
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು [ಸೆ.18]: ಬಿಬಿಎಂಪಿಯ ಶಾಲಾ-ಕಾಲೇಜುಗಳನ್ನು ಹೈಟೆಕ್‌ಗೊಳಿಸುವ ಉದ್ದೇಶದೊಂದಿಗೆ ಘೋಷಿಸಲಾಗಿದ್ದ ರೋಶನಿ ಯೋಜನೆಗೆ ಗರ ಬಡಿದಿದೆ! ಅಷ್ಟೇ ಅಲ್ಲ, ಈ ಯೋಜನೆಗಾಗಿ ಖಾಸಗಿ ಸಂಸ್ಥೆಯೊಂದು ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಅಡಿ ನೀಡಿದೆ ಎಂದು ಹೇಳಿಕೊಳ್ಳುತ್ತಿರುವ 17.86 ಕೋಟಿ ರು. ಮೊತ್ತದ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಶೈಕ್ಷಣಿಕ ಸಾಧನಗಳು ಏನಾದವು ಎಂಬುದು ಇದೀಗ ಚಿದಂಬರ ರಹಸ್ಯವಾಗಿದೆ.
"
ಬಿಬಿಎಂಪಿಯು ಮೈಕ್ರೋಸಾಫ್ಟ್ ಹಾಗೂ ಟೆಕ್ ಅವಂತ್-ಗಾರ್ಡ್ ಸಂಸ್ಥೆಯ ಸಹಯೋಗದೊಂದಿಗೆ ಮಹತ್ವಾಕಾಂಕ್ಷೀಯ ರೋಶನಿ ಯೋಜನೆಯನ್ನು 2018ರ ಸೆಪ್ಟಂಬರ್‌ನಲ್ಲಿ ಘೋಷಿಸಿತ್ತು. ವಿಶ್ವ ದರ್ಜೆಯ ಶೈಕ್ಷಣಿಕ ಸಾಧನಗಳ ಬಳಕೆಗಳನ್ನೊಳಗೊಂಡ ಉಪಗ್ರಹ ಆಧಾರಿತ ಅತ್ಯಾಧುನಿಕ ಶಿಕ್ಷಣ ವ್ಯವಸ್ಥೆಯನ್ನು ಬಿಬಿಎಂಪಿ ಶಾಲೆ-ಕಾಲೇಜುಗಳಲ್ಲಿ ಅಳವಡಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಆದರೆ, ಈ ಯೋಜನೆಗೆ ಚಾಲನೆ ದೊರೆತು ಒಂದು ವರ್ಷವಾಗುತ್ತಾ ಬಂದರೂ ಪುಲಕೇಶಿನಗರದ ಕ್ಲೀವ್ ಲ್ಯಾಂಡ್ ಟೌನ್ ಶಾಲೆಯಲ್ಲಿ ನಾಲ್ಕು ಕುರ್ಚಿ ಟೇಬಲ್ ಹಾಗೂ ಒಂದು ಎಲ್‌ಇಡಿ ಟಿವಿ, ಗ್ರೀನ್ ಬೋರ್ಡ್ ಅಳವಡಿಸಿದ್ದು ಬಿಟ್ಟರೆ ಮತ್ಯಾವ ಕೆಲಸ ನಡೆದಿಲ್ಲ ಎಂದು ಬಿಬಿಎಂಪಿ ಅಧಿಕೃತವಾಗಿ ಹೇಳುತ್ತಿದೆ.
ಬಿಬಿಎಂಪಿಯೊಂದಿಗೆ ಸಹಭಾಗಿತ್ವ ಹೊಂದಿದ್ದ ಮೈಕ್ರೋಸಾಫ್ಟ್ ಹಾಗೂ ಟೆಕ್ ಅವಂತ-ಗಾರ್ಡ್ ಸಂಸ್ಥೆಗಳು ತಾವು 17.86 ಕೋಟಿ ರು. ಮೌಲ್ಯದ ಶಿಕ್ಷಣ ಸಾಮಾಗ್ರಿಗಳನ್ನು ಬಿಬಿಎಂಪಿಗೆ ಒದಗಿಸಿರುವುದಾಗಿ ಅಧಿಕೃತವಾಗಿ ತಿಳಿಸಿದೆ. 2019ರಂದು ಜ.4ರಂದು ಮಲ್ಲೇಶ್ವರದ ಬಿಬಿಎಂಪಿಯ ಐಪಿಪಿ ಕಚೇರಿಯಲ್ಲಿ ಈ ಹಿಂದಿನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಡಾ.ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ 16.29 ಕೋಟಿ ರು. ಮೌಲ್ಯದ 154 ಮೈಕ್ರೋ ಸಾಫ್ಟ್ ಕಿಟ್ ಅನ್ನು ಹಸ್ತಾಂತರಿಸಿರುವುದಾಗಿ ಹೇಳಿಕೊಳ್ಳುತ್ತಿದೆ.
