ಪರಿಷತ್ ಉಪಚುನಾವಣೆ: ಅಖಾಡಕ್ಕೆ JDS ಬೆಂಬಲಿತ ಪಕ್ಷೇತರ ಅಭ್ಯರ್ಥಿ

By Kannadaprabha NewsFirst Published Feb 7, 2020, 8:33 AM IST
Highlights

ಮೇಲ್ಮನೆ ಅಖಾಡಕ್ಕೆ ಜೆಡಿಎಸ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿ| ರೇವಣ್ಣ ಜತೆಗೂಡಿ ನಾಮಪತ್ರ ಸಲ್ಲಿಸಿದ ಅನಿಲ್‌| ಕಾಂಗ್ರೆಸ್ಸಿನ ಜತೆಗೂ ಗುರುತಿಸಿಕೊಂಡಿರುವ ಅಭ್ಯರ್ಥಿ| ಬಿಜೆಪಿ ವಿರುದ್ಧ ಮತ್ತೆ ಉಭಯ ಪಕ್ಷಗಳ ದೋಸ್ತಿ?|

ಬೆಂಗಳೂರು(ಫೆ.07): ವಿಧಾನಸಭೆಯಿಂದ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಫೆ. 17ರಂದು ನಡೆಯಲಿರುವ ಉಪಚುನಾವಣೆಗೆ ದಿಢೀರ್‌ ಬೆಳವಣಿಗೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿರುವ ಅನಿಲ್‌ಕುಮಾರ್‌ ನಾಮಪತ್ರ ಸಲ್ಲಿಸಿದ್ದಾರೆ.

ವಿಶೇಷವೆಂದರೆ ಅನಿಲ್‌ಕುಮಾರ್‌ ನಾಮಪತ್ರಕ್ಕೆ ಜೆಡಿಎಸ್‌ನ ಎಚ್‌.ಡಿ. ರೇವಣ್ಣ, ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪುರ, ಎ.ಟಿ. ರಾಮಸ್ವಾಮಿ, ಕೆ.ಎಂ. ಶಿವಲಿಂಗೇಗೌಡ ಸೇರಿ 10 ಶಾಸಕರು ಸೂಚಕರಾಗಿ ಸಹಿ ಹಾಕಿದ್ದಾರೆ. ಸೂಚಕರಾಗಿ ಕಾಂಗ್ರೆಸ್‌ ಶಾಸಕರು ಸಹಿ ಹಾಕಿದರೆ ಎರಡು ಪಕ್ಷಗಳು ಮತ್ತೆ ಒಂದಾಗಿವೆ ಎಂಬ ಸಂದೇಶ ಹೋಗಬಾರದು ಎಂಬ ಕಾರಣಕ್ಕೆ ಸಹಿ ಹಾಕಿಲ್ಲ ಎನ್ನಲಾಗಿದೆ. ಆದರೆ ಅನಿಲ್‌ಕುಮಾರ್‌ ಅವರಿಗೆ ಬೆಂಬಲ ನೀಡಲು ಕಾಂಗ್ರೆಸ್‌ ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೂಲತಃ ಜೆಡಿಎಸ್‌ ಜೊತೆ ಗುರುತಿಸಿಕೊಂಡಿದ್ದ ಅನಿಲ್‌ಕುಮಾರ್‌ ನಂತರ ಕೆಪಿಸಿಸಿ ಮಾಧ್ಯಮ ಸಂಯೋಜಕರಾಗಿ ಸಹ ಕಾರ್ಯನಿರ್ವಹಿಸಿದ್ದರು. ಈಗ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮೂಲಕ ಬಿಜೆಪಿ ಸಚಿವ ಸ್ಥಾನ ವಂಚಿತರು, ಅತೃಪ್ತರ ಬೆಂಬಲ ಪಡೆಯುವ ಪ್ರಯತ್ನವನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಾಡಲು ಉದ್ದೇಶಿಸಿವೆ. ಆದರೆ ಅನಿಲ್‌ಕುಮಾರ್‌ ಬೆಂಬಲಿಸುವ ಸಂಬಂಧ ಕಾಂಗ್ರೆಸ್‌ ಪಕ್ಷದಿಂದ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ರೇವಣ್ಣ ಸಾಥ್‌:

ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಗುರುವಾರ ಅನಿಲ್‌ಕುಮಾರ್‌ ಅವರು ಜೆಡಿಎಸ್‌ ಮುಖಂಡರಾದ ಎಚ್‌.ಡಿ. ರೇವಣ್ಣ, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಪರಿಷತ್‌ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ಕೋನರೆಡ್ಡಿ ಅವರೊಂದಿಗೆ ಆಗಮಿಸಿ ವಿಧಾನಸಭೆ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿಯೂ ಆಗಿರುವ ಎಂ.ಕೆ. ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಸಮಾನ ಮನಸ್ಕರ ಬೆಂಬಲ:

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ರೇವಣ್ಣ, ಸಮಾನ ಮನಸ್ಕರೆಲ್ಲರೂ ಸೇರಿ ಅನಿಲ್‌ಕುಮಾರ್‌ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇವೆ. ಎರಡು ಪಕ್ಷಗಳ ಮುಖಂಡರು ಸೇರಿ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದರು. ಅಭ್ಯರ್ಥಿ ಅನಿಲ್‌ಕುಮಾರ್‌ ಮಾತನಾಡಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮಗೆ ಎಲ್ಲರ ಬೆಂಬಲ ಸಿಗುವ ವಿಶ್ವಾಸವಿದೆ. ತಮ್ಮನ್ನು ಬೆಂಬಲಿಸುವಂತೆ ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ. ಜೆಡಿಎಸ್‌ ಮುಖಂಡರ ಬೆಂಬಲವೂ ಇರುವುದರಿಂದ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಒಟ್ಟು ಮೂರು ನಾಮಪತ್ರ

ವಿಧಾನ ಪರಿಷತ್‌ ಸದಸ್ಯರಾಗಿದ್ದ ರಿಜ್ವಾನ್‌ ಅರ್ಷದ್‌ ಶಾಸಕರಾಗಿ ಆಯ್ಕೆಯಾಗಿರುವುದರಿಂದ ತೆರವಾಗಿರುವ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಡಾ. ಕೆ. ಪದ್ಮರಾಜನ್‌ ಹಾಗೂ ಅನಿಲ್‌ಕುಮಾರ್‌ ನಾಮಪತ್ರ ಸಲ್ಲಿಸಿದ್ದಾರೆ. ಫೆ.7 ನಾಮಪತ್ರಗಳ ಪರಿಶೀಲನೆ, ಫೆ. 10 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಅಗತ್ಯ ಬಿದ್ದರೆ ಫೆ. 17ರಂದು ಚುನಾವಣೆ ನಡೆಯಲಿದೆ.

click me!