ಕಾನೂನಾತ್ಮಕ ಹೋರಾಟ ಮುಂದುವರಿಸಿದ್ದೇವೆ| ಪ್ರತ್ಯೇಕ ಲಿಂಗಾಯತ ಹೋರಾಟ ನಿರಂತರವಾಗಿದ್ದು, ಶಿವಾನಂದ ಜಾಮಾದಾರ ತಂಡ ಕಾನೂನಾತ್ಮಕ ಹೋರಾಟ ನಡೆಸುತ್ತಿದೆ: ಜಯಮೃತ್ಯುಂಜಯ ಶ್ರೀಗಳು|
ಹುಬ್ಬಳ್ಳಿ(ಅ.21): ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವನ್ನು ಕೈಬಿಟ್ಟಿಲ್ಲ. ಅದು ಮುಂದುವರಿಯುತ್ತಲೇ ಇರುತ್ತದೆ. ಸದ್ಯ ಕಾನೂನಾತ್ಮಕ ಹೋರಾಟ ನಡೆಸಿದ್ದೇವೆ ಎಂದು ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಹೋರಾಟವನ್ನೂ ಕೈಬಿಟ್ಟಿಲ್ಲ. ಈಗಲೂ ನಮ್ಮ ಬೇಡಿಕೆ ಪ್ರತ್ಯೇಕ ಧರ್ಮವಾಗಬೇಕೆನ್ನುವುದೇ ಆಗಿದೆ ಎಂದರು. ನಮ್ಮ ಹೋರಾಟದಿಂದಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆ ಪ್ರಸ್ತಾವನೆ ತಿರಸ್ಕಾರಗೊಂಡಿದೆ ಎಂಬ ಭಾವನೆ ಎಲ್ಲರಲ್ಲೂ ಇದೆ. ಆದರೆ ರಾಜ್ಯ ಸರ್ಕಾರದ ಪ್ರಸ್ತಾವನೆ ತಿರಸ್ಕಾರವಾಗಿಲ್ಲ, ಪರಿಶೀಲನೆಯ ಹಂತದಲ್ಲಿದೆ. ನಮ್ಮ ಹೋರಾಟಕ್ಕೆ ಜಯ ಸಿಕ್ಕೆ ಸಿಗುತ್ತದೆ. ಪ್ರತ್ಯೇಕ ಲಿಂಗಾಯತ ಹೋರಾಟ ನಿರಂತರವಾಗಿದ್ದು, ಶಿವಾನಂದ ಜಾಮಾದಾರ ಅವರ ತಂಡ ಕಾನೂನಾತ್ಮಕ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು.
28ಕ್ಕೆ ಉಪವಾಸ:
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಅ. 28ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ನುಡಿದ ಅವರು, 1 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಪಂಚಮಸಾಲಿ ಸಮಾಜ ಹೊಂದಿದೆ. ನಮ್ಮ ಸಮಾಜ ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದೆ. ಆದ್ದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ರಾಜ್ಯ ಸರ್ಕಾರ 2-ಎ ಮೀಸಲಾತಿ ನೀಡಬೇಕು. ಕೇಂದ್ರ ಸರ್ಕಾರ ಒಬಿಸಿ ಪಟ್ಟಿಯಲ್ಲಿ ಪಂಚಮಸಾಲಿ ಸಮಾಜವನ್ನು ಸೇರಿಸಬೇಕು ಎಂದು ಒತ್ತಾಯಿಸಿ 28ರಂದು ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಅಂದು ನಡೆಯುವ ಸತ್ಯಾಗ್ರಹದಲ್ಲಿ ಸುಮಾರು 20 ಸಾವಿರ ಜನರು ಸೇರುವ ಸಾಧ್ಯತೆ ಇದೆ. ಇದು ಸಾಂಕೇತಿಕ ಹೋರಾಟ ಮಾತ್ರ. ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ನುಡಿದರು.
ಬಿಎಸ್ವೈ ಅವಧಿ ಮುಗಿದ ಬಳಿಕ ನಮ್ಮ ಸಮಾಜಕ್ಕೆ ಸಿಎಂ ಸ್ಥಾನ ನೀಡಿ:ಜಯಮೃತ್ಯುಂಜಯ ಸ್ವಾಮೀಜಿ
ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚಿನ ಜನ ಸೇರಿಸಬಾರದು ಎಂದು ನಿರ್ಧರಿಸಲಾಗಿದೆ. ಆದರೆ ಜನರೇ ತಾವೇ ಸ್ವತಃ ಬರುತ್ತೇವೆ ಎಂದು ಹೇಳಿದ್ದಾರೆ. ಎಲ್ಲರೂ ದೂರವೇ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತೇವೆ ಎಂದು ನುಡಿದಿದ್ದಾರೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿಯೇ ಬರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಾಕೀತು ಮಾಡಿದ್ದೇವೆ ಎಂದು ನುಡಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ರಾಜಶೇಖರ ಮೆಣಸಿನಕಾಯಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ ಹಿರೇಕೊಪ್ಪ, ನೀಲಕಂಠ ಅಸೂಟಿ, ಸೋಮಶೇಖರ ಅಲ್ಯಾಳ, ಬಸನಗೌಡ ಪಾಟೀಲ, ಕಲ್ಲಪ್ಪ ಯಲಿವಾಳ, ನಂದಕುಮಾರ ಪಾಟೀಲ ಇದ್ದರು.