ತುಮಕೂರಿನಲ್ಲಿ ಹಿಂದಿ ದಿವಸ್‌ಗೆ ಜೆಡಿಎಸ್‌ ತೀವ್ರ ವಿರೋಧ: ಪ್ರತಿಭಟನೆ

By Govindaraj SFirst Published Sep 15, 2022, 8:17 AM IST
Highlights

ರಾಜ್ಯದಲ್ಲಿ ಹಿಂದಿ ದಿವಸ್‌ ಆಚರಣೆ ವಿರೋಧಿಸಿ ಜೆಡಿಎಸ್‌ ಜಿಲ್ಲಾ ಘಟಕದಿಂದ ಜಿಲ್ಲಾಧ್ಯಕ್ಷ ಆರ್‌.ಸಿ.ಆಂಜಿನಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. 

ತುಮಕೂರು (ಸೆ.15): ರಾಜ್ಯದಲ್ಲಿ ಹಿಂದಿ ದಿವಸ್‌ ಆಚರಣೆ ವಿರೋಧಿಸಿ ಜೆಡಿಎಸ್‌ ಜಿಲ್ಲಾ ಘಟಕದಿಂದ ಜಿಲ್ಲಾಧ್ಯಕ್ಷ ಆರ್‌.ಸಿ.ಆಂಜಿನಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಾವೇಶಗೊಂಡ ಜೆಡಿಎಸ್‌ ಕಾರ್ಯಕರ್ತರನ್ನುದ್ದೇಸಿ ಮಾತನಾಡಿದ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌.ಸಿ.ಆಂಜಿನಪ್ಪ, ನಾವು ಕನ್ನಡಿಗರು, ಕನ್ನಡ ದಿವಸ್‌ ಆಚರಣೆ ಮಾಡಬೇಕೇ ಹೊರತು ಹಿಂದಿ ದಿವಸ್‌ ಅಲ್ಲ ಎಂದು ಗುಡುಗಿದರು.

ಈ ಹಿಂದಿನಿಂದಲೂ ಭಾರತ ಒಕ್ಕೂಟ ಸರ್ಕಾರವು ಕುತಂತ್ರದಿಂದ ಸೆಪ್ಟೆಂಬರ್‌ 14ರ ದಿನವನ್ನು ಹಿಂದಿ ದಿವಸ ಎಂಬ ಆಚರಣೆಯನ್ನು ಸೃಷ್ಟಿಸಿ, ದೇಶದ ಸಾವಿರಾರು ಪ್ರಾದೇಶಿಕ ಭಾಷೆಗಳಿಗೆ ಮೋಸ ಮಾಡುತ್ತಾ ಬಂದಿದೆ. 400 ವರ್ಷಗಳ ಇತಿಹಾಸವಿರುವ ಹಿಂದಿ ಭಾಷೆಗೆ ಹಬ್ಬ ಮಾಡುವ ಇವರಿಗೆ 2500 ವರ್ಷ ಇತಿಹಾಸವಿರುವ ಕನ್ನಡ ನೆನಪಿಗೂ ಬರುವುದಿಲ್ಲವೇ ಎಂದು ಪ್ರಶ್ನಿಸಿದರು. ಕರ್ನಾಟಕ ರಾಜ್ಯವು ಕನ್ನಡ, ಕೊಂಕಣಿ, ತುಳು, ಕೊಡವ ಸೇರಿದಂತೆ ಹತ್ತಾರು ಭಾಷೆಗಳ ತವರೂರು. ವೈವಿಧ್ಯಮಯ ಸಂಸ್ಕೃತಿ ಹೊಂದಿರುವ ಈ ರಾಜ್ಯದಲ್ಲಿ ನಮಗೆ ಸಂಬಂಧವೇ ಇಲ್ಲದ ಭಾಷೆಯ ಆಚರಣೆ ಎನ್ನುವುದು ಘೋರ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಆಶೋತ್ತರಗಳಿಗೆ ನಮ್ಮ ಸರ್ಕಾರ ಸ್ಪಂದಿಸುತ್ತಿದೆ: ಸಚಿವ ನಾಗೇಶ್‌

ಜೆಡಿಎಸ್‌ ನಗರಾಧ್ಯಕ್ಷ ಬೆಳ್ಳಿ ಲೋಕೇಶ್‌ ಮಾತನಾಡಿ, ಸೆ.14ರಂದು ಕೇಂದ್ರ ಸರ್ಕಾರ ಹಿಂದಿ ದಿವಸ್‌ ಆಚರಣೆ ಎಂದು ಎಲ್ಲಾ ರಾಜ್ಯಗಳ ಮೇಲೆ ಗದಾಪ್ರಹಾರ ಮಾಡಲು ಹೊರಟಿದೆ. ಇದನ್ನು ಧಿಕ್ಕರಿಸಿ ನಮ್ಮ ನಾಯಕರಾದ ಎಚ್‌.ಡಿ.ದೇವೇಗೌಡರು, ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಿ.ಎಂ.ಇಬ್ರಾಹೀಂ ಅವರ ಆದೇಶದಂತೆ ಹೋರಾಟ ನಡೆಸಲಾಗುತ್ತಿದೆ ಎಂದರು. ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಅಡಿಯಾಳಾಗಿ ಕೆಲಸ ಮಾಡುತ್ತಿರುವುದರಿಂದ ನಮ್ಮ ಕನ್ನಡವನ್ನು ರಾಜ್ಯ ಸರ್ಕಾರವೂ ಸಹ ತೇಜೋವಧೆ ಮಾಡುತ್ತಿದೆ. ಇದನ್ನು ನಾವು ಧಿಕ್ಕರಿಸುತ್ತಿದ್ದೇವೆ ಎಂದು ಹೇಳಿದರು.

ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಉಪಮೇಯರ್‌ ಟಿ.ಕೆ.ನರಸಿಂಹಮೂರ್ತಿ, ಪಾಲಿಕೆ ಸದಸ್ಯರಾದ ಶ್ರೀನಿವಾಸ್‌, ಧರಣೇಂದ್ರಕುಮಾರ್‌, ಜೆಡಿಎಸ್‌ ರಾಜ್ಯ ಹಿರಿಯ ಉಪಾಧ್ಯಕ್ಷ ಗಂಗಣ್ಣ, ಜಿಲ್ಲಾ ಉಪಾಧ್ಯಕ್ಷ ದೇವರಾಜು, ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಹಾಲನೂರು ಅನಂತಕುಮಾರ್‌, ಬೆಳ್ಳಿ ಲೋಕೇಶ್‌, ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣ, ಮುಖಂಡರಾದ ವಿಜಯ್‌ ಕುಮಾರ್‌, ಚಲುವರಾಜು, ರಾಮಕೃಷ್ಣ, ಪ್ರೆಸ್‌ ರಾಜಣ್ಣ, ಸೋಲಾರ್‌ ಕೃಷ್ಣಮೂರ್ತಿ, ಗಂಗಹನುಮಯ್ಯ, ವಕ್ತಾರ ಮಧು, ಗುರು ಬಳ್ಳುಕರಾಯ, ಉಪ್ಪಾರಹಳ್ಳಿ ಮಂಜು, ಕೆಂಪರಾಜು, ಗಣೇಶ್‌, ಯಶೋಧ, ತಾಹೆರಾ ಕುಲ್ಸುಂ, ಸಿ.ಡಿ.ಜಯಶ್ರೀ, ಎಂ.ಎನ್‌.ಮಮತರಾಣಿ, ರಾಧಾ ಎನ್‌.ಗೌಡ, ಪ್ರಸನ್ನ, ಕಚೇರಿ ವ್ಯವಸ್ಥಾಪಕ ಮಧುಗೌಡ, ರಂಗಪ್ಪ, ತನ್ವೀರ್‌ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.

Tumakuru News: ರಾಷ್ಟ್ರೀಯ ಹೆದ್ದಾರಿ ರಸ್ತೆ ಗುಂಡಿ ಕೂಡಲೇ ಮುಚ್ಚಿ

ಹಿಂದಿ ದಿವಸ್‌ ಹಿಂದಿ ಭಾಷಿಕ ರಾಜ್ಯಗಳಿಗೆ ಮಾತ್ರ ಸೀಮಿತವಾಗಲಿ. ನಮಗೆ ಅದರ ಅವಶ್ಯಕತೆ ಇಲ್ಲ. ಹೊರಗಿನವರ ದಾಳಿ ಪ್ರಯತ್ನಕ್ಕೆ ಕನ್ನಡಿಗರು ಹಿಂದಿನಿಂದಲೂ ಸರಿಯಾದ ಉತ್ತರ ಕೊಡುತ್ತಾ ಬಂದಿದ್ದಾರೆ. ಈಗಲೂ ಸಹ ಈ ಬಲವಂತ ಹೇರುವುದನ್ನು ವಿರೋಧಿಸುತ್ತಾ ಇಂದು ಇಡೀ ರಾಜ್ಯದಲ್ಲಿ ಜೆಡಿಎಸ್‌ ವತಿಯಿಂದ ಪ್ರತಿಭಟನೆ ನಡೆಲಾಗುತ್ತಿದೆ. ನಮ್ಮ ರಾಜ್ಯಕ್ಕೆ ಬೇಕಾಗಿರುವುದು ಕನ್ನಡ ಭಾಷೆಯೆ ಹೊರತು ಹಿಂದಿಯಲ್ಲ, ಹಿಂದಿ ದಿವಸ್‌ ಆಚರಣೆ ರದ್ದು ಮಾಡುವವರೆಗೂ ಹೋರಾಟ ನಡೆಸಲಾಗುತ್ತದೆ.
-ಆರ್‌.ಸಿ.ಆಂಜಿನಪ್ಪ ಜಿಲ್ಲಾಧ್ಯಕ್ಷ, ಜೆಡಿಎಸ್‌

click me!