ನನ್ನ ಮಗನ ಮದುವೆ ಮುಖಾಂತರ ರೈತರ ಪಕ್ಷವಾದ ಜೆಡಿಎಸ್ ಅನ್ನು ಮತ್ತಷ್ಟುಸದೃಢಗೊಳಿಸುವ ನಿರ್ಧಾರ ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು ಪಾಲ್ಗೊಂಡು ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಅಪಪ್ರಚಾರ ಮಾಡುತ್ತಿರುವ ವಿರೋಧಿಗಳಿಗೆ ತಕ್ಕ ಉತ್ತರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಮೈಸೂರು(ಮಾ.09): ನನ್ನ ಮಗನ ಮದುವೆ ಮುಖಾಂತರ ರೈತರ ಪಕ್ಷವಾದ ಜೆಡಿಎಸ್ ಅನ್ನು ಮತ್ತಷ್ಟುಸದೃಢಗೊಳಿಸುವ ನಿರ್ಧಾರ ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು ಪಾಲ್ಗೊಂಡು ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಅಪಪ್ರಚಾರ ಮಾಡುತ್ತಿರುವ ವಿರೋಧಿಗಳಿಗೆ ತಕ್ಕ ಉತ್ತರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.
ಕೆ.ಆರ್. ನಗರ ತಾಲೂಕು ಚುಂಚನಕಟ್ಟೆಯ ಕಮಲಮ್ಮ ಕೃಷ್ಣೇಗೌಡ ಕನ್ವೆನ್ಸನ್ ಹಾಲ್ ಆವರಣದಲ್ಲಿ ಭಾನುವಾರ ನಡೆದ ಜೆಡಿಎಸ್ ಕಾರ್ಯಕರ್ತರು ಹಾಗು ಪುತ್ರನ ಮದುವೆ ಆಮಂತ್ರಣ ಸಭೆಯಲ್ಲಿ ಮಾತನಾಡಿದರು.
ನಮ್ಮ ಪಕ್ಷದಲ್ಲೇ ಬೆಳೆದು ಜೆಡಿಎಸ್ ಮುಗಿಸಲು ಹೊಂಚು ಹಾಕುತ್ತಿರುವವರಿಗೆ ಕಾರ್ಯಕರ್ತರ ಶಕ್ತಿ ಏನೆಂಬುದನ್ನು ತೋರಿಸಬೇಕಿದೆ. ನಮ್ಮ ತಂದೆಯ ಕಾಲದಿಂದಲೂ ಕುಟುಂಬದ ಮೇಲೆ ನಂಬಿಕೆ, ಪ್ರೀತಿ, ವಿಶ್ವಾಸವಿಟ್ಟು ಬೆಳೆಸಿರುವ ಕಾರ್ಯಕರ್ತರಿಗೆ ಮಗನ ಮದುವೆಯಲ್ಲಿ ಗೌರವ ನೀಡಬೇಕೆಂಬ ನಿಟ್ಟಿನಲ್ಲಿ ಎಲ್ಲರಿಗೂ ಆಮಂತ್ರಣ ನೀಡುತ್ತಿದ್ದೇನೆ. ಇದರಲ್ಲಿ ಪಕ್ಷ ಸಂಘಟನೆಯ ಸ್ವಾರ್ಥವೂ ಅಡಗಿದೆ ಎಂದು ಹೇಳಿದರು.
