ಜನಧನ್‌ ಖಾತೆಯಲ್ಲಿಲ್ಲ ಕೋಟಿ ಕೋಟಿ ಹಣ, ಇದ್ದದ್ದು ಇಷ್ಟೇ!

By Kannadaprabha News  |  First Published Feb 7, 2020, 8:23 AM IST

ವಹಿವಾಟಿನ ಮೇಲೆ ಬ್ಯಾಂಕ್‌ ನಿಗದಿಪಡಿಸಿದ್ದ ಹೋಲ್ಡ್‌ ಮೊತ್ತ 30 ಕೋಟಿ| ಅನುಮಾನಾಸ್ಪದ ಖಾತೆಯನ್ನು ಈ ರೀತಿ ಹೋಲ್ಡ್‌ ಮಾಡಲಾಗುತ್ತದೆ| '29,99,74,084’ ಅನ್ನು 30 ಲಕ್ಷ ಎಂದು ಭಾವಿಸಿದ್ದ ಖಾತೆದಾರರು|


ಚನ್ನಪಟ್ಟಣ(ಫೆ.07):  ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬಡ ಮಹಿಳೆಯ ಜನಧನ್‌ ಖಾತೆಯಲ್ಲಿ ನಡೆದಿರುವ ಬೇನಾಮಿ ವ್ಯವಹಾರ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್‌ ಸಿಕ್ಕಿದೆ. ಖಾತೆದಾರರು ಆರೋಪಿಸಿದಂತೆ ಅವರ ಖಾತೆಗೆ ಜಮೆಯಾಗಿರುವುದು 30 ಕೋಟಿ ಅಲ್ಲ, ಕೇವಲ 60.66 ಲಕ್ಷ ಎಂಬ ವಿಚಾರ ಇದೀಗ ಬಹಿರಂಗವಾಗಿದೆ.

ನಗರದ ಬೀಡಿ ಕಾರ್ಮಿಕರ ಕಾಲೋನಿಯ ನಿವಾಸಿ ರೆಹಾನಾಬಾನು ಎಂಬುವರ ಜನಧನ್‌ ಖಾತೆಗೆ 30 ಕೋಟಿ ಬೇನಾಮಿ ಹಣ ಜಮೆಯಾಗಿತ್ತು ಎಂಬ ಸುದ್ದಿ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಎಟಿಎಂನಲ್ಲಿ ಪರಿಶೀಲಿಸಿದಾಗ ಖಾತೆದಾರಿಗೆ ಕಂಡು ಬಂದ 30 ಕೋಟಿ ಮೊತ್ತ ಬ್ಯಾಂಕ್‌ ಬ್ಯಾಲೆನ್ಸ್‌ ಅಲ್ಲ, ಅದು ಹೋಲ್ಡ್‌ ಬ್ಯಾಲೆನ್ಸ್‌ ಎಂಬ ಸಂಗತಿ ಪೊಲೀಸ್‌ ತನಿಖೆ ವೇಳೆ ಬೆಳಕಿಗೆ ಬಂದಿದೆ.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬ್ಯಾಂಕ್‌ನಲ್ಲಿ ಯಾವುದಾದರೂ ಖಾತೆಯಲ್ಲಿ ಸಂದೇಹಾಸ್ಪದವಾಗಿ ವಹಿವಾಟು ನಡೆಯುತ್ತಿದ್ದರೆ ಒಂದು ನಿರ್ದಿಷ್ಟಗರಿಷ್ಠ ಮೊತ್ತದವರೆಗಷ್ಟೇ ಹಣ ಹಿಡಿದಿಟ್ಟುಕೊಳ್ಳುವ ಅಧಿಕಾರ ಬ್ಯಾಂಕ್‌ ಅ​ಧಿಕಾರಿಗಳಿಗೆ ಇದೆ. ಈ ರೀತಿ ಹೋಲ್ಡ್‌ ಮಾಡಿದಾಗ ಖಾತೆಯಲ್ಲಿ ಹೋಲ್ಡ್‌ ಮೊತ್ತ ಮುಗಿಯುವವರೆಗೆ ಯಾವುದೇ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ.

30 ಕೋಟಿಗೆ ಹೋಲ್ಡ್‌ ಯಾಕೆ?: 

ಸಾಮಾನ್ಯರ ಖಾತೆಯನ್ನು 10 ರಿಂದ 20 ಲಕ್ಷಗಳಿಗೆ ಹೋಲ್ಡ್‌ ಮಾಡುವುದು ಸರ್ವೇ ಸಾಮಾನ್ಯ. ಆದರೆ, ಈ ಪ್ರಕರಣದಲ್ಲಿ 30 ಕೋಟಿಗಳಿಗೆ ಹೋಲ್ಡ್‌ ಮಾಡಲು ಈ ಖಾತೆಯಲ್ಲಿ ನಡೆಯುತ್ತಿದ್ದ ವಹಿವಾಟಿನ ಪ್ರಮಾಣ ಕಾರಣ. ಪ್ರತಿದಿನ ಲಕ್ಷಾಂತರ ರು. ವಹಿವಾಟು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಇಷ್ಟೊಂದು ಮೊತ್ತ ಲೆಕ್ಕಹಾಕಿದ ಬ್ಯಾಂಕ್‌ ಲೆಕ್ಕಾಧಿಕಾರಿ ಬರೋಬ್ಬರಿ 30 ಕೋಟಿಗಳಿಗೆ ಹೋಲ್ಡ್‌ ಮಾಡಿದ್ದಾರೆ ಎಂದು ಬ್ಯಾಂಕ್‌ನ ಅಧಿಕಾರಿಗಳು ಪೊಲೀಸರಿಗೆ ತಿಳಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಮೈನಸ್‌ ನೋಡದೆ ಎಡವಟ್ಟು: ಬೇನಾಮಿ ವಹಿವಾಟು ಹಿನ್ನೆಲೆಯಲ್ಲಿ ಡಿಸೆಂಬರ್‌ ತಿಂಗಳ ಆರಂಭದಲ್ಲಿ 30 ಕೋಟಿಗಳಿಗೆ ಖಾತೆಯನ್ನು ಹೋಲ್ಡ್‌ ಮಾಡಲಾಗಿತ್ತು. ಹೋಲ್ಡ್‌ ಮಾಡಿದಾಗ ಖಾತೆಯಲ್ಲಿ ಆನ್‌ಲೈನ್‌ ಮೂಲಕ ಜಮೆಯಾಗಿದ್ದ ಮೊತ್ತದಲ್ಲಿ 25,914 ಇತ್ತು. ಡಿ.5ರಂದು ಎಟಿಎಂನಲ್ಲಿ ಬ್ಯಾಂಕ್‌ ಬ್ಯಾಲೆನ್ಸ್‌ ಪರಿಶೀಲಿಸಿರುವ ರೆಹಾನಬಾನು ಅವರಿಗೆ ತೋರಿಸಿರುವ ಮೊತ್ತ ‘29,99,74,084’ ಆದರೆ ಅವರು ಮೈನಸ್‌ ಗಮನಿಸಿದೆ 30 ಕೋಟಿ ಬಂದಿದೆ ಎಂದು ತಪ್ಪು ತಿಳಿದಿದ್ದಾರೆ.
 

click me!