JDSನಿಂದ ಬಿಜೆಪಿಗೆ ಬೆಂಬಲ : SM ಕೃಷ್ಣ ಅಳಿಯಗೆ ಅಧಿಕಾರ

By Kannadaprabha NewsFirst Published Sep 14, 2019, 12:12 PM IST
Highlights

ಬಿಜೆಪಿ ಅಧಿಕಾರ ಹಿಡಿಯಲು ಶತ ಪ್ರಯತ್ನ ನಡೆಸುತ್ತಿದ್ದು, ಇವರಿಗೆ ಬಿಜೆಪಿ ಬೆಂಬಲ ನೀಡುವ ಸಾಧ್ಯತೆ ಇದೆ. ಅಲ್ಲದೇ ಎಸ್ ಎಂ ಕೃಷ್ಣ ಅಳಿಯಗೆ ಬಿಜೆಪಿ ಈಗಾಗಲೇ ಜವಾಬ್ದಾರಿ ವಹಿಸಿದ್ದು, ಮತ್ತೊಂದು ಹೊಸ ಜವಾಬ್ದಾರಿ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಮದ್ದೂರು [ಸೆ.14]:   ಜಿಲ್ಲಾ ಹಾಲು ಒಕ್ಕೂಟದ ನಾಮ ನಿರ್ದೇಶಕ ಸ್ಥಾನಕ್ಕೆ ಎನ್‌.ಸಿ.ಪ್ರಸನ್ನಕುಮಾರ್‌ ಅವರನ್ನು ರಾಜ್ಯಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಎಸ್‌.ಎಂ.ಕೃಷ್ಣ ಅಕ್ಕನ ಮಗನನ್ನು ನಾಮ ನಿರ್ದೇಶನ ಮಾಡಿರುವುದು ಹಲವು ಕುತೂಹಲಕ್ಕೂ ಕಾರಣವಾಗಿದೆ.

ಎಸ್‌.ಎಂ.ಕೃಷ್ಣ ಅವರ ಸಹಾಯದಿಂದ ಮನ್‌ಮುಲ್‌ ಆಡಳಿತ ಮಂಡಳಿಯನ್ನು ವಶ ಪಡಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳನ್ನು ಪ್ರಯತ್ನ ಮಾಡುವ ಸಾಹಸಕ್ಕೆ ಬಿಜೆಪಿ ಕೈ ಹಾಕಿದೆ. ಒಕ್ಕೂಟದ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ , ಪ್ರಸನ್ನಕುಮಾರ್‌ ಅವರೊಂದಿಗೆ ನಾಮ ನಿರ್ದೇಶನಗೊಳ್ಳಲು ಪೈಪೋಟಿ ನಡೆಸಿದ್ದರು. ಆದರೆ, ಬಿಜೆಪಿ ಸರ್ಕಾರ ಅಂತಿಮವಾಗಿ ಎಸ್‌.ಎಂ.ಕೃಷ್ಣರ ಅಕ್ಕನ ಮಗ ಎನ್‌.ಸಿ.ಪ್ರಸನ್ನಕುಮಾರ್‌ ಅವರನ್ನು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.

ಜೆಡಿಎಸ್‌ನಿಂದ ಬಿಜೆಪಿಗೆ ಬೆಂಬಲ?

ಮುಂದಿನ ದಿನಗಳಲ್ಲಿ ಅವರನ್ನೇ ಒಕ್ಕೂಟದ ಅಧ್ಯಕ್ಷರನ್ನಾಗಿ ಮಾಡುವ ಆಲೋಚನೆ ಬಿಜೆಪಿ ನಾಯಕರಲ್ಲಿದೆ ಎನ್ನಲಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಸ್‌.ಪಿ.ಸ್ವಾಮಿ, ಮನ್ಮುಲ್ ಅಧ್ಯಕ್ಷರಾಗುವ ಆಶಾಭಾವನೆ ಹೊಂದಿದ್ದರು. ಜೆಡಿಎಸ್‌ ಚುನಾವಣೆಯಲ್ಲಿ 8 ಸ್ಥಾನಗಳಲ್ಲಿ ಗೆಲುವು ಕಂಡರೂ ಗದ್ದುಗೆ ಹಿಡಿಯುವುದಕ್ಕೆ ತಿಣುಕಾಡುತ್ತಿದೆ. ಎದುರಾಳಿ ಗುಂಪಿನಿಂದ ಒಬ್ಬ ನಿರ್ದೇಶಕರನ್ನೂ ತಮ್ಮತ್ತ ಸೆಳೆಯಲಾಗದೆ ಜೆಡಿಎಸ್‌ ಅಧಿಕಾರ ಹಿಡಿಯುವ ಆಸೆ ಕೈಚೆಲ್ಲಿ ಸುಮ್ಮನೆ ಕುಳಿತಿದೆ.

