ದಾಂಡೇಲಿಯಲ್ಲಿ ಹರಡುತ್ತಿರುವ ಕಾಮಾಲೆ ರೋಗ

By Kannadaprabha News  |  First Published Jun 25, 2020, 9:03 AM IST

ಕೊರೋನಾ ಸೋಂಕಿನಿಂದ ಭಯದಲ್ಲಿದ್ದ ದಾಂಡೇಲಿ ಜನತೆಗೆ ಇದೀಗ ಕಾಮಾಲೆ ರೋಗದಿಂದ ತೊಂದರೆ ಅನುಭವಿಸುವ ಪರಿಸ್ಥಿತಿ ಬಂದಿದೆ ಸುಮಾರು 150 ಜನರಲ್ಲಿ ಹಳದಿ ಕಾಮಾಲೆ ರೋಗ ಪತ್ತೆಯಾಗಿದೆ.


ಉತ್ತರ ಕನ್ನಡ(ಜೂ.25): ಕೊರೋನಾ ಸೋಂಕಿನಿಂದ ಭಯದಲ್ಲಿದ್ದ ದಾಂಡೇಲಿ ಜನತೆಗೆ ಇದೀಗ ಕಾಮಾಲೆ ರೋಗದಿಂದ ತೊಂದರೆ ಅನುಭವಿಸುವ ಪರಿಸ್ಥಿತಿ ಬಂದಿದೆ ಸುಮಾರು 150 ಜನರಲ್ಲಿ ಹಳದಿ ಕಾಮಾಲೆ ರೋಗ ಪತ್ತೆಯಾಗಿದೆ.

ಕಳೆದ ಕೆಲವು ದಿನಗಳಿಂದ ನಗರದಲ್ಲಿ ಹಳದಿ ಕಾಮಾಲೆ ರೋಗದ ಪ್ರಕರಣಗಳು ಹೆಚ್ಚುತ್ತಿವೆ. ನಗರದ ಆಸ್ಪತ್ರೆಗಳಲ್ಲಿ ಹಳದಿ ಕಾಮಾಲೆ ಚಿಕಿತ್ಸೆ ಪಡೆಯಲು ಬರುತ್ತಿವವರ ಸಂಖ್ಯೆ ಹೆಚ್ಚಾಗಿದೆ.

Tap to resize

Latest Videos

 

ಕಾಮಾಲೆ ರೋಗ ಚಿಕಿತ್ಸೆಗೆ ಬರುತ್ತಿರುವವರು ಹೆಚ್ಚಾಗಿದ್ದರಿಂದ ಕೆಲವು ಆಸ್ಪತ್ರೆಗಳಲ್ಲಿ ತಡ ರಾತ್ರಿಯವರೆಗೆ ಚಿಕಿತ್ಸೆ ನೀಡುತ್ತಿರುವುದರ ಬಗ್ಗೆ ಮಾಹಿತಿ ಇದೆ. ಈ ರೋಗ ಕುಡಿಯುವ ನೀರಿನಿಂದಾಗಿ ಬಂದಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಮಳೆಗಾಲ ದಿನಗಳಾದ್ದರಿಂದ ಕಾಡಿನಿಂದ ಹರಿದು ಬರುವ ರಾಡಿ ನೀರು ಹಾಗೂ ನಗರದ ತ್ಯಾಜ್ಯ ನೀರು ಸೇರುವುದರಿಂದ ಈ ರೋಗ ಬಂದಿರುವ ಸಾಧ್ಯತೆ ಇದೆ.

