತಿಸಿದೆ. ಒಕ್ಕಲಿಗ ಬಾಹುಳ್ಯದ ಮಂಡ್ಯದ ಕೆ.ಆರ್‌.ಪೇಟೆಯಲ್ಲೇ ಇದನ್ನು ಪ್ರಯೋಗ ಮಾಡುವುದಕ್ಕೆ ಜೆಡಿಎಸ್‌ ಮುಂದಾಗಿದೆ ಎನ್ನಲಾಗಿದ್ದು, ಕೆ.ಆರ್‌.ಪೇಟೆಯಲ್ಲಿ ಈಗಾಗಲೇ ಘೋಷಣೆಯಾಗಿರುವ ಅಭ್ಯರ್ಥಿ ಎಚ್‌.ಟಿ.ಮಂಜು ಅವರನ್ನು ಬದಲಿಸಿ ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ್‌ ಅವರನ್ನು ಕಣಕ್ಕಿಳಿಸಿದರೆ ಹೇಗೆ ಎನ್ನುವ ಚರ್ಚೆ ಆರಂಭವಾಗಿದೆ. ಹೀಗಾಗಿ ಘೋಷಿತ ಒಕ್ಕಲಿಗ ಅಭ್ಯರ್ಥಿ ಎಚ್‌.ಟಿ.ಮಂಜು ಅವರನ್ನು ತೆಗೆದು ಕುರುಬ ಸಮಾಜದ ಮಲ್ಲಿಕಾರ್ಜುನ್‌ ಅವರನ್ನು ಕಣಕ್ಕಿಳಿಸುವ ಲೆಕ್ಕಾಚಾರ ನಡೆದಿದೆ ಎನ್ನಲಾಗಿದೆ.

ಕಾಂಗ್ರೆಸ್‌ ಪಾಳಯದಲ್ಲಿ ಮಲ್ಲಿಕಾರ್ಜುನ್‌:

ಮಲ್ಲಿಕಾರ್ಜುನ್‌ ಅವರು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರ ಬಾವ ಮೈದುನ. ಅಲ್ಲದೇ, ಸದ್ಯ ಆರ್‌ಟಿಒ ಅಧಿಕಾರಿಯಾಗಿದ್ದು, ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷರೂ ಆಗಿದ್ದಾರೆ. ಮೂಲತಃ ಕೆ.ಆರ್‌.ಪೇಟೆ ತಾಲೂಕಿನ ಆಲಂಬಾಡಿ ಕಾವಲು ಗ್ರಾಮದ ಜಮೀನ್ದಾರ್‌ ಕುಟುಂಬದ ಮಲ್ಲಿಕಾರ್ಜುನ್‌ ಕಳೆದ ಒಂದು ವರ್ಷದಿಂದ ನಾನಾ ರೀತಿಯ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿದ್ದರು. ಮಲ್ಲಿಕಾರ್ಜುನ್‌ ಅವರನ್ನು ಕಾಂಗ್ರೆಸ್‌ಗೆ ಸೆಳೆಯಲು ಚಿಂತಿಸಿದ್ದರು. ಇದಕ್ಕೆ ಒಂದು ಹಂತದಲ್ಲಿ ಮಲ್ಲಿಕಾರ್ಜುನ್‌ ಕೂಡ ಒಪ್ಪಿಗೆ ನೀಡಿದ್ದರು. ಜಿಲ್ಲಾ ನಾಯಕರು ಸಹಮತ ತೋರಿಸಿದ್ದರು. ಆದರೆ, ಸಚಿವ ಕೆ.ಸಿ.ನಾರಾಯಣಗೌಡರ ಕಾಂಗ್ರೆಸ್‌ ಆಗಮನದ ಸದ್ದು ಕ್ಷೇತ್ರ ಕಾಂಗ್ರೆಸ್‌ ಪಾಳಯವನ್ನು ಗೊಂದಲದ ಗೂಡಾಗಿಸಿದೆ.

ಜೆಡಿಎಸ್‌ಗೆ ಸೆಳೆಯಲು ಯತ್ನ:

ಇದನ್ನು ತಿಳಿದ ಜೆಡಿಎಸ್‌ ಶಾಸಕ ಕೆ.ಆರ್‌.ನಗರದ ಸಾ.ರಾ.ಮಹೇಶ್‌ ಅವರು ಮಲ್ಲಿಕಾರ್ಜನ್‌ ಅವರನ್ನು ಜೆಡಿಎಸ್‌ಗೆ ಸೆಳೆಯಲು ಯತ್ನಿಸಿದ್ದಾರೆ. ಏಕೆಂದರೆ ಮಲ್ಲಿಕಾರ್ಜುನ್‌ ಅವರನ್ನು ಪಕ್ಷಕ್ಕೆ ಕರೆತಂದರೆ, ತಮ್ಮ ಕ್ಷೇತ್ರ ಕೆ.ಆರ್‌.ನಗರದಲ್ಲಿ ಕುರುಬ ಮತಗಳನ್ನು ಸುಲಭವಾಗಿ ಸೆಳೆಯಬಹುದು. ಹಾಗೆಯೇ ಕೆ.ಆರ್‌.ಪೇಟೆಯಲ್ಲಿ ಕುರುಬ ಮತ್ತು ಒಕ್ಕಲಿಗರ ಮತಗಳನ್ನು ಒಗ್ಗೂಡಿಸಿ ಮಲ್ಲಿಕಾರ್ಜುನ್‌ ಅವರನ್ನೂ ಗೆಲ್ಲಿಸಬಹುದು ಎನ್ನುವ ಲೆಕ್ಕಾಚಾರ ಸಾ.ರ.ಮಹೇಶ್‌ ಅವರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.

ಎಚ್‌.ಟಿ.ಮಂಜು ಅವರಿಗೆ ಟಿಕೆಟ್‌ ನೀಡಿರುವುದರ ಬಗ್ಗೆ ಅಸಮಾಧಾನಿತರಾಗಿರುವ ಕೆಲವು ಸ್ಥಳೀಯ ಮುಖಂಡರೂ ಮಲ್ಲಿಕಾರ್ಜುನ್‌ ಅವರನ್ನು ಜೆಡಿಎಸ್‌ಗೆ ಸೆಳೆದು ಅಭ್ಯರ್ಥಿ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಅವರು ಪಕ್ಷದ ನಾಯಕರಿಗೂ ಎರಡು ಬಾರಿ ಶಿಫಾರಸು ಮಾಡುವ ಧಾಟಿಯಲ್ಲೂ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲೇ ಸ್ಪರ್ಧಿಸುವ ಉಮೇದಿನಲ್ಲಿರುವ ಮಲ್ಲಿಕಾರ್ಜನ್‌ ಅವರನ್ನು ಕಾಂಗ್ರೆಸ್‌ ವಿರುದ್ಧದ ಅಸ್ತ್ರವಾಗಿ ಬಳಸಲು ಜೆಡಿಎಸ್‌ ನಾಯಕರು ಲೆಕ್ಕಾಚಾರ ಹಾಕಿದ್ದಾರೆ ಎಂದು ಪಕ್ಷದ ಆಪ್ತ ಮೂಲಗಳು ಹೇಳಿವೆ.

click me!