'ಹೋರಾಟಕ್ಕೆ ಹೆದರಿ ಸರ್ಕಾರದ ಬಜೆಟ್‌ ದಿನಾಂಕ ಮುಂದೂಡುವ ಸಾಧ್ಯತೆ'

By Kannadaprabha News  |  First Published Jan 25, 2021, 1:58 PM IST

ತಮಗೆ ಸಚಿವ ಸ್ಥಾನ ಸಿಕ್ಕ ಕೂಡಲೇ ಮುರಗೇಶ್‌ ನಿರಾಣಿ ವಾಮಮಾರ್ಗದ ಮೂಲಕ ಸಮಾಜ ಹೋರಾಟದ ದಿಕ್ಕು ತಪ್ಪಿಸಬಾರದು| ಕಳೆದ 26 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರೂ, ಯಾವ ಸರ್ಕಾರವೂ ಗಮನ ಹರಿಸಿಲ್ಲ| ನಮ್ಮ ಸಮಾಜದವರೇ ಮುಖ್ಯಮಂತ್ರಿ ಆಗಿದ್ದರೂ ನಾವು ಹೋರಾಟ ಮಾಡಿ ಮೀಸಲಾತಿ ಪಡೆಯುವಂತಹ ಸ್ಥಿತಿ ನಮಗೆ ನಿರ್ಮಾಣ| 


ಹೂವಿನಹಡಗಲಿ(ಜ.25): ಮೀಸಲಾತಿ ನೀಡಲು ಮುಖ್ಯಮಂತ್ರಿಗೆ ಪರಮಾಧಿಕಾರವಿದೆ. ಆದರೆ ಸಮಿತಿ ರಚನೆ ಅಧ್ಯಯನ ಹೆಸರಿನಲ್ಲಿ ಸುಳ್ಳು ಹೇಳಿ ಸಮಾಜದ ಹೋರಾಟವನ್ನು ದಿಕ್ಕು ತಪ್ಪಿಸುವ ಕೆಲಸ ಮುಖ್ಯಮಂತ್ರಿ ಮಾಡುತ್ತಿದ್ದಾರೆಂದು ಆರೋಪಿಸಿದ ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮಾಜದ ಹೋರಾಟಕ್ಕೆ ಹೆದರುತ್ತಿರುವ ಸರ್ಕಾರ ತಮ್ಮ ಬಜೆಟ್‌ ದಿನಾಂಕವನ್ನೇ ಮುಂದೂಡುವ ಸಂಶಯವಿದೆ ಎಂದರು.

ಹಗರಿಬೊಮ್ಮನಹಳ್ಳಿ ತಾಲೂಕಿನ ನೆಲ್ಲುಕುದುರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 26 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರೂ, ಯಾವ ಸರ್ಕಾರವೂ ಗಮನ ಹರಿಸಿಲ್ಲ. ನಮ್ಮ ಸಮಾಜದವರೇ ಮುಖ್ಯಮಂತ್ರಿ ಆಗಿದ್ದರೂ ನಾವು ಹೋರಾಟ ಮಾಡಿ ಮೀಸಲಾತಿ ಪಡೆಯುವಂತಹ ಸ್ಥಿತಿ ನಮಗೆ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Latest Videos

undefined

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸದನ ಸಮಿತಿ ವರದಿ ಸಿದ್ಧಪಡಿಸುವಂತೆ ಅಂದಿನ ಸಚಿವ ಸಿ.ಎಂ. ಉದಾಸಿಯವರನ್ನು ನೇಮಿಸಲಾಗಿತ್ತು. ಅಂದು ಸರ್ಕಾರಕ್ಕೆ ವರದಿ ನೀಡಿದ್ದರೂ, ಈ ವರೆಗೂ ಏನಾಗಿದೆ ಎಂಬುದೇ ಗೊತ್ತಿಲ್ಲ. ಅದೇ ವರದಿ ಮೇಲೆ ಮೀಸಲಾತಿ ಕೇಳದೇ ಇರುವ ಕೆಲವರಿಗೆ ಮೀಸಲಾತಿ ಜಾರಿ ಮಾಡಿದ್ದರು. ನಾವು ಪಾದಯಾತ್ರೆಯ ಮೂಲಕ ಹೋರಾಟ ಮಾಡುತ್ತಿದ್ದರೂ, ನಮ್ಮ ಸಮಾಜವನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದರು.

