ಜೂನ್ 1ರಿಂದ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ರೈಲು ಸಂಚಾರ ಆರಂಭ

By Suvarna NewsFirst Published May 23, 2020, 4:40 PM IST
Highlights

ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ  ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ರೈಲು ಸಂಚಾರ ಆರಂಭವಾಗಲಿದೆ. ಈ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ, (ಮೇ. 23): ಶಿವಮೊಗ್ಗ-ಬೆಂಗಳೂರು ನಡುವಣ ಜನಶತಾಬ್ದಿ ರೈಲು ಸಂಚಾರ ಜೂನ್ 1ರಿಂದ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಶುಕ್ರವಾರ ಶಿವಮೊಗ್ಗ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಧ್ಯ ಕೇವಲ ಒಂದು ರೈಲು ಮಾತ್ರ ಸೇವೆ ಆರಂಭಿಸಲಿದೆ. ಜೂನ್ 1ರಂದು ಸಂಜೆ 5.30ಕ್ಕೆ ಬೆಂಗಳೂರಿನಿಂದ ಹಾಗೂ ಜೂನ್ 2ರಂದು ಬೆಳಿಗ್ಗೆ 5.30ಕ್ಕೆ ಶಿವಮೊಗ್ಗದಿಂದ ರೈಲು ಹೊರಡಲಿದೆ. ಕೇವಲ ಆನ್‍ಲೈನ್‍ನಲ್ಲಿ ಮಾತ್ರ ಟಿಕೆಟ್ ಕಾಯ್ದಿರಿಸುವಿಕೆಗೆ ಅವಕಾಶವಿದೆ. ಪ್ರತಿ ಬೋಗಿಯಲ್ಲಿ ಕೇವಲ 54ಮಂದಿಗೆ ಮಾತ್ರ ಪ್ರಯಾಣಕ್ಕೆ ಅವಕಾಶವಿದ್ದು, ಒಟ್ಟು 648 ಸೀಟುಗಳನ್ನು ಮಾತ್ರ ಕಾಯ್ದಿರಿಸಲಾಗುತ್ತಿದೆ. ಹವಾನಿಯಂತ್ರಿತ ಬೋಗಿಯಲ್ಲಿ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ ಎಂದು ಮಾಹಿತಿ ನೀಡಿದರು.

ಬೆಂಗಳೂರು-ಶಿವಮೊಗ್ಗ ಜನಶತಾಬ್ಧಿ ರೈಲು ಟಿಕೆಟ್ ದರ

ರೈಲಿನ ನಿಲುಗಡೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಶಿವಮೊಗ್ಗ-ಭದ್ರಾವತಿ-ಕಡೂರು-ತುಮಕೂರು-ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿದೆ. ರೈಲು ಹತ್ತುವುದಕ್ಕಿಂತ ಪೂರ್ವದಲ್ಲಿ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುವುದು. ರೋಗ ಲಕ್ಷಣವಿರುವವರಿಗೆ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ. ಜಿಲ್ಲಾಡಳಿತದ ವತಿಯಿಂದ ಸಹ ಸ್ಕ್ರೀನಿಂಗ್‍ಗೆ ವ್ಯವಸ್ಥೆ ಮಾಡಲಾಗುವುದು ಎಂದರು.

ಅನಿವಾರ್ಯ ಇದ್ದರೆ ಮಾತ್ರ ಪಯಣಿಸಿ 
ಕೋವಿಡ್ ಸಂದರ್ಭದಲ್ಲಿ ದೂರದ ಪ್ರಯಾಣ ಒಳ್ಳೆಯದಲ್ಲ. ರೈಲಿನಲ್ಲಿ ಅನಿವಾರ್ಯವಾದರೆ ಮಾತ್ರ ಪ್ರಯಾಣಿಸುವುದು ಉತ್ತಮ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
 

click me!