ಈ ಬಗ್ಗೆ ಮಾತನಾಡಿದ ಮೈಕ್ರೋ ಸಾಫ್ಟ್ ಕಂಪನಿಯಿಂದ ರೋಶನಿ ಯೋಜನೆ ನಿರ್ವಾಹಕರಾಗಿದ್ದ ಅಲಿ ಸೇಠ್ ಅವರು, ಒಂದು ವರ್ಷದ ಹಿಂದೆಯೇ ಈ ಎಲ್ಲಾ ಶೈಕ್ಷಣಿಕ ಸಾಮಗ್ರಿಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳುತ್ತಾರೆ.
ಆದರೆ, ಇದನ್ನು ಸ್ಪಷ್ಟವಾಗಿ ನಿರಾಕರಿಸುವ ಬಿಬಿಎಂಪಿ ವಿಶೇಷ ಆಯುಕ್ತ ಎಸ್.ಜಿ.ರವೀಂದ್ರ ಅವರು, ಬಿಬಿಎಂಪಿ ಶಾಲಾ-ಕಾಲೇಜುಗಳಿಗೆ ಅಷ್ಟೊಂದು ಬೆಲೆಬಾಳುವ ಯಾವುದೇ ಸಾಧನ ವಿತರಣೆ ಆಗಿಲ್ಲ. ಯೋಜನೆಗೆ ಅಷ್ಟೊಂದು ಪ್ರಮಾಣದ ಹಣ ವೆಚ್ಚ ಮಾಡಿರುವುದರ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ತಿಳಿಸಿದಾರೆ.
ಬಿಬಿಎಂಪಿಗೆ ಹಸ್ತಾಂತರಿಸಲಾಗಿದೆ ಎಂದು ಮೈಕ್ರೋ ಸಾಫ್ಟ್ ಮತ್ತು ಟೆಕ್ ಅವಂತ-ಗಾರ್ಡ್ ಸಂಸ್ಥೆ ಹೇಳಿಕೊಳ್ಳುವ 154 ಮೈಕ್ರೋ ಸಾಫ್ಟ್ ಕಿಟ್ ಎಲ್ಲಿದೆ, ಏನಾಗಿದೆ? ಎಂಬ ಪ್ರಶ್ನೆಗೆ ಯಾರಿಂದಲೂ ಉತ್ತರ ಸಿಗುತ್ತಿಲ್ಲ.
ಈ ಬಗ್ಗೆ ‘ಕನ್ನಡಪ್ರಭ’ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರನ್ನು ಸಂಪರ್ಕಿಸಿ ಈ ಪ್ರಶ್ನೆಗಳಿಗೆ ಉತ್ತರ ಪಡೆಯಲು ಕಳೆದ ಐದು ದಿನಗಳಿಂದ ಪ್ರಯತ್ನಿಸಿದೆ. ಪ್ರತಿ ಬಾರಿಯೂ ಆಯುಕ್ತರು, ‘ಕಡತಗಳನ್ನು ಈಗಷ್ಟೇ ತರಿಸಿಕೊಂಡಿದ್ದೇನೆ. ಅವುಗಳನ್ನು ಪರಿಶೀಲಿಸಿ ಪ್ರತಿಕ್ರಿಯಿಸುವೆ’ ಎಂದಷ್ಟೇ ಉತ್ತರಿಸಿದರು.
ಇನ್ನು ಬಿಬಿಎಂಪಿ ಅಧಿಕಾರಿಗಳು ರೋಶನೆ ಯೋಜನೆ ಉದ್ಘಾಟನೆ ಸಮಾರಂಭದಿಂದ ಯೋಜನೆ ಕುರಿತು ನಡೆದ ಸಭೆಗಳಿಗೆ ಪಾಲಿಕೆ ಶಾಲಾ ಶಿಕ್ಷಕರ ತರಬೇತಿಗೆ ಎಲ್ಲದಕ್ಕೂ ಬಿಬಿಎಂಪಿಯೇ ವೆಚ್ಚ ಮಾಡಿದೆ ಎನ್ನುತ್ತಾರೆ. ಆದರೆ, ಮೈಕ್ರೋ ಸಾಫ್ಟ್ ಮತ್ತು ಟೆಕ್ ಅವಂತ್- ಗಾರ್ಡ್ ಸಂಸ್ಥೆಯು ಯೋಜನೆಗೆ ತಾನೇ ಎಲ್ಲ ವೆಚ್ಚ ಭರಿಸಿರುವುದಾಗಿ ತಿಳಿಸಿ ಪಾಲಿಕೆಗೆ ಲೆಕ್ಕಕೊಟ್ಟಿದೆ. ಆ ಲೆಕ್ಕ ಪತ್ರದಲ್ಲಿರುವ ವಿವರಗಳು ಸತ್ಯಾಂಶದಿಂದ ಕೂಡಿದೆಯೇ ಅಥವಾ ಇಲ್ಲವೇ ಎಂಬುದಕ್ಕೆ ಉತ್ತರ ದೊರೆಯುತ್ತಿಲ್ಲ. ಇದೆಲ್ಲದರ ನಡುವೆ ರೋಶನಿ ಯೋಜನೆ ಬಹುತೇಕ ಸ್ಥಗಿತಗೊಂಡಿದೆ.
