ನಾವು ಅಧಿಕಾರಕ್ಕೆ ಬಂದರೆ ದಲಿತರನ್ನು ಮುಖ್ಯಮಂತ್ರಿ ಮಾಡಲು ನಮ್ಮ ಪಕ್ಷ ಮುಕ್ತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ತುಮಕೂರು (ಡಿ. 03): ನಾವು ಅಧಿಕಾರಕ್ಕೆ ಬಂದರೆ ದಲಿತರನ್ನು ಮುಖ್ಯಮಂತ್ರಿ ಮಾಡಲು ನಮ್ಮ ಪಕ್ಷ ಮುಕ್ತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ತುಮಕೂರಿನ ದಿಬ್ಬೂರಿನಲ್ಲಿ ಗ್ರಾಮವಾಸ್ತವ್ಯ ಮಾಡಿ ಲಕ್ಷ್ಮೇನರಸಿಂಹಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಹ ಸಮಯ ಬಂದರೆ ದಲಿತರು ಏಕೆ ಮುಖ್ಯಮಂತ್ರಿಯಾಗಬಾರದು. ಸಮಯ ಬಂದರೆ ಮಾಡುವುದಾಗಿ ತಿಳಿಸಿದರು.
ಮೀಸಲಾತಿ ಇಲ್ಲದಿದ್ದ ಕಾಲದಲ್ಲಿ ಹಾಸನದಲ್ಲಿ ಜಿ.ಪಂ. ಅಧ್ಯಕ್ಷನನ್ನಾಗಿ ದಲಿತ ಸಮುದಾಯದವರನ್ನು ದೇವೇಗೌಡರು ಮಾಡಿದ್ದರು. ಅಂದು ರೇವಣ್ಣನನನ್ನು ಮಾಡಬಹುದಿತ್ತು. ಆದರೆ ಮಾಡಲಿಲ್ಲ. ನಮ್ಮದೇನಿದ್ದರೂ ಬಡತನ ವರ್ಸಸ್ ಶ್ರೀಮಂತಿಕೆ ರಾಜಕೀಯ ಹೋರಾಟ. ನಾನು ಮುಖ್ಯಮಂತ್ರಿಯಾಗಿದ್ದಾಗ ದಲಿತ ಕುಟುಂಬದ ಮಹಿಳೆಗೆ ಚಿಕಿತ್ಸೆ ಕೊಡಿಸಿ ನಮ್ಮ ಮನೆಯಲ್ಲಿಯೇ ಇರಿಸಿಕೊಂಡಿದ್ದೆ. ಈ ಕೆಲಸ ಯಾವ ಮುಖ್ಯಮಂತ್ರಿ ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು.
ದಲಿತರ ಬಗ್ಗೆ ಕಾಳಜಿ ಇದೆ ಎಂದು ಮೇಲ್ನೋಟಕ್ಕೆ ತೋರ್ಪಡಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರು, ಅಸ್ಪೃಶ್ಯರ ಬಗ್ಗೆ ಏನು ಮಾತನಾಡಿದ್ದಾರೆ ಎಂಬುದರ ಬಗ್ಗೆ ದಾಖಲೆ ಕೊಡುತ್ತೇನೆ. ನಾವು ಮನೆಯಲ್ಲಿ ಕುಳಿತುಕೊಂಡಿದ್ದರೂ ಚುನಾವಣೆಯಲ್ಲಿ 50 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಆದರೆ ನಮಗೆ ಅದು ಬೇಕಾಗಿಲ್ಲ. ಸಂಪೂರ್ಣ ಬಹುಮತ ಬಂದು ನಮ್ಮ ಪಕ್ಷ ಸ್ವತಂತ್ರವಾಗಿ ಸರ್ಕಾರ ರಚಿಸಬೇಕು. ಆಗ ಮಾತ್ರ ನಾಡಿನ ಜನರ ಸಂಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದರು.