ಒಕ್ಕೂಟದ ನಿರ್ದೇಶಕ ಎಸ್‌.ಪಿ.ಸ್ವಾಮಿ ಅವರಿಗೆ ಯಾವುದೇ ಕಾರಣಕ್ಕೂ ಅಧ್ಯಕ್ಷ ಸ್ಥಾನ ಸಿಗಬಾರದು ಎಂದು ಪಣ ತೊಟ್ಟಿರುವ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ, ನಾಮ ನಿರ್ದೇಶಕ ಸ್ಥಾನವೂ ಸಿಗದಂತೆ ಎಚ್ಚರಿಕೆಯಿಂದ ನೋಡಿಕೊಂಡಿದ್ದಾರೆ. ಅಗತ್ಯವಿದ್ದರೆ ಬಿಜೆಪಿಗೆ ಜೆಡಿಎಸ್‌ನಿಂದಲೇ ಇಬ್ಬರು ನಿರ್ದೇಶಕರನ್ನು ಬೆಂಬಲಕ್ಕೆ ಕಳುಹಿಸಿಕೊಡುತ್ತೇವೆ. ಸ್ವಾಮಿ ಮಾತ್ರ ಅಧ್ಯಕ್ಷರಾಗಬಾರದು ಎಂದು ಸಿಎಂ ಮೇಲೆ ಒತ್ತಡ ಹೇರುವ ತಂತ್ರ ರೂಪಿಸಿದ್ದರೆನ್ನಲಾಗಿದೆ.

ಕೆಎಂಎಫ್‌ ನಿರ್ದೇಶಕ ಸ್ಥಾನದ ಮೇಲೆ ಕಣ್ಣು:

ಆದರೂ, ಎಸ್‌.ಪಿ.ಸ್ವಾಮಿ ಬಿಜೆಪಿ ಸೇರುವ ಆಕಾಂಕ್ಷೆಯನ್ನು ಈಗಲೂ ಜೀವಂತವಾಗಿ ಇರಿಸಿಕೊಂಡಿದ್ದಾರೆ.ಅಧ್ಯಕ್ಷ ಸ್ಥಾನ ಸಿಗದಿದ್ದರೂ ಪರವಾಗಿಲ್ಲ, ಕೊನೆಯ ಪಕ್ಷ ಮನ್ಮುಲ… ಉಪಾಧ್ಯಕ್ಷ ಅಥವಾ ಕೆಎಂಎಫ್‌ ನಿರ್ದೇಶಕ ಸ್ಥಾನವಾದರೂ ಸಿಗಲಿ ಎಂಬ ಆಸೆಯೊಂದಿಗೆ ಬಿಜೆಪಿ ನಾಯಕರ ಹಿಂದೆ ಬಿದ್ದಿದ್ದಾರೆ. ಬಿಜೆಪಿ ಸೇರ್ಪಡೆಯಾದ ಬಳಿಕ ಮೊದಲ ಅವಧಿಗೆ ಮನ್ಮುಲ… ಅಧ್ಯಕ್ಷ ಸ್ಥಾನ ಸಿಗದಿದ್ದರೂ ಎರಡನೇ ಅವಧಿಯಲ್ಲಾದರೂ ಅಧ್ಯಕ್ಷ ಸ್ಥಾನಕ್ಕೆ ಲಾಭಿ ನಡೆಸುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ, ಎಸ್‌.ಪಿ.ಸ್ವಾಮಿ ಮದ್ದೂರು ಕ್ಷೇತ್ರದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೆಂಬ ವದಂತಿಗಳು ಹರಡಿರುವುದರಿಂದ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ಬಿಜೆಪಿ ವಲಯದಲ್ಲೇ ತೀವ್ರ ವಿರೋಧಗಳು ಕೇಳಿಬರುತ್ತಿವೆ ಎನ್ನಲಾಗಿದೆ.

ಜಿಲ್ಲಾ ಬಿಜೆಪಿಯಲ್ಲೂ ಅಸಮಾಧಾನ:

ಮನ್ಮುಲ… ನಾಮ ನಿರ್ದೇಶಕ ಸ್ಥಾನಕ್ಕೆ ರಾಜ್ಯಸರ್ಕಾರ ಎನ್‌.ಸಿ.ಪ್ರಸನ್ನಕುಮಾರ್‌ ಅವರನ್ನು ನೇಮಕ ಮಾಡಿರುವುದಕ್ಕೆ ಜಿಲ್ಲಾ ಬಿಜೆಪಿಯೊಳಗೆ ಅಸಮಾಧಾನ ಹೊಗೆಯಾಡುತ್ತಿದೆ ಎನ್ನಲಾಗಿದೆ. ಪಕ್ಷದಲ್ಲಿ ದುಡಿದವರು, ಸಂಘಟನೆಗೆ ಶ್ರಮಿಸಿದವರನ್ನು ಗುರುತಿಸಿದ್ದರೆ ಪಕ್ಷಕ್ಕೆ ಜಿಲ್ಲೆಯೊಳಗೆ ಇನ್ನೂ ಹೆಚ್ಚಿನ ಬಲ ಬರುತ್ತಿತ್ತು. ಭಾರತೀಯ ಜನತಾ ಪಕ್ಷಕ್ಕೆ ಪ್ರಸನ್ನ ಕೊಡುಗೆ ಏನು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ಎನ್‌.ಸಿ.ಪ್ರಸನ್ನಕುಮಾರ್‌ ಅವರನ್ನು ನಾಮ ನಿರ್ದೇಶಕರನ್ನಾಗಿ ಮಾಡಿ ಅಧ್ಯಕ್ಷ ಸ್ಥಾನವನ್ನೂ ಅವರಿಗೇ ಬಿಟ್ಟುಕೊಟ್ಟರೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಬಿಜೆಪಿ ನಾಯಕರ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

click me!