ಕಿಟ್‌ನಲ್ಲಿ ಅರಮನೆ ಕಟ್ಟುವುದಕ್ಕೆ ಸಾಧ್ಯವಾ?: ರವೀಂದ್ರ
ಮೈಕ್ರೋ ಸಾಫ್ಟ್ ಮತ್ತು ಟೆಕ್ ಅವಂತ್-ಗಾರ್ಡ್ ಸಂಸ್ಥೆ ಅಂದಿನ ಉಪಮುಖ್ಯಮಂತ್ರಿಗೆ ಟೆಕ್ ಅವಂತ-ಗಾರ್ಡ್ ಸಂಸ್ಥೆಯು 154 ಮೈಕ್ರೋ ಸಾಫ್ಟ್ ಕಿಟ್‌ಗಳನ್ನು ಹಸ್ತಾಂತರ ಮಾಡಿದೆ ಎಂದು ಹೇಳಿಕೊಂಡಿದೆ ನಿಜವೇ ಎಂಬ ಪ್ರಶ್ನೆಗೆ ಬಿಬಿಎಂಪಿ ಶಿಕ್ಷಣ ವಿಭಾಗ ವಿಶೇಷ ಆಯುಕ್ತ ಎಸ್.ಜಿ.ರವೀಂದ್ರ ಅವರು ‘ಕಿಟ್ ಹಸ್ತಾಂತರವಾಗಿದ್ದರೆ ಉಪ ಮುಖ್ಯಮಂತ್ರಿಗಳು ಮನೆಗೆ ತೆಗೆದುಕೊಂಡು ಹೋಗುತ್ತಾರಾ? ಅಥವಾ ಆ ಕಿಟ್‌ನಲ್ಲಿ ನಾವೇನು ಅರಮನೆ ಕಟ್ಟುವುದಕ್ಕೆ ಸಾಧ್ಯವೇ? ಕಿಟ್ ಹಸ್ತಾಂತರ ಮಾಡಲಾಗಿದೆ ಎಂದು ಟೆಕ್ ಅವಂತ- ಗಾರ್ಡ್ ಸಂಸ್ಥೆ ಹೇಳುವುದಾರೆ ನಂತರ ಆ ಕಿಟ್ ಎಲ್ಲಿ ಹೋಗಿವೆ ಎಂಬುದನ್ನು ಅವರನ್ನೇ ಕೇಳಿ’ ಎಂದು ಪ್ರತಿಕ್ರಿಯೆ ನೀಡುತ್ತಾರೆ.
ಮೈಕ್ರೋ ಸಾಫ್ಟ್ ಹಾಗೂ ಟೆಕ್ ಅವಂತ- ಗಾರ್ಡ್ ಸಂಸ್ಥೆ ರೋಶನಿ ಯೋಜನೆ 17 ಕೋಟಿ ರು. ವೆಚ್ಚ ಮಾಡಿರುವ ಬಗ್ಗೆ ಬಿಬಿಎಂಪಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತರಿಂದ ಯಾವ ಸ್ಕೂಲ್‌ಗೆ ಏನು ಸೌಲಭ್ಯ ಒದಗಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುವೆ.
