ಮೀಸಲಾತಿ ದಕ್ಕುವವರೆಗೂ ಹೋರಾಟ ನಿಲ್ಲುವುದಿಲ್ಲ: ಜಯಮೃತ್ಯುಂಜಯ ಶ್ರೀ

By Kannadaprabha News  |  First Published Jan 20, 2021, 9:01 AM IST

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಪಾದಯಾತ್ರೆಯ ಸ್ವಾಗತ| ಪಂಚಮಸಾಲಿ ಸ್ವಾಮೀಜಿಗಳಿಗೆ ಹೂ ಮಳೆ| ಪಂಚಮಸಾಲಿ ಸಮಾಜದ ಹೋರಾಟ ನ್ಯಾಯಯುತವಾಗಿದ್ದು, ಇದಕ್ಕೆ ಸರ್ಕಾರ ಸ್ಪಂದನೆ ನೀಡುತ್ತದೆ: ಶಾಸಕ ಪರಣ್ಣ ಮುನವಳ್ಳಿ| 


ಕೊಪ್ಪಳ(ಜ.20): ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ನಡೆಯುತ್ತಿರುವ ಹೋರಾಟ ನಿಲ್ಲುವುದಿಲ್ಲ. ಅದು ನ್ಯಾಯ ಸಿಗುವವರೆಗೂ ಹೀಗೆ ನಡೆಯುತ್ತದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದ್ದಾರೆ.

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಪಾದಯಾತ್ರೆಯ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು. ಯಾರು ಏನೇ ಹೇಳಲಿ, ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು. ಪಂಚಮಸಾಲಿ ಸಮಾಜಕ್ಕೆ 2ಎ ಸೌಲಭ್ಯ ಬೇಕು ಎಂದು ಆರಂಭಿಸಿರುವ ಈ ಹೋರಾಟಕ್ಕೆ ಇಷ್ಟುದೊಡ್ಡ ಪ್ರಮಾಣದ ಬೆಂಬಲ ವ್ಯಕ್ತವಾಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ದಾರಿಯುದ್ದಕ್ಕೂ ಎಲ್ಲರೂ ಬೆಂಬಲಿಸಿ, ಶುಭ ಹಾರೈಸುತ್ತಿದ್ದಾರೆ. ಶಾಸಕರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದರು.

Tap to resize

Latest Videos

ಈಗಾಗಲೇ ಸರ್ಕಾರಕ್ಕೂ ಮನವರಿಕೆಯಾಗಿದೆ. ಸಮಾಜದ ಮುಖಂಡರು ಈಗಾಗಲೇ ಸರ್ಕಾರದ ಪ್ರತಿನಿಧಿಗಳೊಂದಿಗೆ, ನಾಯಕರೊಂದಿಗೆ ಮಾತನಾಡಿ, ವಿಷಯವನ್ನು ಸಮರ್ಥವಾಗಿ ಮಂಡನೆ ಮಾಡಿದ್ದಾರೆ. ಅವರಿಂದಲೂ ಸಕಾರಾತ್ಮಕವಾಗಿಯೇ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಂತ ನಾವು ಸುಮ್ಮನೇ ಕೂರುವಂತಿಲ್ಲ. ಹೋರಾಟ ಯಶಸ್ವಿಯಾಗುವುದು ನಾವು ಅಂದುಕೊಂಡಿರುವ 2ಎ ಸೌಲಭ್ಯ ಸಿಕ್ಕ ಮೇಲೆ. ಅಲ್ಲಿ ವರೆಗೂ ಅವಿರತವಾಗಿ ಶ್ರಮಿಸೋಣ ಎಂದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಅತ್ಯುತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ದಾರಿಯುದ್ದಕ್ಕೂ ದೊರೆಯುತ್ತಿರುವ ಸ್ವಾಗತ, ಹೂಮಳೆಯೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.

'ಸಿಎಂ ಯಡಿಯೂರಪ್ಪ ವಚನಭ್ರಷ್ಟ ಆಗ್ತಾರೆ ಅನ್ನೋ ಅನುಮಾನ ಇದೆ'

ಕೃಷಿ ಪ್ರಧಾನ ಸಮಾಜವಾಗಿರುವ ಪಂಚಮಸಾಲಿ ಸಮಾಜಕ್ಕೆ 2ಎ ಸೌಲಭ್ಯ ದೊರೆಯುವ ಮೂಲಕ ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ ಅವಕಾಶಗಳು ಲಭಿಸುತ್ತವೆ. ಹೀಗಾಗಿ, ಇದು ಎಂದೋ ಆಗಬೇಕಾಗಿತ್ತು. ಆದರೆ, ಈಗಲಾದರೂ ಹೋರಾಟ ಪ್ರಾರಂಭವಾಗಿರುವುದು ಸಂತೋಷದ ಸಂಗತಿ. ಅಗತ್ಯಬಿದ್ದರೆ ಹೋರಾಟವನ್ನು ಇನ್ನಷ್ಟು ವ್ರಗೊಳಿಸೋಣ ಎಂದರು.

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಪಂಚಮಸಾಲಿ ಸಮಾಜದ ಹೋರಾಟ ನ್ಯಾಯಯುತವಾಗಿದ್ದು, ಇದಕ್ಕೆ ಸರ್ಕಾರ ಸ್ಪಂದನೆ ನೀಡುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಕೊಪ್ಪಳ ಜಿಲ್ಲಾಧ್ಯಕ್ಷ ಬಸವಲಿಂಗಪ್ಪ ಭೂತೆ, ಬಿ. ವಿರೂಪಾಕ್ಷಿ, ಕೊಪ್ಪಳ ತಾಲೂಕು ಅಧ್ಯಕ್ಷ ಕರಿಯಪ್ಪ ಮೇಟಿ, ಕಳಕನಗೌಡ ಪಾಟೀಲ್‌, ಅಮರೇಶ ಕರಡಿ, ಗವಿಸಿದ್ದಪ್ಪ ಕರಡಿ, ರಾಮಣ್ಣ ಚೌಡ್ಕಿ ಮೊದಲಾದವರು ಇದ್ದರು.
 

click me!