ತನ್ನ ಕೋಮುವಾದಿ ನಿಲುವುಗಳಿಂದ ಮುಸ್ಲಿಂರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳೆವಣಿಗೆಗೆ ಪೆಟ್ಟು ನೀಡುತ್ತಿರುವ ಬಿಜೆಪಿ ಹಾಗೂ ಮೃದು ಹಿಂದುತ್ವದ ಮೂಲಕ ಮುಸ್ಲಿಮರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ಪಕ್ಷವನ್ನು ಎಂದಿಗೂ ಮುಸಲ್ಮಾನರು ನಂಬಬಾರದು ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮನವಿ ಮಾಡಿದರು.
ತುಮಕೂರು : ತನ್ನ ಕೋಮುವಾದಿ ನಿಲುವುಗಳಿಂದ ಮುಸ್ಲಿಂರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳೆವಣಿಗೆಗೆ ಪೆಟ್ಟು ನೀಡುತ್ತಿರುವ ಬಿಜೆಪಿ ಹಾಗೂ ಮೃದು ಹಿಂದುತ್ವದ ಮೂಲಕ ಮುಸ್ಲಿಮರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ಪಕ್ಷವನ್ನು ಎಂದಿಗೂ ಮುಸಲ್ಮಾನರು ನಂಬಬಾರದು ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮನವಿ ಮಾಡಿದರು.
ಅವರು ತುಮಕೂರಿನ ಸ್ಟಾರ್ ಕನ್ವೆಕ್ಷನ್ ಹಾಲ್‌ನಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದಿಂದ ಆಯೋಜಿಸಿದ್ದ ಮುಸ್ಲಿಂ ಮುಖಂಡರ ಸಮಾವೇಶದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಸುಮಾರು 1.30 ಕೋಟಿಯನ್ನ ಹೊಂದಿರುವ ಅಲ್ಪಸಂಖ್ಯಾತರು, ನಮ್ಮ ವಿರುದ್ಧ ನೇರವಾಗಿ ಮಾತನಾಡುವ ಬಿಜೆಪಿಯಿಂದ ಎಷ್ಟುಅಪಾಯವಿದೆಯೋ, ಅದಕ್ಕಿಂತ ಹೆಚ್ಚು ಅಪಾಯ ಮೊಸಳೆ ಕಣ್ಣೀರಿನ ಕಾಂಗ್ರೆಸ್‌ನಿಂದ ಇದೆ. ಹಾಗಾಗಿಯೇ ಕಳೆದ ಚುನಾವಣೆಯಲ್ಲಿ ಮುಸ್ಲಿಂ ಮತದಾರರು ಕೈಬಿಟ್ಟಪರಿಣಾಮ 120 ಸೀಟಿನಿಂದ 79ಕ್ಕೆ ಕುಸಿಯಿತು. ಜೆಡಿಎಸ್ ಪಕ್ಷದಲ್ಲಿ ಈ ಪರಿಸ್ಥಿತಿ ಇಲ್ಲ. ಪ್ರತಿಯೊಂದಕ್ಕೂ ಕೈ ಕಮಾಂಡ್ ಅನುಮತಿಗೆ ಕಾಯುವ ಅಗತ್ಯವಿಲ್ಲ. ಅಲ್ಪಸಂಖ್ಯಾತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಒಳ್ಳೆಯ ಆರೋಗ್ಯ ಸೇವೆ,ವಿವಿಧ ಯೋಜನೆಗಳ ಅಡಿಯಲ್ಲಿ ಪಕ್ಕಾ ಮನೆ ಎಲ್ಲವನ್ನು ಮಾಡಿಸಿಕೊಡುವುದು ನನ್ನ ಕರ್ತವ್ಯವಾಗಿದೆ. ನಿಮ್ಮ ಪರವಾಗಿ ನಾನೇ ನಿಂತು ಈ ಕೆಲಸ ಮಾಡುತ್ತೆನೆ ಎಂದ ಇಬ್ರಾಂಹಿ, ರಾಜ್ಯದಲ್ಲಿ ಮುಸ್ಲಿಮರು ಅನುಭವಿಸುತ್ತಿರುವ ಸಂಕಟಗಳಿಗೆ ಜೆಡಿಎಸ್ ಒಂದೇ ಪರಿಹಾರ ಎಂದರು.