ರೈತ ವಿರೋಧಿ ಬಿಜೆಪಿ ಸರ್ಕಾರ
ನೀವೇ ಕಟ್ಟಿದ ಈ ಪಕ್ಷ ರೈತರ ಹಿತಕ್ಕಾಗಿ ಉಳಿಯಬೇಕಿದೆ, ಬೆಳೆಯಬೇಕಿದೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ 14 ತಿಂಗಳ ನನ್ನ ಸಂಕಷ್ಟದ ಅಧಿಕಾರಾವಧಿಯಲ್ಲಿ ರೈತರ ಸಾಲಮನ್ನಾ ಮಾಡುವ ನಿರ್ಧಾರ ಮಾಡಿ ಬರೋಬ್ಬರಿ 25000 ಕೋಟಿ ರು. ಬಿಡುಗಡೆ ಮಾಡಿದ್ದೇನೆ. ನನ್ನ ಸರ್ಕಾರವನ್ನು ಪತನ ಮಾಡಿರುವ ಬಿಜೆಪಿಯ ಈಗಿನ ಸರ್ಕಾರ ಈ ಹಣವನ್ನು ತಡೆ ಹಿಡಿಯಲು ಸಾಧ್ಯವಿಲ್ಲ. ಸಾಲಮನ್ನಾ ಸೌಲಭ್ಯ ಸಿಗದ ರೈತರು ಸಮರ್ಪಕ ದಾಖಲೆ ನೀಡಿದರೆ 24 ಗಂಟೆಯಲ್ಲಿ ಸಾಲಮನ್ನಾವಾಗಲಿದೆ ಎಂದು ಹಾಲಿ ಮುಖ್ಯಮಂತ್ರಿಗಳು ಹೇಳಿರುವುದು ನಾನು ಈ ಉದ್ದೇಶಕ್ಕೋಸ್ಕರ ಹಣ ಮೀಸಲಿಟ್ಟಿದ್ದಾಗಿ. ಇನ್ನೂ 1.60 ಲಕ್ಷ ರು. ರೈತರಿಗೆ ಈ ಸೌಲಭ್ಯ ನೀಡಲು ಈ ಸರ್ಕಾರ ಕಳ್ಳಾಟವಾಡುತ್ತಿದ್ದು, ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸುತ್ತೇನೆ. ಕೃಷ್ಣರಾಜನಗರ ತಾಲೂಕಿನಲ್ಲೆ ನನ್ನ ರೈತರ ಸಾಲಮನ್ನಾ ಯೋಜನೆಯಡಿ 118 ಕೋಟಿ ರು. ಸಾಲಮನ್ನಾವಾಗಿದೆ ಎಂದರು.
ತಡೆ ತೆರವು ಮಾಡಿಲ್ಲ:
ಖಾಸಗಿಯವರಿಂದ ಬಡ ರೈತರು ಸಾಲಪಡೆದು ಸಂಕಷ್ಟದಲ್ಲಿದ್ದ ಕಾರಣ ತಾನು ಜಾರಿಗೆ ತಂದ ಋುಣಮುಕ್ತ ಕಾಯಿದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು. ಈ ಕಾಯಿದೆಗೆ ನ್ಯಾಯಾಲಯದಲ್ಲಿ ತಡೆ ಇದ್ದರೂ, ಈಗಿನ ಬಿಜೆಪಿ ಸರಕಾರ ತಡೆ ತೆರವುಗೊಳಿಸಲು ಮುಂದಾಗಿಲ್ಲ. ಆದರೂ ನಮ್ಮದು ರೈತಪರ ಸರಕಾರ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
ಇದಕ್ಕೂ ಮುನ್ನ ಚುಂಚನಕಟ್ಟೆಪುರಾತನ ಶ್ರೀ ರಾಮ ದೇವಾಲಯದಲ್ಲಿ ಪೂಜೆ ಸಲ್ಲಿಸುವ ವೇಳೆ ಹಾಡ್ಯ ಗ್ರಾಮದ ಕೆಲ ಕಾಂಗ್ರೆಸ್ ಕಾರ್ಯಕರ್ತರು ಎಚ್.ಡಿ. ಕುಮರಸ್ವಾಮಿಯವರ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾದರು. ಬಳಿಕ ಅವರು ಉದ್ಯಮಿಗಳಾದ ಎಚ್.ಕೆ. ಮಧುಚಂದ್ರ, ಎಚ್.ಕೆ. ಶ್ರೀಧರ್ ನಿರ್ಮಿಸಿರುವ ಕಮಲಮ್ಮ ಕೃಷ್ಣೇಗೌಡ ಕನ್ವೆನ್ಸನ್ ಹಾಲ್ ಅನ್ನು ಉದ್ಘಾಟಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಮೈಮುಲ್ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಎ.ಟಿ. ಸೋಮಶೇಖರ್, ನವನಗರ ಕೋ- ಆಪರೇಟೀವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ಎಪಿಎಂಸಿ ಮಾಜಿ ಅಧ್ಯಕ್ಷ ರಾಜೇಗೌಡ, ಕೃಷ್ಣೇಗೌಡ, ಎಸ್.ಕೆ. ಮಧುಚಂದ್ರ, ತಾಪಂ ಸದಸ್ಯೆ ಮಮತಾ ಮಹೇಶ್, ಜಿಪಂ ಮಾಜಿ ಉಪಾಧ್ಯಕ್ಷ ಅಡಗೂರು ಚನ್ನಬಸಪ್ಪ, ಮಾಜಿ ಸದಸ್ಯ ಎಂ.ಟಿ. ಕುಮಾರ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ, ಮುಖಂಡರಾದ ವೈ.ಆರ್. ಪ್ರಕಾಶ್, ನರಸಿಂಹಮೂರ್ತಿ, ಎಸ್.ಟಿ. ಕೀರ್ತಿ, ಮಧುಚಂದ್ರ ಇದ್ದರು.
