ಪಂಚಮಸಾಲಿ ಮೀಸಲಾತಿ: ಡಿ.12ಕ್ಕೆ 25 ಲಕ್ಷ ಜನರೊಂದಿಗೆ ವಿಧಾನಸೌಧ ಮುತ್ತಿಗೆ, ಕೂಡಲ ಶ್ರೀ

By Kannadaprabha News  |  First Published Oct 22, 2022, 7:30 PM IST

ಈಗಾಗಲೇ ನಾಡಿನಾದ್ಯಂತ ಮೀಸಲಾತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಕೂಡ ನಾಲ್ಕು ಬಾರಿ ಮಾತುತಪ್ಪಿ ಸರ್ಕಾರ ನಿರ್ಲಕ್ಷ್ಯ ಮಾಡಿದೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ 


ಹುಕ್ಕೇರಿ(ಅ.22): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಸರ್ಕಾರಕ್ಕೆ ಕೊಟ್ಟಗಡುವು ಮುಗಿದು ಹೋಗಿದೆ. ಹೀಗಾಗಿ ಡಿ.12ಕ್ಕೆ 25 ಲಕ್ಷ ಜನರೊಂದಿಗೆ ವಿಧಾನಸೌಧ ಮುತ್ತಿಗೆಗೆ ನಿರ್ಧರಿಸಲಾಗಿದೆ ಎಂದು ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಬೈಪಾಸ್‌ ರಸ್ತೆ ಪಕ್ಕದಲ್ಲಿ ನಿರ್ಮಿಸಿದ ದಿ.ಅಪ್ಪಣಗೌಡ ಪಾಟೀಲ ಸಭಾಮಂಟಪದಲ್ಲಿ ಶುಕ್ರವಾರ ಜರುಗಿದ ಐತಿಹಾಸಿಕ ಪಂಚಮಸಾಲಿ ಬೃಹತ್‌ ಸಮಾವೇಶದಲ್ಲಿ ಮೀಸಲಾತಿ ಹಕ್ಕೋತಾಯ ಮಂಡಿಸಿ ಮಾತನಾಡಿದ ಅವರು, ಈಗಾಗಲೇ ನಾಡಿನಾದ್ಯಂತ ಮೀಸಲಾತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಕೂಡ ನಾಲ್ಕು ಬಾರಿ ಮಾತುತಪ್ಪಿ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಚುನಾವಣೆ ಘೋಷಣೆ ಒಳಗಾಗಿ ಮಾಡು ಇಲ್ಲವೇ ಮಡಿ ನಿರ್ಣಯ ತೆಗೆದುಕೊಳ್ಳಬೇಕು. ಪಂಚಮಸಾಲಿ ಸಮುದಾಯದವರ ಸಹಾಯ ಪಡೆದು ಮಠಾಧೀಶರು ಕೂಡ ಬೆಂಬಲ ಸೂಚಿಸಿಲ್ಲ. ಇದು ಸಮುದಾಯದವರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಸರ್ಕಾರದ ವಿರುದ್ಧ ಗುಡುಗಿದರು.

Tap to resize

Latest Videos

ನನ್ನ ಬಳಿಯೂ ರೆಕಾರ್ಡಿಂಗ್‌ ಇದೆ, ಅದನ್ನು ತೆಗೆದರೆ ನಿಮ್ಮದೆಲ್ಲವೂ ಬಂದ್‌: ಯತ್ನಾಳ್‌ ಬಾಂಬ್‌..!