 

ನಗರದಲ್ಲಿ ಯುಜಿಡಿ ಕಾಮಗಾರಿ ನಡೆಯುತ್ತಿದ್ದು, ಯುಜಿಡಿ ಕೊಳವೆಗಳನ್ನು ಹಾಕಲು ರಸ್ತೆ ಮಧ್ಯೆ ಭಾಗದಲ್ಲಿ ಅಗೆಯುವ ಸಂದರ್ಭದಲ್ಲಿ ಅಲ್ಲಲ್ಲಿ ಕುಡಿಯುವ ನೀರು ಸರಬರಾಜು ಕೊಳವೆಗಳು ಒಡೆದು ಅದರಲ್ಲಿ ತ್ಯಾಜ್ಯ ನೀರು ಸೇರಿರುವುದರಿಂದಲೂ ರೋಗ ಬರಲು ಸಾಧ್ಯತೆಗಳಿವೆ. ಆದರೆ ಯುಜಿಡಿ ಕಾಮಗಾರಿ ಸಂದರ್ಭದಲ್ಲಿ ಒಡೆಯುವ ನೀರು ಸರಬರಾಜು ಪೈಪ್‌ಗಳನ್ನು ತಕ್ಷಣದಲ್ಲಿಯೇ ದುರಸ್ತಿ ಮಾಡುತ್ತಿದ್ದಾರೆ. ಒಡೆದ ಕೊಳೆವೆಗಳಲ್ಲಿ ತ್ಯಾಜ್ಯ ನೀರು ಸೇರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಒಟ್ಟಿನಲ್ಲಿ ಹಳದಿ ಕಾಮಾಲೆ ಭಯದ ವಾತಾವರಣವನ್ನು ಸೃಷ್ಟಿಸಿದ್ದು ಆರೋಗ್ಯ ಇಲಾಖೆ ಕಾಮಾಲೆ ರೋಗವನ್ನು ತಡೆಯಲು ಕ್ರಮ ಕೈಗೊಳ್ಳುತ್ತದೆ.

ಕುದಿಸಿ ಆರಿದ ನೀರು ಕುಡಿಯಿರಿ:

ಕಾಮಾಲೆ ರೋಗ ಹರಡುತ್ತಿರುವದರಿಂದ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದ ಪ್ರತಿಯೊಬ್ಬರೂ ಕುಡಿಯುವ ನೀರನ್ನು ಕುದಿಸಿ ಆರಿಸಿ ಕುಡಿಯಬೇಕು. ತಮ್ಮ ಅಕ್ಕಪಕ್ಕದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರಮೇಶ ಕದಂ ಜನರಲ್ಲಿ ವಿನಂತಿಸಿದ್ದಾರೆ.

ಹಳದಿ ಕಾಮಾಲೆ ರೋಗ ಹರಡುತ್ತಿರುವ ಮಾಹಿತಿ ಬಂದ ತಕ್ಷಣದಿಂದಲೇ ಮನೆಮನೆ ಸರ್ವೆ ಕಾರ್ಯ ಆರಂಭಿಸಿದ್ದು, ಈಗಾಗಲೇ ಸುಮಾರು 1100 ಮನೆಗಳನ್ನು ಸರ್ವೆ ಮಾಡಿದ್ದೇವೆ. ಅವುಗಳಲ್ಲಿ 34 ಹಳದಿ ಕಾಮಾಲೆ ಪ್ರಕರಣಗಳು ಪತ್ತೆಯಾಗಿವೆ. ಈ ರೋಗದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಕುಡಿಯುವ ನೀರಿನ್ನು ಪರಿಕ್ಷೆಗಾಗಿ ಕಳುಹಿಸಿಕೊಡಲಾಗಿದೆ ಎಂದು ಡಾ. ರಮೇಶ ಕದಂ ತಿಳಿಸಿದ್ದಾರೆ.

 

ದಾಂಡೇಲಿ ಜನತೆ ಕಾಮಾಲೆ ರೋಗದ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲಿ ಕಾಮಾಲೆ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು. ಕೊಳಚೆ ನಿಲ್ಲದಂತೆ ನೋಡಿಕೊಳ್ಳಬೇಕಾಗಿದೆ ಎಂದು ಕರ್ನಾಟಕ ಪ್ರಜಾ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷರು ವಿನಾಯಕ ನಾಯ್ಕ ತಿಳಿಸಿದ್ದಾರೆ.

click me!