ಚುನಾವಣೆ ಇನ್ನು 4-5 ತಿಂಗಳು ಬಾಕಿ ಇದೆ. ಹಾಗಾಗಿ ಮುಂದಿನ ನಾಲ್ಕು ತಿಂಗಳು ಬಹಳ ಸೂಕ್ಷ್ಮದ ದಿನಗಳು. ಯಾರೂ ಕೂಡಾ ಮೈ ಮರೆಯಬಾರದು ಮನೆ ಮನೆಗೆ ಹೋಗಿ ಪಕ್ಷದ ಕಾರ್ಯಕ್ರಮದ ಬಗ್ಗೆ ತಿಳಿಸಿ ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದ್ದೇನೆ. ಈಗ ಯಾವ್ಯಾವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇನೋ ಅಲ್ಲಿ ಯಾವುದೇ ಗೊಂದಲ ಇಲ್ಲ. ಈಗಾಗಲೇ 14 ಕ್ಷೇತ್ರಗಳ ಪೈಕಿ 13 ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಇನ್ನೊಂದು ಕ್ಷೇತ್ರ ಮಾತ್ರ ಬಾಕಿಯಿದೆ. ಒಂದೊಂದು ಕಡೆ ಲೋಪದೋಷಗಳು ಆದಾಗ ಮಾತ್ರ ಅಂತಹ ಕಡೆಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಆಗಬಹುದು ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ ಅಷ್ಟೆ. ಅದನ್ನು ಹೊರತುಪಡಿಸಿದರೆ ಅಭ್ಯರ್ಥಿಗಳ ವಿಚಾರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಜೆಡಿಎಸ್ ಪಕ್ಷಕ್ಕೆ ಬರುವ ಸನ್ನಿವೇಶ ಇಲ್ಲ. ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಪಾಪಾ ಅವರಿಗೆ ಗೊತ್ತಿರುತ್ತದೆ. ಕಾಂಗ್ರೆಸ್ ಪಕ್ಷದವರು ನಮ್ಮ ಪಕ್ಷದವರ ಬಗ್ಗೆ ನೆಗೆಟಿವ್ ಮಾತುಗಳನ್ನಾಡುತ್ತಲೇ 70 ಸ್ಥಾನಕ್ಕೆ ಬಂದರು. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಭಾಗ್ಯಗಳ ಸರಮಾಲೆಯನ್ನು ನೀಡಿದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರ ಕ್ಷೇತ್ರ ಹುಡುಕಾಟ ಕುರಿತು ನಾನು ಲಘುವಾಗಿ ಮಾತನಾಡುವುದಿಲ್ಲ, ಸಿಎಂ ಆಗಿ ಡಿಸಿಎಂ ಆಗಿ ಅವರದ್ದೇ ಆದ ವರ್ಚಸ್ಸು ಇಟ್ಟುಕೊಂಡಿದ್ದಾರೆ. ಗಡಿ ವಿವಾದ ಮುಗಿದು ಹೋಗಿರುವ ಅಧ್ಯಾಯ. ತಮಿಳುನಾಡು, ಕೇರಳ ಗಡಿ ಭಾಗದಲ್ಲೂ ಸಮಸ್ಯೆಗಳನ್ನು ಹೇಳುತ್ತಾರೆ. ರಾಜಕೀಯದ ಉದ್ದೇಶಕ್ಕಾಗಿ ಈ ರೀತಿಯ ಹುನ್ನಾರಗಳನ್ನು ಮಾಡುತ್ತಿದ್ದಾರೆ. ನಮ್ಮ ನೆಲ, ಜಲ ಕಾಪಾಡುವ ಬಗ್ಗೆ ಎಲ್ಲರೂ ಚಿಂತಿಸಲೇಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಜಿ. ಆಂಜಿನಪ್ಪ, ಮುಖಂಡರಾದ ಗೋವಿಂದರಾಜು, ಎಸ್.ಆರ್. ಗೌಡ, ಪ್ರೆಸ್ ರಾಜಣ್ಣ, ಟಿ.ಆರ್. ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.