ನಮ್ಮ ಸಮುದಾಯದ ನಾಯಕರನ್ನು ನಾಯಕ ಅಲ್ಲ ಎಂದರೆ ಸಹಿಸುವುದಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರಿಗೆ ಟಾಂಗ್‌ ನೀಡಿದ ಶ್ರೀಗಳು, ಯತ್ನಾಳ ಹಾಗೂ ಅರವಿಂದ ಬೆಲ್ಲದ ಅಷ್ಟೆಅಲ್ಲ ನಮ್ಮ ಸಮುದಾಯದ ಯಾರ ಬಗ್ಗೆಯೂ ಹಗುರ ಮಾತು ಬೇಡ. ಅವರನ್ನು ಅಗೌರವವಾಗಿ ನಡೆಸಿಕೊಳ್ಳುವುದು ಸರಿಯಲ್ಲ. ನಮ್ಮ ಸಮಾಜದ ನಾಯಕರೊಂದಿಗೆ ಇಡೀ ಸಮುದಾಯವಿದೆ. ಇಷ್ಟುದಿನ ನಾವು ಬೇರೆ ನಾಯಕರನ್ನು ಹಿಂಬಾಲಿಸುತ್ತಿದ್ದೆವು. ಆದರೆ ಈಗ ನಮ್ಮ ನಾಯಕರನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರೆ, ನಮ್ಮ ಸಮಾಜ ನಿಮ್ಮ ಮೇಲೆ ಅಸಮಾಧಾನ ಹೊಂದುವುದು ಖಚಿತ. ನಿಮ್ಮ ಪಕ್ಷದ ಆಂತರಿಕ ವಿಚಾರ ನಿಮಗೆ ಬಿಟ್ಟಿದ್ದು. ನಮ್ಮ ನಾಯಕರ ವಿರುದ್ಧ ಪಿತೂರಿ ಮಾಡಿದರೆ ಸಮಾಜ ಸಿಡಿದೇಳುವುದು ಖಚಿತ. ಒಂದು ಸಮಾಜಕ್ಕೆ ಮೀಸಲಾತಿ ನೀಡಿ ನಮ್ಮನ್ನು ಕಡೆಗಣಿಸಿದ್ದಕ್ಕೆ ಸಮಾಜಕ್ಕೆ ಆಕ್ರೋಶ ಇದೆ. ಮೀಸಲಾತಿ ಕೊಡುವುದು ಸರಿ ಎನಿಸಿದರೆ ಕೂಡಲೇ ಘೋಷಣೆ ಮಾಡಿ ಎಂದು ಹೇಳಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ಮಾತನಾಡಿ, ಸೂರ್ಯ ಮುಳುಗದ ಸಾಮ್ರಾಜ್ಯವನ್ನ ಹುಟ್ಟುಡಗಿಸಿದ ಚನ್ನಮ್ಮನ ವಂಶಸ್ಥರು ನಾವು. ನನ್ನ ಮತಕ್ಷೇತ್ರದಲ್ಲಿ 5 ರಿಂದ 6 ಸಾವಿರ ಜನ ನನ್ನ ಪಂಚಮಸಾಲಿ ಜನ ಇರಬಹುದು. ಆದರೆ ಪಂಚಮಸಾಲಿ ಮಗಳಿಗೆ ನಮ್ಮ ಸಮಾಜವನ್ನೂ ಜತೆಗೆ ಕರೆದುಕೊಂಡು ಹೋಗು ಅಂತ ನನಗೆ ಆಶೀರ್ವಾದ ಮಾಡಿದ್ದಾರೆ. ಕೇಂದ್ರದಲ್ಲಿ ನಿಮ್ಮದೆ ಸರ್ಕಾರ ಇದೆ ರಾಜ್ಯದಲ್ಲೂ ನಿಮ್ಮದೆ ಸರ್ಕಾರ ಇದೆ. ನಮಗೆ 2 ಎ ಮೀಸಲಾತಿ ನೀಡಲು ಸಹಕರಿಸಿ ಎಂದು ಶಾಸಕ ಅರವಿಂದ ಬೆಲ್ಲದ ಅವರಿಗೆ ಮನವಿ ಮಾಡಿದರು.

ಮಾಜಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ನಾವು ಹೊರಗೆ ಬಿಳಿ ಅಂಗಿ ಹಾಕಿಕೊಂಡು ಚನ್ನಾಗಿ ಕಾಣುತ್ತೇವೆ. ಆದರೆ ಒಳಗಡೆ ತುಂಬ ನೋವಿದೆ. ರಾಜಕೀಯದಲ್ಲಿರುವ ನಮ್ಮನ್ನ ಯಾರೂ ಬಿಡಲ್ಲ. ಹಾಗೆ ಸ್ವಾಮೀಜಿಯವರನ್ನೂ ಬಿಡುವುದಿಲ್ಲ. ಎಲ್ಲರ ವಿರುದ್ಧ ಒಂದೊಂದು ಪಿತೂರಿಗಳು ಆಗುತ್ತಲೇ ಇರುತ್ತವೆ. ನಮ್ಮ ಸಮಾಜದ ವಿರುದ್ಧ ವ್ಯವಸ್ಥಿತ ಸಂಚು ಮಾಡುವವರ ವಿರುದ್ಧ ಎದ್ದೆಳಬೇಕಿದೆ ಎಂದರು.

