ಚಾಮುಂಡಿ ಬೆಟ್ಟದಲ್ಲಿ ಯಡಿಯೂರಪ್ಪ ವಿಶೇಷ ಪೂಜೆ| ಚಾಮುಂಡಿಬೆಟ್ಟದಲ್ಲಿ ಯಡಿಯೂರಪ್ಪ ವಿಶೇಷ ಪೂಜೆ| ಜೆಡಿಎಸ್ ಮಾಜಿ ಸಚಿವ ಜಿಟಿಡಿಯಿಂದ ಸನ್ಮಾನದ ಸ್ವಾಗತ!
ಮೈಸೂರು[ಆ.30]: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.
ಮುಖ್ಯಮಂತ್ರಿಗಳ ಆಗಮನಕ್ಕೂ ಮುನ್ನ ಶಾಸಕ ಜಿ.ಟಿ. ದೇವೇಗೌಡರು ಆಗಮಿಸಿದ್ದರು. ದೇವಸ್ಥಾನಕ್ಕೆ ಆಗಮಿಸಿದ ಬಿ.ಎಸ್. ಯಡಿಯೂರಪ್ಪ ಅವರಿಗೆ ಶಾಲು, ಹಾರ ಹಾಕಿ ಆತ್ಮೀಯವಾಗಿ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಜಿ.ಟಿ. ದೇವೇಗೌಡರು, ಈ ಕ್ಷೇತ್ರದ ಶಾಸಕನಾಗಿ ಸ್ವಾಗತಿಸುವುದು ನನ್ನ ಕರ್ತವ್ಯ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಮೇಲೆ ಮಳೆ, ಬೆಳೆ ಚೆನ್ನಾಗಿದೆ. ನೆರೆ ಹಾವಳಿಗೆ ಸಿಲುಕಿದ ಸಂತ್ರಸ್ತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಳ್ಳೆಯ ಪರಿಹಾರ ನೀಡುತ್ತಿದೆ. ನಾನು ಊರಿನಲ್ಲಿ ಇಲ್ಲದಿದ್ದಾಗ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆಗಮಿಸಿದ್ದರಿಂದ ನಾನು ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ಸಮಜಾಯಿಷಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಮೈಸೂರು- ಕೊಡಗು ಲೋಕಸಭಾ ಸದಸ್ಯ ಪ್ರತಾಪಸಿಂಹ, ಶಾಸಕ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ, ವಿಪ ಮಾಜಿ ಸದಸ್ಯ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಡಿ.ಎಸ್. ವೀರಯ್ಯ, ನಗರ ಬಿಜೆಪಿ ಅಧ್ಯಕ್ಷ ಡಾ.ಬಿ.ಎಚ್. ಮಂಜುನಾಥ್, ಜಿಲ್ಲಾಧ್ಯಕ್ಷ ಎಂ. ಶಿವಣ್ಣ ಇದ್ದರು.
ಪೊಲೀಸರೊಂದಿಗೆ ವಾಗ್ವಾದ:
ಸಿಎಂ ಯಡಿಯೂರಪ್ಪ ಭೇಟಿಯ ಸಂದರ್ಭದಲ್ಲಿ ದೇವಸ್ಥಾನದ ಒಳಗೆ ಬಿಡಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖ್ಯಮಂತ್ರಿಗಳ ಹಿಂಬಾಲಕರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸೋದರಳಿಯ ಎಸ್.ಸಿ. ರಾಜೇಶ್ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಒಬ್ಬರನ್ನು ಬಿಟ್ಟು, ಮತ್ತೊಬ್ಬರನ್ನು ಏಕೆ ಬಿಡುವುದಿಲ್ಲ. ನೀವು ಇಲ್ಲಿಂದ ಬೇಗ ಹೋಗ್ತೀಯಾ? ಅವರು (ಸಿಎಂ) ಸಿಕ್ಕಾಗ ವೈಯಕ್ತಿಕವಾಗಿ ದೂರು ನೀಡುತ್ತೇನೆ ಎಂದು ಡಿಸಿಪಿಗೆ ಅವಾಜ್ ಹಾಕಿದರು.