ನನ್ನ ಮಾತು ಕಿವಿಗೆ ಹಾಕಿಕೊಳ್ಳದ ಅಪ್ಪ-ಮಕ್ಕಳು| ಜೆಡಿಎಸ್ ಪಕ್ಷದಲ್ಲಿ ಯಾರಿಗೂ ಹೇಳುವುದಕ್ಕೂ ಕೇಳುವುದಕ್ಕೂ ಅವಕಾಶಗಳಿಲ್ಲ| ಪ್ರತಿಯೊಂದು ಜಿಲ್ಲಾಧ್ಯಕ್ಷರಿಗೆ ಸೂಕ್ತ ಸೌಲಭ್ಯ ನೀಡಿ, ಅವರಿಂದ ಪಕ್ಷ ಸಂಘಟನೆಗೆ ಚಾಲನೆ ನೀಡಬೇಕೆಂದು ಕಳೆದ 10 ವರ್ಷಗಳಿಂದ ಹೇಳುತ್ತಿದ್ದರೂ ಅಪ್ಪ-ಮಕ್ಕಳು ಅದನ್ನು ತಮ್ಮ ಕಿವಿಗೆ ಹಾಕಿಕೊಳ್ಳುತ್ತಿಲ್ಲ|
ಜಮಖಂಡಿ(ಡಿ.15): ಜೆಡಿಎಸ್ ಪಕ್ಷದಲ್ಲಿ ಯಾರಿಗೂ ಜವಾಬ್ದಾರಿ ನೀಡುತ್ತಿಲ್ಲ. ಜೆಡಿಎಸ್ ಮುಖಂಡರು ಉತ್ತರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಅವರಿಗೆ ಈ ಭಾಗದಲ್ಲಿ ಪಕ್ಷ ಸಂಘಟನೆ ಬಗ್ಗೆ ಎಳ್ಳಷ್ಟೂ ಚಿಂತನೆ ಇಲ್ಲ ಎಂದು ಜೆಡಿಎಸ್ ಮಾಜಿ ಸಚಿವ, ವಿಪ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ಪಟ್ಟಣಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದಲ್ಲಿ ಯಾರಿಗೂ ಹೇಳುವುದಕ್ಕೂ ಕೇಳುವುದಕ್ಕೂ ಅವಕಾಶಗಳಿಲ್ಲ. ಪ್ರತಿಯೊಂದು ಜಿಲ್ಲಾಧ್ಯಕ್ಷರಿಗೆ ಸೂಕ್ತ ಸೌಲಭ್ಯ ನೀಡಿ, ಅವರಿಂದ ಪಕ್ಷ ಸಂಘಟನೆಗೆ ಚಾಲನೆ ನೀಡಬೇಕೆಂದು ಕಳೆದ 10 ವರ್ಷಗಳಿಂದ ಹೇಳುತ್ತಿದ್ದರೂ ಅಪ್ಪ-ಮಕ್ಕಳು ಅದನ್ನು ತಮ್ಮ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದರು.
ಕಾಂಗ್ರೆಸ್-ಬಿಜೆಪಿಯಲ್ಲಿ ಹೈಕಮಾಂಡ್ ಆಜ್ಞೆ ಹೆಚ್ಚಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಹೈಕಮಾಂಡ್ ಆದೇಶಕ್ಕೆ ಬಗ್ಗುತ್ತಿದ್ದು, ಬಿಜೆಪಿಯಲ್ಲೂ ಮೇಲಿನವರ ಆದೇಶ ಹೆಚ್ಚುತ್ತಿದೆ. ಬಿಜೆಪಿಗೆ ಉಪಚುನಾವಣೆಯಲ್ಲಿ 12 ಸ್ಥಾನಗಳು ಬಂದರೂ ಬಿಜೆಪಿ ಸುಭದ್ರವಾಗಿಲ್ಲ. ಉಪಜಾತಿಗಳಿವೆ. ಅಷ್ಟು ಡಿಸಿಎಂ ಹುದ್ದೆ ನೀಡುವ ಸ್ಥಿತಿ ಬಿಜೆಪಿಗೆ ಬಂದಿದೆ. ಉಪಮುಖ್ಯಮಂತ್ರಿ ಸ್ಥಾನಕ್ಕೆ ಸಾಂವಿಧಾನಿಕ ಬೆಲೆ ಇಲ್ಲ ಎಂದು ಹೇಳಿದರು.
