ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾದ ಕಪ್ಪತ ಉತ್ಸವ-2021 ಉದ್ಘಾಟಿಸಿದ ವಾರ್ತಾ ಮತ್ತು ಸಣ್ಣ ಕೈಗಾರಿಕಾ ಸಚಿವ ಸಿ.ಸಿ. ಪಾಟೀಲ| ಸಸ್ಯಕಾಶಿ ಕಪ್ಪತಗುಡ್ಡವನ್ನು ಅಭಿವೃದ್ಧಿಪಡಿಸಿ ಹಸಿರು ಕ್ರಾಂತಿ ಜಿಲ್ಲೆಯಾಗಿಸಲು ಎಲ್ಲರೂ ಶ್ರಮಿಸಬೇಕು|
ಗದಗ(ಜ.25): ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಖ್ಯಾತಿ ಪಡೆದ ಕಪ್ಪತಗುಡ್ಡ ತನ್ನ ಒಡಲಿನಲ್ಲಿ ಅನೇಕ ಔಷಧೀಯ ಸಸ್ಯ ಸಂಪತ್ತನ್ನು ಹೊಂದಿದ್ದು, ಅದರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಯಾವುದೇ ರೀತಿಯ ಗಣಿಗಾರಿಕೆಗೆ ಅಲ್ಲಿ ಅವಕಾಶ ನೀಡುವುದಿಲ್ಲ ಎಂದು ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದ್ದಾರೆ.
ಭಾನುವಾರ ಗದಗ ನಗರದ ಅಂಬೇಡ್ಕರ್ ಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾದ ಕಪ್ಪತ ಉತ್ಸವ-2021 ಉದ್ಘಾಟಿಸಿ ಸಚಿವರು ಮಾತನಾಡಿದರು. ಸಸ್ಯಕಾಶಿ ಕಪ್ಪತಗುಡ್ಡವನ್ನು ಅಭಿವೃದ್ಧಿಪಡಿಸಿ ಹಸಿರು ಕ್ರಾಂತಿ ಜಿಲ್ಲೆಯಾಗಿಸಲು ಎಲ್ಲರೂ ಶ್ರಮಿಸಬೇಕು. ಕಪ್ಪತಗುಡ್ಡದ ಔಷಧೀಯ ಸಸ್ಯಗಳ ಪ್ರಭೇದ ಹಾಗೂ ಅವುಗಳ ಉಪಯೋಗದ ಕುರಿತು ಅರಣ್ಯ ಅಧಿಕಾರಿಗಳು ಹೊರತಂದಿರುವ ಕಪ್ಪತಗುಡ್ಡ ಪುಸ್ತಕವನ್ನು ಆಂಗ್ಲಭಾಷೆಯಿಂದ ಕನ್ನಡ ಭಾಷೆಗೆ ತಜುರ್ಮೆಗೊಳಿಸುವುದರಿಂದ ಸಾರ್ವಜನಿಕರಲ್ಲಿ ಕಪ್ಪತಗುಡ್ಡದ ಮಹತ್ವ ತಿಳಿದುಕೊಳ್ಳಲು ಹೆಚ್ಚಿನ ಅನುಕೂಲಕವಾಗಲಿದ್ದು, ಇದಕ್ಕೆ ಬೇಕಾಗುವ ಅನುದಾನವನ್ನು ಒದಗಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಭಾರತ ದೇಶವು ಜೀವ ವೈವಿಧ್ಯತೆಯಲ್ಲಿ ಅತ್ಯಂತ ಶ್ರೀಮಂತವಾಗಿದೆ. ಜಗತ್ತಿನಲ್ಲಿ ಜೀವವೈವಿಧ್ಯತೆಗೆ ಗುರುತಿಸಲಾದ 18 ರಾಷ್ಟ್ರಗಳಲ್ಲಿ ಭಾರತವು ಒಂದಾಗಿರುವುದು ಹೆಮ್ಮೆಯ ವಿಷಯ. ಇಂದಿನ ಸ್ಪರ್ಧಾತ್ಮಕ ಹಾಗೂ ಔದ್ಯೋಗಿಕರಣ ಕ್ರಾಂತಿಯಲ್ಲಿ ಅರಣ್ಯ ಸಂಪತ್ತು ವಿನಾಶದ ಅಂಚಿಗೆ ಸಾಗುತ್ತಿದೆ. ಸಂಶೋಧನೆ ಪ್ರಕಾರ ಪ್ರಸ್ತುತ ಒಂದು ವರ್ಷದಲ್ಲಿ ಸಾವಿರ ಸಸ್ಯ ಪ್ರಭೇದಗಳು ನಾಶವಾಗುತ್ತಲಿವೆ. ಅಂದರೆ ಪ್ರತಿ ದಿನಕ್ಕೆ ಇಪ್ಪತ್ತೇಳು ಸಸ್ಯ ಪ್ರಭೇದಗಳು ನಾಶವಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಕಪ್ಪತಗುಡ್ಡ ಪ್ರದೇಶದಲ್ಲಿ 371ಕ್ಕೂ ಅಧಿಕ ವಿವಿಧ ಜಾತಿಯ ಔಷಧೀಯ ಸಸ್ಯಗಳು ಇರುವ ಕುರಿತು ಕಪ್ಪತಗುಡ್ಡ ಪುಸ್ತಕದಲ್ಲಿ ಉಲ್ಲೇಖಿಸಲಾಗಿದ್ದು, ಹೆಮ್ಮೆಯ ವಿಷಯವಾಗಿದೆ ಎಂದರು.
