ಮೈಸೂರು (ಸೆ.07): ತನ್ನ ವಿರುದ್ಧ ಸರ್ವೆ ಆಯುಕ್ತ ಮೌನೀಶ್ ಮುದ್ಗಿಲ್‌ಗೆ ಭೂ ಒತ್ತುವರಿ ಆರೋಪದ ಕುರಿತು ತನಿಖೆ ನಡೆಸುತ್ತಿರುವುದನ್ನು ಸ್ವಾಗತಿಸುತ್ತೇನೆ. ಅವರು ತಮ್ಮ ಶಿಷ್ಯೆಗಾಗಿ ತರಾತುರಿಯಲ್ಲಿ ತನಿಖೆಗೆ ಮುಂದಾಗಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್ ವ್ಯಂಗ್ಯವಾಡಿದ್ದಾರೆ.
ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ತನ್ನ ಮೇಲೆ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂಬುದಾಗಿ ಸವಾಲು ಹಾಕಿದ್ದಾರೆ.
ಈಗ ಮತ್ತೋರ್ವ ಐಎಎಸ್ ಅಧಿಕಾರಿ ವಿರುದ್ಧ ಸಾ ರಾ ಅಸಮಾಧಾನ
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಕಾಏಕಿ ಸರ್ವೇ ಮಾಡಿ ತನಿಖೆ ನಡೆಸುತ್ತಿರುವುದು ಕಾನೂನಿಗೆ ವಿರುದ್ಧವಾದದ್ದು ಎಂದರು.
ಇದೇವೇಳೆ ರೋಹಿಣಿ ಸಿಂಧೂರಿಯವರು ಕಾರಿನಲ್ಲಿ ಹೋಗುವಾಗ ಆಕ್ಸಿಡೆಂಟ್ ಮಾಡಿ ತಿರುಚಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಸದನದಲ್ಲಿ ಚರ್ಚಿಸುತ್ತೇನೆ. ಭ್ರಷ್ಟತೆ ಮತ್ತು ಪ್ರಾಮಾಣಿಕತೆ ನಡುವೆ ನಡೆಯುತ್ತಿರುವ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ. ಮೌನೇಶ್ ಮುದ್ಗಿಲ್ ಮತ್ತು ರೋಹಿಣಿ ಸಿಂಧೂರಿ ಅವರ ಬ್ಲಾಕ್‌ಮೇಲ್‌ಗೆ ಹೆದರುವವನು ನಾನಲ್ಲ ಎಂದರು.