ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಬಸ್‌ ಸೌಲಭ್ಯ

By Kannadaprabha NewsFirst Published Jun 25, 2020, 8:55 AM IST
Highlights

ಶಿವಮೊಗ್ಗ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗುವ ಖಾಸಗಿ ಅಭ್ಯರ್ಥಿಗಳಿಗೆ ವಿವಿಧ ತಾಲೂಕುಗಳಿಂದ ಸಮಯಕ್ಕೆ ಸರಿಯಾಗಿ ಜಿಲ್ಲಾ ಕೇಂದ್ರಕ್ಕೆ ತಲುಪಲು ಸಾರಿಗೆ ಬಸ್‌ಗಳನ್ನು ಅಗತ್ಯ ಸಂಖ್ಯೆಯಲ್ಲಿ ಬಿಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜಿಲ್ಲಾ ಮಟ್ಟದಲ್ಲಿ ಖಾಸಗಿ ಅಭ್ಯರ್ಥಿಗಳಿಗೆ ನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾದ್ಯಮ ಪ್ರೌಢಶಾಲೆ, ರವೀಂದ್ರನಗರ ಹಾಗೂ ಮಹಾವೀರ ವಿದ್ಯಾಲಯ ಕೋಟೆರಸ್ತೆ ಇಲ್ಲಿ ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುವ ಖಾಸಗಿ ಅಭ್ಯರ್ಥಿಗಳಿಗೆ ವಿವಿಧ ತಾಲೂಕುಗಳಿಂದ ಸಮಯಕ್ಕೆ ಸರಿಯಾಗಿ ಜಿಲ್ಲಾ ಕೇಂದ್ರಕ್ಕೆ ತಲುಪಲು ಸಾರಿಗೆ ಬಸ್‌ಗಳನ್ನು ಅಗತ್ಯ ಸಂಖ್ಯೆಯಲ್ಲಿ ಬಿಡಲಾಗಿದೆ.

"

ತಾಲೂಕುವಾರು ಸಮಯ: ಭದ್ರಾವತಿಯಿಂದ ಬೆಳಗ್ಗೆ 7.45ಕ್ಕೆ ಹೊರಟು ಬೆ. 9ಕ್ಕೆ ಜಿಲ್ಲಾ ಕೇಂದ್ರಕ್ಕೆ ತಲುಪುವುದು. ಹೊಸನಗರದಿಂದ ಬೆಳಗ್ಗೆ 7ಕ್ಕೆ ಹೊರಟು ಬೆ. 9ಕ್ಕೆ ಜಿಲ್ಲಾ ಕೇಂದ್ರಕ್ಕೆ ತಲುಪುವುದು.

ಸಾಗರದಿಂದ ಬೆಳಗ್ಗೆ 7ಕ್ಕೆ ಹೊರಟು ಬೆ. 9ಕ್ಕೆ ಜಿಲ್ಲಾ ಕೇಂದ್ರಕ್ಕೆ ತಲುಪುವುದು. ಶಿಕಾರಿಪುರದಿಂದ ಬೆಳಗ್ಗೆ 7.30ಕ್ಕೆ ಹೊರಟು ಬೆ. 9ಕ್ಕೆ ಜಿಲ್ಲಾ ಕೇಂದ್ರಕ್ಕೆ ತಲುಪುವುದು. ಸೊರಬದಿಂದ ಬೆಳಗ್ಗೆ 6.30ಕ್ಕೆ ಹೊರಟು ಬೆ. 9ಕ್ಕೆ ಜಿಲ್ಲಾ ಕೇಂದ್ರಕ್ಕೆ ತಲುಪುವುದು. ತೀರ್ಥಹಳ್ಳಿಯಿಂದ ಬೆಳಗ್ಗೆ 7 ಕ್ಕೆ ಹೊರಟು ಬೆ. 9ಕ್ಕೆ ಜಿಲ್ಲಾ ಕೇಂದ್ರ ತಲುಪುವುದು ಎಂದು ಕ್ಷೇತ್ರ ಶಿಕ್ಷಣಾ​ಧಿಕಾರಿ ತಿಳಿಸಿದ್ದಾರೆ.

