ಕಲಬುರಗಿ (ಸೆ.06): ಕಲಬುರಗಿ ಮಹಾನಗರ ಪಾಲಿಕೆ ಮತ್ತೆ ಅತಂತ್ರವಾಗಿದೆ. ಯಾವುದೇ ಪಕ್ಷಕ್ಕೂ ಮತದಾರರು ಬಹುಮತ ನೀಡಿಲ್ಲ.
ಒಟ್ಟು 55 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಹುಮತಕ್ಕೆ ಬೇಕಿರುವುದು 28 ಸ್ಥಾನಗಳಾಗಿದ್ದು, ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎರಡನೇ ಸ್ಥಾನಕ್ಕೆ ಬಿಜೆಪಿ ತೃಪ್ತಿ ಪಟ್ಟುಕೊಂಡಿದೆ.
ಕಾಂಗ್ರೆಸ್ 26 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ 23 ರಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ 4 ಸ್ಥಾನಗಳಲ್ಲಿ ವಿಜಯ ಸಾಧಿಸಿದ್ದು, ಇನ್ನೂ ಒಂದು ವಾರ್ಡ್ ಫಲಿತಾಂಶ ಬಾಕಿ ಇದೆ. ಬಿಜೆಪಿ ಬಂಡಾಯ ಅಭ್ಯರ್ಥಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.
ಬೆಳಗಾವಿಯಲ್ಲಿ ಬಿಜೆಪಿ ಅಧಿಕಾರಕ್ಕೇರಿ ಇತಿಹಾಸ ಸೃಷ್ಟಿ : MESಗೆ ಭಾರೀ ಮುಖಭಂಗ
ಜೆಡಿಎಸ್ ಕಿಂಗ್ ಮೇಕರ್ : ಯಾರಿಗೂ ಬಹುಮತ ಬಾರದ ಕಾರಣ ಸದ್ಯ ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗಿದೆ. ಎರಡು ದಿನ ಕಲಬುರಗಿಯಲ್ಲಿ ಉಳಿದು ಎಚ್ಡಿ ಕುಮಾರಸ್ವಾಮಿ ಅವರು ನಾಲ್ಕು ಸೀಟು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಯಾರಿಗೂ ಸ್ಪಷ್ಟ ಬಹುಮತ ಸಿಗದ ಕಾರಣ ಜೆಡಿಎಸ್ ಪಾತ್ರವೇ ನಿರ್ಣಾಯಕವಾಗಿದೆ.
ಗೆದ್ದ ಡಿಸ್ಕೌಂಟ್ ಅಭ್ಯರ್ಥಿ : ಮತದಾರರಿಗೆ ಡಿಸ್ಕೌಂಟ್ ನಲ್ಲಿ ಚಿಕಿತ್ಸೆ ಭರವಸೆ ನೀಡಿದ್ದ ಜೆಡಿಎಸ್ ಅಭ್ಯರ್ಥಿ ಅಲಿಮುದ್ದಿನ್ ಪಟೇಲ್ ಗೆಲುವು ಸಾಧಿಸಿದ್ದಾರೆ. ತನ್ನ ಸಹೋದರನ ಆಸ್ಪತ್ರೆಯಲ್ಲಿ ಡಿಸ್ಕೌಂಟ್ ಪತ್ರ ಮತದಾರರಿಗೆ ಹಂಚಿದ್ದ ಜೆಡಿಎಸ್ ಅಭ್ಯರ್ಥಿ ಗೆಲುವು ಪಡೆದಿದ್ದಾರೆ.
ಓವೈಸಿಗೆ ಮಣೆ ಹಾಕದ ಜನ : ಇನ್ನು ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 20 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದ ಓವೈಸಿ ನೆತೃತ್ವದ AIMIM ಒಂದೂ ಸ್ಥಾನದಲ್ಲಿಯೂ ಗೆಲುವು ಕಂಡಿಲ್ಲ. ಸ್ವತಃ ಕಲಬುರಗಿಗೆ ಬಂದು ಓವೈಸಿ ಪ್ರಚಾರ ನಡೆಸಿದ್ದರೂ ಮತದಾರರು ಒಲಿದಿಲ್ಲ.