ಗದಗ: ಕಪ್ಪತಗುಡ್ಡ ವ್ಯಾಪ್ತಿಯಲ್ಲಿನ 14 ಕಲ್ಲು ಕ್ವಾರಿ ಸ್ಥಗಿತಕ್ಕೆ ನೊಟೀಸ್
ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಮಾತನಾಡಿ, ಪ್ರಕೃತಿಯಿಂದ ನಾವು ಬಹಳಷ್ಟುವಿಷಯಗಳನ್ನು ಕಲಿಯಬೇಕಾಗಿದೆ. ಪರಿಸರ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವುದರೊಂದಿಗೆ ಬೆಳೆಸುವ ಕಾರ್ಯದಲ್ಲಿ ತೊಡಗಬೇಕಾಗಿದೆ. ಇಂದು ನಾವೆಲ್ಲರೂ ಸಸ್ಯ ಸಂಕುಲವನ್ನು ಉಳಿಸಿದರೆ ಮುಂದಿನ ಜೀವ ಸಂಕುಲ ನೆಮ್ಮದಿ ಜೀವನ ಸಾಗಿಸಲು ಸಾಧ್ಯವಾಗಲಿದೆ ಎಂದರು.
ಡಿಎಫ್‌ಒ ಎ.ವಿ. ಸೂರ್ಯಸೇನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಧಾರವಾಡ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರ ಸಾಗರ, ಅರಣ್ಯ ತರಬೇತಿ ಕೇಂದ್ರದ ಜಂಟಿ ನಿರ್ದೇಶಕಿ ಸೋನಲ್ ವೃಷ್ಣಿ, ಪರಿಸರ ಸಂರಕ್ಷಣಾಧಿಕಾರಿ ಡಾ. ಸಮದ್ ಕೊಟ್ಟೂರ, ಶಿವಾನಂದ ಕಳವೆ, ಅಜಿತಕುಮಾರ ಸಿರಸಾಟೆ, ವನ್ಯಜೀವಿ ಪರಿಪಾಲಕ ಡಾ. ಅರುಣ ಎಸ್.ಕೆ., ಸಿ.ಎಸ್. ಅರಷನಾಳ ಹಾಗೂ ಸುಗಂಧಿ ಮತ್ತು ರಾಣಾ ಇವರು ಕಪ್ಪತಗುಡ್ಡ-ಗದುಗಿನ ಔಷಧಿ ಸಸ್ಯಗಳ ನಿಕ್ಷೇಪ, ಸಾಂಕ್ರಾಮಿಕ ರೋಗಗಳ ಯುಗದಲ್ಲಿ ಪರಿಸರ ಸಂರಕ್ಷಣೆ, ಬಯಲು ಸೀಮೆಯಲ್ಲಿ ನೆಲ, ಜಲ ಸಂರಕ್ಷಣೆ, ಕರ್ನಾಟಕದ ಪೂರ್ವ ಬಯಲುಗಳಲ್ಲಿ ವನ್ಯಪ್ರಾಣಿಗಳ ಸಂರಕ್ಷಣೆ, ಜನಜೀವನದಲ್ಲಿ ಜೌಗು ಪ್ರದೇಶಗಳ ಪಾತ್ರ, ಕೌಶಲ್ಯಾಭಿವೃದ್ಧಿಯಲ್ಲಿ ಗ್ರಾಮ ಅರಣ್ಯ ಸಮಿತಿಗಳು, ಸುಸ್ಥಿರ ಅಭಿವೃದ್ಧಿಯಲ್ಲಿ ಪರಿಸರ ಸೂಕ್ಷ್ಮವಲಯದ ಪಾತ್ರಗಳ ಕುರಿತು ಉಪನ್ಯಾಸ ಮಂಡಿಸಿದರು.
ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡರ, ತಾಪಂ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಎಸ್ಪಿ ಯತೀಶ್ ಎನ್., ಎಸಿಎಫ್ ಪರಿಮಳಾ ವಿ.ಎಚ್., ಸೇರಿದಂತೆ ಪರಿಸರ ಪ್ರೇಮಿಗಳು, ಅರಣ್ಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಪ್ಪತ್ತಗುಡ್ಡದ ಮಣ್ಣು ತಿಂದು ಆರೋಗ್ಯ ಸುಧಾರಣೆ ಮಾಡಿಕೊಳ್ಳುತ್ತಿವೆ ಕುರಿ, ಮೇಕೆಗಳು..!
ಸಮರ್ಥವಾಗಿ ನಿಭಾಯಿಸಿದ್ದೇನೆ...
ಪ್ರಥಮ ಬಾರಿಗೆ ಯಡಿಯೂರಪ್ಪ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜವಾಬ್ದಾರಿ ವಹಿಸಲಾಗಿತ್ತು. ಆ ಸಂದರ್ಭದಲ್ಲಿ ಬಾಲ ಸಂಜೀವಿನಿ, ಭಾಗ್ಯಲಕ್ಷ್ಮೀ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಅತ್ಯಂತ ಜನಪರ ಈ ಯೋಜನೆಗಳನ್ನು ಅಳಿಸಿ ಹಾಕಲು ಸಾಧ್ಯವಿಲ್ಲ. ಈ ಬಾರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜವಾಬ್ದಾರಿ ವಹಿಸಲಾಗಿತ್ತು. ಅವ್ಯವಸ್ಥೆ ಆಗರವಾಗಿದ್ದ ಅಕ್ರಮ ಗಣಿಗಾರಿಕೆ ಚಟುವಟಿಕೆ ತಡೆಯಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗಿದೆ. ಗಣಿ ಮತ್ತು ಅರಣ್ಯ ಇಲಾಖೆ ಎರಡೂ ಸಹ ಎಣ್ಣೆ ಹಾಗೂ ಸಿಗೇಕಾಯಿ ಸಂಬಂಧ ಹೊಂದಿದ್ದು ರಾಜ್ಯದ ಅಭಿವೃದ್ಧಿಗೆ ಗಣಿಗಾರಿಕೆ ಅಗತ್ಯ. ಅದರಂತೆ ನಾಳಿನ ಉತ್ತಮ ಪರಿಸರಕ್ಕೆ ಅರಣ್ಯ ಬೇಕು. ಈ ಎರಡು ಇಲಾಖೆಗಳನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ನನಗಿದೆ ಎಂದು ಸಚಿವರು, ನನಗೆ ಖಾತೆ ಹಂಚಿಕೆ ವಿಷಯದಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಕಾರ್ಯಕ್ರಮದ ವೇದಿಕೆಯಲ್ಲಿ ಹೇಳಿದ್ದು ವಿಶೇಷವಾಗಿತ್ತು.
ಖಾತೆ ಬದಲಾವಣೆ ಮುಖ್ಯಮಂತ್ರಿಗಳ ಪರಮಾಧಿಕಾರ ಈಗ ನೀಡಿರುವ ಕೈಗಾರಿಕಾ ಇಲಾಖೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ರಾಜ್ಯದಲ್ಲಿ ಔದ್ಯೋಗಿಕ ಕ್ರಾಂತಿಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತೇನೆ. ಯಾವಾಗಲೂ ಮುಖ್ಯಮಂತ್ರಿ ಬಳಿ ಇರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜವಾಬ್ದಾರಿಯನ್ನು ನನ್ನ ಮೇಲೆ ವಿಶಾಸ್ವವಿಟ್ಟು ಜವಾಬ್ದಾರಿ ವಹಿಸಿದ್ದು ಇದಕ್ಕಾಗಿ ಮುಖ್ಯಮಂತ್ರಿಗೆ ಆಭಾರಿಯಾಗಿದ್ದೇನೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ವಾರ್ತಾ ಮತ್ತು ಸಣ್ಣ ಕೈಗಾರಿಕಾ ಸಚಿವ ಸಿ.ಸಿ. ಪಾಟೀಲ ಹೇಳಿದ್ದಾರೆ.