ಜೆಡಿಎಸ್ ಪ್ರಭಾವಿ ಮುಖಂಡರೋರ್ವರು ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ಅವರು ಕಣ್ಣೀರು ಹಾಕಿದ್ದಾರೆ
ಕಲಬುರಗಿ (ಅ.05): ಈಶಾನ್ಯ ವಲಯ ಶಿಕ್ಷಕರ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ಬಿ. ಅಂಬಲಗಿಗೆ ಟಿಕೆಟ್ ಕೈತಪ್ಪಿದ್ದರಿಂದ ಅವರು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಶಾನ್ಯ ಕರ್ನಾಟಕ ಶಿಕ್ಷಕರ ವಿಧಾನ ಪರಿಷತ್ ಚುನಾವಣೆಗೆ ಆಕಾಂಕ್ಷಿಯಾಗಿದ್ದೆ. ತಾವು 10 ವರ್ಷ ಸೇವಾವಧಿಗೆ (ಉಪನ್ಯಾಸಕ ಹುದ್ದೆ) ರಾಜಿನಾಮೆ ನೀಡಿ 2014ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದೆ. ಪ್ರತಿ ತಿಂಗಳು ಒಂದು ಲಕ್ಷ ವೇತನ ಪಡೆಯುತ್ತಿರುವುದನ್ನು ಬಿಟ್ಟು ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ನಂಬಿ ಪಕ್ಷಕ್ಕೆ ಸೇರಿದ್ದೆ. ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆ ಆದರೆ ತಮಗೆ ಟಿಕೆಟ್ ನೀಡದೆ ಇನ್ನೊಬ್ಬರಿಗೆ ನೀಡಲಾಗಿದೆ. ಪ್ರಾಮಾಣಿಕಾಗಿ ಪಕ್ಷಕ್ಕಾಗಿ ದುಡಿದವರಿಗೆ ಬೆಲೆಯಿಲ್ಲವೇ ಎನ್ನುತ್ತಲೇ ಭಾವುಕರಾದರು. ತಮಗೆ ಟಿಕೆಟ್ ನೀಡದ ಕಾರಣ ತುಂಬಾ ಅಸಮಾಧಾನವಾಗುತ್ತಿದೆ ಎಂದರು.
'ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೂರುವ ಪಕ್ಷ' ...
ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ನಿಸ್ವಾರ್ಥದಿಂದ ಅಳಿಲು ಸೇವೆ ಮಾಡಿದ್ದೇನೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷ ಕಟ್ಟಿಬೆಳೆಸಲು ಶ್ರಮ ಪಟ್ಟಿದ್ದೇನೆ. ಆದರು ಸಹ ನನಗೆ ಈ ಬಾರಿ ಟಿಕೆಟ್ ನೀಡದೆ ಅನ್ಯಾಯ ಮಾಡಲಾಗಿದೆ ಎನ್ನುತ್ತಲೇ ಕಣ್ಣೀರಿಟ್ಟರು. ತಾವು ಕಣ್ಣೀರಾಕಬಾರದೆಂದು ಸವರಿಸಿಕೊಳ್ಳುತ್ತಿದ್ದರೂ ಸಹ ತುಂಬಾ ಭಾವುಕರಾಗಿದ್ದರಿಂದ ಕಣ್ಣಿರನಿ ಉದುರತೊಡಗಿದವು. ಕಳೆದ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿ ಮಾಡುವಂತೆ ಮನವಿ ಮಾಡಿದ್ದೆ, ಆಗ ಕೂಡ ನನಗೆ ಅವಕಾಶ ನೀಡಿಲ್ಲ. ಈ ಬಾರಿಯಾದರೂ ಟಿಕೆಟ್ ನೀಡುತ್ತಾರೆ ಎಂಬ ನಿರೀಕ್ಷೆಯಿತ್ತು. ಈ ಬಾರಿಯೂ ಟಿಕೆಟ್ ಮತ್ತೊಬ್ಬರಿಗೆ ಘೋಷಿಸಿದ್ದು, ಆದ್ದರಿಂದ ಬೇಸತ್ತು ತುಂಬಾ ನೋವಿನಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದ ಅವರು ಮೇಲ್ ಮೂಲಕ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ ಎಂದರು.
2014 ರ ಈಶಾನ್ಯ ವಲಯ ಶಿಕ್ಷಕರ ಕ್ಷೇತ್ರದಿಂದ ಪರಿಷತ್‌ಗೆ ಚುನಾವಣೆ ನಿಲ್ಲಲು ಅವಕಾಶ ಮಾಡಿಕೊಟ್ಟಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿರುವ ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಶಾಸಕರು, ಪದಾಧಿಕಾರಿಗಳೆಲ್ಲರನ್ನು ಕೃತಜ್ಞತೆ ಸಲ್ಲಿಸಿದರು. ಸುದ್ದಿಗೋಷ್ಠಿಯಲ್ಲಿ ಸೂರ್ಯಕಾಂತ ಜೀವಣಗಿ, ಕೃಷ್ಣಪ್ಪ ಜೋಷಿ, ಸುನೀಲ್ ಎಮ್, ಶಾಂತಯ್ಯ ಹಿರೇಮಠ ಇದ್ದರು.