ಬಿಜೆಪಿಯಿಂದ ವ್ಯಾಪಾರಕ್ಕೆ ದಕ್ಕೆ:
ಬಿಜೆಪಿ ಅಲ್ಪಸಂಖ್ಯಾತರ ವ್ಯಾಪಾರ ವಹಿವಾಟಿನ ಮೇಲೆ ಗದಾಪ್ರಹಾರ ನಡೆಸಿ, ಹಲಾಲ್ ಕಟ್, ಅಲ್ಪಸಂಖ್ಯಾತರಿಗೆ ಜಾತ್ರೆ, ಹಬ್ಬ, ಹರಿದಿನಗಳಲ್ಲಿ ವ್ಯವಹಾರಕ್ಕ ತಡೆ ಒಡ್ಡಿದ ಸಂದರ್ಭದಲ್ಲಿ ಕಾಂಗ್ರೆಸ್ ಸಮರ್ಪಕವಾಗಿ ಪ್ರತಿರೋಧ ತೋರಲಿಲ್ಲ. ಬದಲಾಗಿ ಕಾದು ನೋಡುವ ತಂತ್ರ ಅಳವಡಿಸಿಕೊಂಡಿತ್ತು. ಹಿಜಾಬ್‌ನಿಂದ ನಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾದಾಗಲೂ ಕಾಂಗ್ರೆಸ್ ಮೃದು ಧೋರಣೆಯನ್ನೇ ತೋರಿತ್ತು. ಈ ಎಲ್ಲಾ ಸನ್ನಿವೇಶಗಳನ್ನು ಅರ್ಥಮಾಡಿಕೊಂಡು, ಈ ಬಾರಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ತುಮಕೂರು ನಗರದಲ್ಲಿ ಗೋವಿಂದರಾಜು ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಪಕ್ಷವನ್ನು ಮಸ್ಲಿಂ ಬಾಂಧವರು ಬೆಂಬಲಿಸಬೇಕು. ಈ ಕ್ಷೇತ್ರದಿಂದ ಎನ್.ಗೋವಿಂದರಜು ಗೆದ್ದರೆ ನಾನು ಗೆದ್ದಂತೆ. ನನ್ನ ಶಕ್ತಿ ಹೆಚ್ಚಾಗಲಿದೆ. ನಿಮ್ಮ ಪರವಾಗಿ ಕೆಲಸ ಮಾಡಲು ಮತ್ತಷ್ಟುಶಕ್ತಿ ದೊರೆಯಲಿದೆ ಎಂದು ಸಿ.ಎಂ.ಇಬ್ರಾಹಿಂ ತಿಳಿಸಿದರು.
ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಮಾತನಾಡಿ, ಕಳೆದ ಚುನಾವಣೆಯಲ್ಲಿ ಅತಿ ಕಡಿಮೆ ಅಂತರದಿಂದ ಸೋಲು ಕಂಡಿದ್ದ ನನಗೆ ಪಕ್ಷದ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂ ಅವರ ಆಗಮನ, ಈ ಬಾರಿ ಗೆಲುವಿನ ಆಶಾಭಾವನೆ ಮೂಡಿಸಿದೆ. ಈ ಕ್ಷೇತ್ರಕ್ಕೆ ಮಾಜಿ ಶಾಸಕ ಡಾ.ರಫೀಕ್ ಅಹಮದ್ ಅವರ ಕೊಡುಗೆ ಶೂನ್ಯ. ಕೆಲವು ವಿಚಾರಗಳಲ್ಲಿ ನಾನು ಕೇಳಿದ ಪ್ರಶ್ನೆಗೆ ಇಂದಿಗೂ ಉತ್ತರ ಬಂದಿಲ್ಲ. ಅವರ ಕಾಲದಲ್ಲಿ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ಆರಂಭವಾಗಲೇ ಇಲ್ಲ. ಇಂದಿಗೂ ಕ್ಷೇತ್ರದ ಜನತೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯಕ್ಕೆ ಪರದಾಡುವಂತಹ ಸ್ಥಿತಿ ಇದೆ. ಜೆಡಿಎಸ್‌ನ ಪಂಚರತ್ನ ದಲ್ಲಿ ಬಡವರ ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ.ಶೇ 90ರಷ್ಟುಬಡವರೇ ಇರುವ ಅಲ್ಪಸಂಖ್ಯಾತರ ಸಮುದಾಯಕ್ಕೆ ಇದರಿಂದ ಹೆಚ್ಚಿನ ಲಾಭವಾಗಲಿದೆ. ಹಾಗಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಶಂಶುಲ್ ಹಕ್,ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಜಿಲ್ಲಾಧ್ಯಕ್ಷ ತನ್ವಿರ್ ರೆಹಮಾನ್ ಖಾನ್, ಜೆಡಿಎಸ್ ನಗರ ಅಧ್ಯಕ್ಷ ವಿಜಯಗೌಡ, ಉಪಮೇಯರ್ ನರಸಿಂಹಮೂರ್ತಿ,ಪಾಲಿಕೆ ಸದಸ್ಯ ಶ್ರೀನಿವಾಸ್, ಹಾಲೇನೂರು ಲೇಪಾಕ್ಷ, ಮುಖಂಡರಾದ ಇಸ್ಮಾಯಿಲ್, ಇಮ್ತಿಯಾಜ್, ಖಲಿಂವುಲ್ಲಾ,ಪರ್ವಿನ್ ತಾಜ್,ಲೀಲಾವತಿ, ಮೌಲ್ವಿಗಳು ಇದ್ದರು.
ಗೋಮಾಂಸ ರಪ್ತಿನಲ್ಲಿ ಭಾರತ ನಂ. 1: ಇಬ್ರಾಹಿಂ
ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಪಕ್ಷ ರಾಜ್ಯದಲ್ಲಿ ಗೋ ಮಾಂಸ ಮಾರಾಟ ನಿಷೇದಿಸಿದೆ. ಆದರೆ ಅವರೇ ಅಧಿಕಾರದಲ್ಲಿರುವ ಮೇಘಾಲಯ, ಗೋವಾ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಗೋಮಾಂಸ ಮಾರಾಟ ಚಾಲ್ತಿಯಲ್ಲಿದೆ. ಅಲ್ಲದೆ ಪ್ರಪಂಚದಲ್ಲಿಯೇ ಗೋ ಮಾಂಸ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಮಾತ್ರ ಇವರಿಗೆ ಗೋವು ದೇವರಾದರೆ, ಉಳಿದ ರಾಜ್ಯಗಳಲ್ಲಿ ಗೋವು ಇವರಿಗೆ ದೇವರಲ್ಲವೇ ಎಂದು ಪ್ರಶ್ನಿಸಿದ ಸಿ.ಎಂ.ಇಬ್ರಾಹಿಂ, ಅಧಿಕಾರದಲ್ಲಿದ್ದಾಗ ಬಡವರ ಬಗ್ಗೆ ಚಿಂತಿಸದ ಕಾಂಗ್ರೆಸ್ ಈಗ ಪ್ರತಿ ಮನೆಗೆ 2000 ರು, 200 ಯೂನಿಟ್ ವಿದ್ಯುತ್ ಹಾಗೂ 10 ಕೆ.ಜಿ.ಅಕ್ಕಿ ನೀಡಲು ಮುಂದಾಗಿದೆ. ಇವರ 2000 ಧನ ಸಹಾಯ ಅತ್ತೆ ಸೊಸೆ ಜಗಳಕ್ಕೆ ನಾಂದಿ ಹಾಡುವುದಿಲ್ಲವೇ ಎಂದು ವ್ಯಂಗ್ಯವಾಡಿದರು.