ತೀರ್ಥಹಳ್ಳಿ: ಉದ್ಯಮಿ ಅರುಣ್‌ರಿಂದ ಉಚಿತ ಮಾಸ್ಕ್‌ ವಿತರಣೆ

ತೀರ್ಥಹಳ್ಳಿ: ಬೆಂಗಳೂರಿನಲ್ಲಿ ಗಾರ್ಮೇಂಟ್ಸ್ ಉದ್ಯಮ ನಡೆಸುತ್ತಿರುವ ತೀರ್ಥಹಳ್ಳಿಯ ಅರುಣ್‌ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿತರಿಸಲು 4,000 ಮಾಸ್ಕ್‌ ಉಚಿತವಾಗಿ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ ಕುಮಾರ್‌ಗೆ ವಿತರಿಸಿದರು. ಬೆಂಗಳೂರಿನಲ್ಲಿ ಶಬ್ದ ಎನ್ನುವ ಸೇವಾ ಸಂಸ್ಥೆಯನ್ನು ಕಟ್ಟೆಬೆಳೆಸಿರುವ ಅರುಣ್‌ ಅವರಿಗೆ ಸಾಮಾಜಿಕ ಕಾರ್ಯಗಳನ್ನು ಮಾಡುವ ಹಂಬಲ. ’ಶಬ್ದ’ ಸಂಸ್ಥೆಯ ಮೂಲಕ ತಮ್ಮ ಇತಿಮಿತಿಯಲ್ಲಿಯೇ ಇವರು ಸೇವಾ ನಿರತರಾಗಿದ್ದಾರೆ.

ಅರುಣ್‌ ಅವರು ತಮ್ಮ ಹೆಸರಿನ ಜೊತೆಗೆ ಶಬ್ಧ ಸೇರಿಸಿಕೊಂಡು ಅರುಣ್‌ ಶಬ್ದ ಕೂಡ ಆಗಿದ್ದಾರೆ. ಅವರಿಗೆ ತಮ್ಮ ತವರೂರಿನ ಋುಣವನ್ನು ತೀರಿಸುತ್ತಿರಬೇಕೆಂಬ ಅದಮ್ಯವಾದ ಆಸೆ. ಇದಕ್ಕಾಗಿಯೇ ತಮ್ಮ ಗಾರ್ಮೇಂಟ್ಸ್ ಉದ್ಯಮದಲ್ಲಿನ ತಮ್ಮ ಕೌಶಲ್ಯ ಮತ್ತು ಅನುಭವವನ್ನು ಬಳಸಿಕೊಂಡು ನೀರಿನಲ್ಲಿ ಒಗೆದು ಮತ್ತೆ ಬಳಸಬಹುದಾದ ಉತ್ತಮ ಗುಣಮಟ್ಟದ 4,000 ಮಾಸ್ಕ್ ಗಳನ್ನು ತೀರ್ಥಹಳ್ಳಿಯ ಎಸ್‌ಎಸ್‌ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ವಿತರಿಸಲು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆನಂದಕುಮಾರ್‌ ಮಾತನಾಡಿ, ಅರುಣ್‌ ಶಬ್ದ ಅವರ ಸೇವಾ ಕಾರ್ಯವನ್ನು ಶ್ಲಾಘಿಸಿದರಲ್ಲದೆ ,  SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ತಲಾ ಎರಡು ಮಾಸ್ಕ್ ಗಳನ್ನು ವಿತರಿಸಬಹುದಾಗಿದೆ ಎಂದು ಹೇಳಿ ಅವರಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ತಹಸೀಲ್ದಾರ್‌ ಡಾ.ಶ್ರೀಪಾದ್‌, ಜಿಪಂ ಸದಸ್ಯೆ ಶರಧಿ ಪೂರ್ಣೇಶ್‌ , ತಾಪಂ ಸದಸ್ಯರಾದ ಚಂದವಳ್ಳಿ ಸೋಮಶೇಖರ್‌, ಪ್ರಶಾಂತ್‌ ಕುಕ್ಕೆ, ನೊಣಬೂರು ಗ್ರಾ.ಪಂ. ಅಧ್ಯಕ್ಷ ಧರಣೀಶ್‌ ಅರಳೀಸರ ಮುಂತಾದವರಿದ್ದರು.

click me!