ಸಿಎಂ ಅವರು ಈಗಾಗಲೇ ನಾಲ್ಕು ಬಾರಿ ಮಾತು ತಪ್ಪಿದ್ದಾರೆ. ನಮ್ಮ ಸಮಾಜ ಒಂದು ಕಣ್ಣು ತೆಗೆದರೆ ಏನು ಬದಲಾವಣೆ ಮಾಡಬೇಕು ಅದನ್ನ ಮಾಡುತ್ತೇವೆ. 1.30 ಕೋಟಿ ಜನಸಂಖ್ಯೆ ಹೊಂದಿರುವ ದೊಡ್ಡ ಸಮುದಾಯ ನಮ್ಮದು. ನಾವು ಒಕ್ಕದಿದ್ದರೆ ಜಗವೆಲ್ಲ ಬಿಕ್ಕುತ್ತೆ. ಬೊಮ್ಮಾಯಿಯವರ ನೀವು ನಮ್ಮ ತಾಳ್ಮೆ ಪರೀಕ್ಷಿಸಬೇಡಿ ಎಂದು ಎಚ್ಚರಿಸಿದರು. ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಮಾಜಿ ಸಚಿವ ಎ.ಬಿ.ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

ಬೆಳಗಾವಿ: ಅ. 29ರಿಂದ ಯಡೂರನಿಂದ ಶ್ರೀಶೈಲವರೆಗೆ ಪಾದಯಾತ್ರೆ, ಶ್ರೀಶೈಲ ಜಗದ್ಗುರು ಶ್ರೀ

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಪಂಚಮಸಾಲಿಗಳ ನೋವಿಗೆ ಸರ್ಕಾರ ಶೀಘ್ರದಲ್ಲಿ ಸ್ಪಂದಿಸುವ ಭರವಸೆ ನೀಡಿದರು. ಗೌರವಾಧ್ಯಕ್ಷರು ವಿಜಯ ರವದಿ ಹುಕ್ಕೇರಿ ತಾಲೂಕಿನ ಪಂಚಮಸಾಲಿ ಮಹನೀಯರ ಕೊಡುಗೆ ವಿವರಿಸಿದರು ಮಾಜಿ ಸಚಿವ ಸಚಿವ ಶಶಿಕಾಂತ ನಾಯಿಕ, ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ, ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌ ಶಿವಶಂಕರ, ಕಾಂಗ್ರೆಸ್‌ ಮುಖಂಡೆ ವೀಣಾ ಕಾಶಪ್ಪನವರ, ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮುಖಂಡರಾದ ವಿಜಯ ರವದಿ, ಗುಂಡು ಪಾಟೀಲ, ಬಸನಗೌಡ ಪಾಟೀಲ, ಆರ್‌.ಕೆ ಪಾಟೀಲ, ಡಿ.ಟಿ.ಪಾಟೀಲ, ಸುಭಾಷ ನಾಯಿಕ, ರಾಜೇಂದ್ರ ಪಾಟೀಲ, ಅಪ್ಪಾಸಾಹೇಬ ಶಿರಕೋಳಿ, ರಾಜೇಶ ನೇರ್ಲಿ, ಸತ್ಯಪ್ಪ ನಾಯಿಕ, ಜಯಗೌಡ ಪಾಟೀಲ. ಕಲಗೌಡ ಪಾಟೀಲ, ಪಂಚನಗೌಡ ದ್ಯಾಮನಗೌಡ, ರಾಜು ಮಗದುಮ್ಮ, ಸಿದ್ದಣ್ಣ ಸುಲ್ತಾನಪೂರಿ, ಚಂದ್ರಶೇಖರ ಗಂಗನ್ನವರ ಇತರರಿದ್ದರು.
 

click me!