ಸಾಮೂಹಿಕ ಮದುವೆ ಹೆಸರಿನಲ್ಲಿ ಹಣ ಕಲೆಕ್ಷನ್ ಮಾಡಿದ ಮಹಾನುಭಾವ ನಮಗೆ ಬುದ್ಧಿವಾದ ಹೇಳಲು ಬರುತ್ತಾರೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಮಾಜಿ ಶಾಸಕ ಎಚ್. ವಿಶ್ವನಾಥ್ ವಿರುದ್ಧ ಹರಿಹಾಯ್ದರು. ಹೆಸರಿಗೆ ಸಾಮೂಹಿಕ ಮದುವೆ. ಆದರೆ ಹಣ ವಸೂಲಿ ಮಾಡಿ ತಾನು ಸರಳ, ಸಜ್ಜನ ಎನ್ನುವುದು ಎಷ್ಟುಸರಿ? ನಮ್ಮ ನಾಯಕರಾದ ಕುಮಾರಣ್ಣ ಅವರು ಮಗನ ಮದುವೆಯನ್ನು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾಡಿ ಆ ಹೆಸರಲ್ಲಿ ಹಣ ಲೂಟಿ ಮಾಡಬೇಕಿತ್ತೇ ಎಂದು ಕುಟುಕಿದರು.
ಕುಮಾರಸ್ವಾಮಿಯವರು ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡುತ್ತಿಲ್ಲ. ಪಕ್ಷ ಕಟ್ಟಿಬೆಳೆಸಿದ ಕಾರ್ಯಕರ್ತರಿಗೆ ಊಟ ಹಾಕಿಸಬೇಕೆಂಬ ಔದಾರ್ಯದಿಂದ ಖುದ್ದು ಅವರೇ ಆಮಂತ್ರಣ ನೀಡುತ್ತಿದ್ದಾರೆ. ಈ ಹಿಂದೆ ಯಾವೊಬ್ಬ ಮುಖ್ಯಮಂತ್ರಿಯೂ ತಮ್ಮ ಮಕ್ಕಳ ಮದುವೆಗೆ ಈ ರೀತಿ ಖುದ್ದಾಗಿ ಆಮಂತ್ರಣ ನೀಡಿದ ಉದಾಹರಣೆಯಿಲ್ಲ ಎಂದರು.
ಕೇವಲ 14 ತಿಂಗಳ ಅಧಿಕಾರಾವಧಿಯಲ್ಲಿ ಕುಮಾರಣ್ಣ ನನ್ನ ಕ್ಷೇತ್ರಕ್ಕೆ ಬರೋಬ್ಬರಿ 943 ಕೋಟಿ ಅನುದಾನ ನೀಡಿ ಅಭಿವೃದ್ದಿಗೆ ಸಹಕಾರ ನೀಡಿದರು. ಅಲ್ಲದೆ ನನ್ನ ಮನವಿ ಮೇರೆಗೆ ಸಾಲಿಗ್ರಾಮವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದರು ಎಂದು ಮಾಜಿ ಸಚಿವ ಸಾರಾ ಮಹೇಶ್ ತಿಳಿಸಿದ್ದಾರೆ.