ಹೊರಟ್ಟಿ ಅವರು ಬಿಜೆಪಿಯೆಡೆಗೆ ಒಲವು ತೋರಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾವುದೇ ಪಕ್ಷಕ್ಕೆ ಹೋಗಿಲ್ಲ. ಹೋಗುವುದೂ ಇಲ್ಲ. ಆದರೆ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಪಕ್ಷಾತೀತವಾಗಿ ನಾವೇನಾದರೂ ಮಾಡುವ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ. ಯಾವುದೇ ಪಕ್ಷದ ಆಸೆಗಾಗಿ ಪಕ್ಷ ಬದಲಿಸಲಾರೆ. ಎಲ್ಲ ಪಕ್ಷಗಳ ಹಣೆಬರಹ ಅಷ್ಟೇ ಆಗಿವೆ. ಪಕ್ಷ, ರಾಜಕೀಯ ಎಲ್ಲವೂ ಒಂದೇ ಆಗಿವೆ. ಎಲ್ಲಿ ದುಡ್ಡು-ಜಾತಿ ಬಲ ಎಲ್ಲಿ ಹೆಚ್ಚಿರುತ್ತದೆಯೋ ಅಲ್ಲಿ ಎಲ್ಲವೂ ನಡೆಯುತ್ತದೆ ಎಂದು ತಿಳಿಸಿದರು.
ಉತ್ತರ ಕರ್ನಾಟಕದಲ್ಲಿ 96 ಶಾಸಕರಿದ್ದು, ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಸಚಿವ ಸ್ಥಾನ ಖಾತೆಗೆ ಕಚ್ಚಾಟ ಇನ್ನು ಮುಂದೆ ಪ್ರಾರಂಭಗೊಳ್ಳಲಿದೆ. ಬಿಜೆಪಿ ಸರ್ಕಾರ ಹೆಚ್ಚು ಜಾಗೃತದಿಂದ ಸರ್ಕಾರ ನಡೆಸಬೇಕಾಗಿದೆ. ಅಧಿಕಾರದಿಂದ ಉತ್ತಮ ಕೆಲಸ ನಡೆಸಬೇಕು. ಬಿಜೆಪಿ ಸರ್ಕಾರಕ್ಕೆ ಜನರ ಸಿಂಪತಿ ಹೆಚ್ಚಾಗುತ್ತಿದೆ. ಬಿಜೆಪಿ ಹೈಕಮಾಂಡ್ ಬಿ.ಎಸ್. ಯಡಿಯೂರಪ್ಪನವರನ್ನು ಮೂರುವರೆ ವರ್ಷ ಮುಖ್ಯಮಂತ್ರಿಯನ್ನಾಗಿ ಮಾಡಲು ಸಾಧ್ಯವಿಲ್ಲ. ಅಧಿಕಾರಕ್ಕಾಗಿ ರಾಜೀನಾಮೆ ನೀಡುವ ಶಾಸಕರ ಆಸೆ-ಆಕಾಂಕ್ಷೆಗಳು ಬಿಡಬೇಕು ಎಂದು ಸಲಹೆ ನೀಡಿದರು.
ಭವಿಷ್ಯವಿಲ್ಲ:
ರಾಜ್ಯದಲ್ಲಿ ಇನ್ಮುಂದೆ ಜೆಡಿಎಸ್ ಪಕ್ಷಕ್ಕೆ ಹೆಚ್ಚು ಭವಿಷ್ಯ ಇಲ್ಲದಂತಾಗಿದೆ. ಜೆಡಿಎಸ್ ಪಕ್ಷದ ಭವಿಷ್ಯ ಕರಾಳವಾಗಿದೆ. ಜೆಡಿಎಸ್ ಅಪ್ಪ-ಮಕ್ಕಳು ಉತ್ತರ ಕರ್ನಾಟಕಕ್ಕೆ ಎಂದು ಆದ್ಯತೆ ನೀಡಲಾರರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.