ಪಂಚಮಸಾಲಿ ಹೋರಾಟಕ್ಕೆ ಮೊದಲ ಬಲಿಯಾಗಿದ್ದು, ಮುಂದಿನ ದಿನಗಳನ್ನು ಹೋರಾಟ ತನ್ನ ಸ್ವರೂಪ ಬದಲಾವಣೆಯಾಗುತ್ತದೆ. ಆ ಸಂದರ್ಭದಲ್ಲಿ ನಡೆಯುವ ಎಲ್ಲ ಅನಾಹುತಕ್ಕೆ ಸರ್ಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡುತ್ತಾ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಮೀಸಲಾತಿ ಕೇಳಲು ಅರ್ಹರಿದ್ದೇವೆ. ನಮ್ಮ ಸಮಾಜ ಅವರ ಬೆಂಬಲಿಕ್ಕೆ ನಿಂತಿದೆ. ಜತೆಗೆ ಸರ್ಕಾರ ರಚನೆಗೂ ಕಾರಣರಾಗಿದ್ದೇವೆಂದು ಶ್ರೀಗಳು ಹೇಳಿದರು.

ನಮಗೆ ಹೈಟೆಕ್, ರಂಗೀಲಾ ಸ್ವಾಮೀಜಿ ಬೇಡ, ವಚನಾನಂದ ಶ್ರೀ ವಿರುದ್ಧ ಹರಿಹಾಯ್ದ ಮಾಜಿ ಶಾಸಕ

ಮುರುಗೇಶ ನಿರಾಣಿ ಸಚಿವರಾದ ಕೂಡಲೇ ಹೋರಾಟವನ್ನು ಕೈ ಬಿಡಬೇಕೆಂದು ಹೇಳುತ್ತಿದ್ದಾರೆ. ಅವರು ಜವಾಬ್ದಾರಿಯುತವಾಗಿ ಮಾತನಾಡಲಿ, ಅವರಿಗೆ ಈ ಕುರಿತು ಮನವರಿಕೆ ಮಾಡಲಾಗಿದೆ. ತಮಗೆ ಸಚಿವ ಸ್ಥಾನ ಸಿಕ್ಕ ಕೂಡಲೇ ವಾಮಮಾರ್ಗದ ಮೂಲಕ ಸಮಾಜ ಹೋರಾಟದ ದಿಕ್ಕು ತಪ್ಪಿಸಬಾರದೆಂದು ಹೇಳಿದರು.

ಹೂವಿನ ಅಭಿಷೇಕ

ಪಾದಯಾತ್ರೆಯು ಹಗರಿಬೊಮ್ಮನಹಳ್ಳಿಯ ನೆಲ್ಲು ಕುದುರೆ ಮೂಲಕ ಹೂವಿನಹಡಗಲಿ ತಾಲೂಕಿನ ಇಟ್ಟಿಗೆ ಗ್ರಾಮಕ್ಕೆ ಆಗಮಿಸಿದ್ದು, ಪಾದಯಾತ್ರೆಯಲ್ಲಿ 15 ಸಾವಿರಕ್ಕೂ ಅಧಿಕ ಜನ ಸೇರಿದ್ದರು. ಶ್ರೀಗಳಿಗೆ ದಾರಿಯುದ್ದಕ್ಕೂ ಹೂವಿನಹಡಗಲಿಯ ಯುವ ಘಟಕದ ಪದಾಧಿಕಾರಿಗಳು 2 ಕ್ವಿಂಟಲ್‌ ಹೂವಿನ ಅಭಿಷೇಕ ಮಾಡಿದರು. .

ಪಾದಯಾತ್ರೆಯಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿದಂತೆ ವಿವಿಧ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ, ಬಿ. ಚಂದ್ರನಾಯ್ಕ, ಎಂ.ಪಿ. ಪ್ರಕಾಶ ಅವರ ಪುತ್ರಿ ಸುಮಾ ವಿಜಯ್‌ ಹಾಗೂ ಸಾಕಷ್ಟು ಜನಪ್ರತಿನಿಧಿಗಳು ಶ್ರೀಗಳನ್ನು ಭೇಟಿ ಮಾಡಿ 2ಎ ಮೀಸಲಾತಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
 

click me!