-ಗಂಗಾಂಬಿಕೆ, ಬಿಬಿಎಂಪಿ ಮೇಯರ್
ರೋಶನಿ ಯೋಜನೆಯಡಿಯಲ್ಲಿ ಗಾಂಧಿನಗರದ ಫ್ರೌಡ ಶಾಲೆಯನ್ನು ಸ್ಮಾರ್ಟ್ ಸ್ಕೂಲ್ ಮಾಡುವುದಾಗಿ ಯೋಜನೆ ಆರಂಭದಲ್ಲಿ ಹೇಳಿದರು. ಪಾಲಿಕೆ ಸಭೆಯಲ್ಲಿ ಯೋಜನೆಯ ಬಗ್ಗೆ ವಿವರ ನೀಡಿದೆ. ಆದರೆ, ಮೈಕ್ರೋಸಾಫ್ಟ್ ಮತ್ತು ಟೆಕ್ ಅವಂತ್- ಗಾರ್ಡ್ ಸಂಸ್ಥೆಗಳ ಪ್ರತಿನಿಧಿಗಳು ಅಂಗೈಯಲ್ಲಿ ಆಕಾಶ ತೋರಿಸಿದ್ದು ಬಿಟ್ಟರೆ, ಈವರೆಗೆ ಯಾವುದೇ ಕೆಲಸ ಮಾಡಿಲ್ಲ. ಹಾಗಾಗಿ, ಪಾಲಿಕೆಯ ಅನುದಾನದಲ್ಲಿ ಗಾಂಧಿನಗರದ ಶಾಲೆ ಉನ್ನತೀಕರಿಸುವುದಕ್ಕೆ ಮುಂದಾಗಿದ್ದೇವೆ.
-ಆರ್.ಜೆ.ಲತಕುವರ್ ರಾಥೋಡ್, ಗಾಂಧಿನಗರ ವಾರ್ಡ್ ಸದಸ್ಯೆ.
ಮೈಕ್ರೋ ಸಾಫ್ಟ್, ಟೆಕ್ ಅವಂತ್ ಗಾರ್ಡ್ ರೋಶನಿ ಯೋಜನೆ ವೆಚ್ಚದ ವಿವರ
154 ಶಾಲೆಗಳಿಗೆ ಮೈಕ್ರೋ ಸಾಫ್ಟ್ ಕಿಟ್ ವಿತರಣೆಗೆ 16.29 ಕೋಟಿ
ರೋಶನಿ ಯೋಜನೆ ಅಧಿಕೃತ ಘೋಷಣೆ ಕಾರ್ಯಕ್ರಮ 20 ಸಾವಿರ
ರೋಶನಿ ಯೋಜನೆ ಸಿಎಂ ಉದ್ಘಾಟನೆ ಸಮಾರಂಭಕ್ಕೆ 62 ಸಾವಿರ
ಬಿಬಿಎಂಪಿ ಶಾಲಾ ಶಿಕ್ಷಕರ ಅಡಿಟ್‌ಗೆ 31.33 ಲಕ್ಷ
ಪಾಲಿಕೆ ಶಿಕ್ಷಕರ ಮೂರು ತರಬೇತಿಗೆ 86 ಸಾವಿರ
ಕಬ್ಬನ್ ಪಾರ್ಕ್ನಲ್ಲಿ ಮಕ್ಕಳ ಹಬ್ಬಕ್ಕೆ 62 ಸಾವಿರ
ಪಾಲಿಕೆ ಸದಸ್ಯೆ ಆರ್.ಜೆ.ಲತಕುವರ್ ರಾಥೋಡ್ ಪಾಲಿಕೆ ಸಭೆಯಲ್ಲಿ ಯೋಜನೆ ಬಗ್ಗೆ ವಿವರಣೆಗೆ 7,300
ಡಿಡಿ ರೋಶನಿ ಉದ್ಘಾಟನೆ 66.11 ಲಕ್ಷ
ಪಿಯು, ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ 1.03 ಲಕ್ಷ
125 ಬಿಬಿಎಂಪಿ ಶಿಕ್ಷಕರಿಗೆ ಮೈಕ್ರೋ ಸಾಫ್ಟ್ ಕ್ಲಾಸ್ ರೂಮ್ ಬೋಧನಾ ತರಬೇತಿ 50 ಸಾವಿರ
ಬಿಬಿಎಂಪಿ 154 ಐಟಿ ಸಮೀಕ್ಷೆ 7.70 ಲಕ್ಷ
ಕ್ಲೀವ್ ಲ್ಯಾಂಡ್ ಶಾಲೆಯಲ್ಲಿ ಗ್ರೀನ್ ಬೋರ್ಡ್ ಆಳವಡಿಕೆ 2.42 ಲಕ್ಷ
ರೋಶನಿ ಆರೋಗ್ಯಯೋಜನೆ 68 ಸಾವಿರ
ರೋಶನಿ ಯೋಜನೆ ಸಿಬ್ಬಂದಿ ವೇತನ 14.11 ಲಕ್ಷ
ಯೋಜನೆಯ ಗ್ರಾಫಿಕ್ ವಿನ್ಯಾಸ 6 ಲಕ್ಷ
ಒಟ್ಟು 17.86 ಕೋಟಿ