ನೀರಿನ ಬಿಲ್‌ ಬಾಕಿ ಪಾವತಿಸಲು ‘ಜಲ ಸಮಾಧಾನ’ ಹೆಸರಲ್ಲಿ ಒಟಿಎಸ್‌: 6.21ಲಕ್ಷ ಜನಕ್ಕೆ ಲಾಭ

Kannadaprabha News   | Kannada Prabha
Published : Jan 03, 2026, 04:25 AM IST
BWSSB Water Bill

ಸಾರಾಂಶ

ಕಾವೇರಿ ನೀರಿನ ಬಿಲ್‌ ಬಾಕಿ ಮೇಲಿನ ಬಡ್ಡಿ ಮತ್ತು ದಂಡ ಮನ್ನಾದ ಯೋಜನೆಯಿಂದ ರಾಜಧಾನಿಯ 5.29 ಲಕ್ಷ ವಸತಿ ಕಟ್ಟಡ, 48 ಸಾವಿರ ವಾಣಿಜ್ಯ, ರಾಜ್ಯ- ಕೇಂದ್ರ ಸರ್ಕಾರಿ ಇಲಾಖೆಯ ಕಚೇರಿಗಳು ಸೇರಿದಂತೆ ಒಟ್ಟು 6.21 ಲಕ್ಷ ಕಾವೇರಿ ನೀರಿನ ಗ್ರಾಕರಿಗೆ 299 ಕೋಟಿ ರು. ವಿನಾಯಿತಿ ದೊರೆಯಲಿದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು : ಕಾವೇರಿ ನೀರಿನ ಬಿಲ್‌ ಬಾಕಿ ಮೇಲಿನ ಬಡ್ಡಿ ಮತ್ತು ದಂಡ ಮನ್ನಾದ ಯೋಜನೆಯಿಂದ ರಾಜಧಾನಿಯ 5.29 ಲಕ್ಷ ವಸತಿ ಕಟ್ಟಡ, 48 ಸಾವಿರ ವಾಣಿಜ್ಯ, ರಾಜ್ಯ- ಕೇಂದ್ರ ಸರ್ಕಾರಿ ಇಲಾಖೆಯ ಕಚೇರಿಗಳು ಸೇರಿದಂತೆ ಒಟ್ಟು 6.21 ಲಕ್ಷ ಕಾವೇರಿ ನೀರಿನ ಗ್ರಾಕರಿಗೆ 299 ಕೋಟಿ ರು. ವಿನಾಯಿತಿ ದೊರೆಯಲಿದೆ.

ರಾಜ್ಯ ಸರ್ಕಾರವು, ಜಿಬಿಎ ಆಸ್ತಿ ತೆರಿಗೆ ಪಾವತಿದಾರರಿಗೆ ನೀಡಿದ ಮಾದರಿಯಲ್ಲಿ ಬೆಂಗಳೂರು ಜಲಮಂಡಳಿಯ ಗ್ರಾಹಕರಿಗೂ ಒನ್-ಟೈಮ್ ಸೆಟ್ಲ್‌ಮೆಂಟ್‌ (ಒಟಿಎಸ್‌) ಯೋಜನೆ ಜಾರಿಗೊಳಿಸಲು ಈಗಾಗಲೇ ಸಂಪುಟ ಸಭೆಯಲ್ಲಿಯೂ ಅನುಮೋದನೆ ಲಭ್ಯವಾಗಿದೆ. ಹೀಗಾಗಿ, ಜಾರಿಗೆ ಬೆಂಗಳೂರು ಜಲ ಮಂಡಳಿ ರೂಪರೇಷೆ ಸಿದ್ಧಪಡಿಸಿಕೊಂಡಿದೆ.

ಸುಮಾರು 15 ರಿಂದ 16 ಲಕ್ಷ ಕಾವೇರಿ ನೀರಿನ ಸಂಪರ್ಕಗಳಿದ್ದು, ಈ ಪೈಕಿ 6,21,939 ಗ್ರಾಹಕರು ಹಲವು ವರ್ಷದಿಂದ ನೀರಿನ ಬಿಲ್ಲು ಪಾವತಿ ಮಾಡದೇ ಕೋಟ್ಯಂತರ ರು. ಬಾಕಿ ಉಳಿಸಿಕೊಂಡಿದ್ದಾರೆ. ಬಾಕಿ ಮೊತ್ತ ವಸೂಲಿಗೆ ಒಟಿಎಸ್‌ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯ ಲಾಭ ಪಡೆಯಬೇಕಾದರೆ, ನಿಗದಿತ ಅವಧಿಯಲ್ಲಿ ಬಾಕಿ ಮೊತ್ತವನ್ನು ಗ್ರಾಹಕರು ಸಂಪೂರ್ಣವಾಗಿ ಪಾವತಿಸಬೇಕಾಗಲಿದೆ.

ಶೀಘ್ರ ಡಿಸಿಎಂ ಚಾಲನೆ

ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರು ಒಟಿಎಸ್‌ ಲೋಕಾರ್ಪಣೆಗೆ ದಿನಾಂಕ ಮತ್ತು ಸಮಯ ನೀಡಲಿದ್ದಾರೆ. ಚಾಲನೆಯ ದಿನದಿಂದ 90 ದಿನ ಯೋಜನೆಯ ಜಾರಿಯಲ್ಲಿ ಇರಲಿದೆ. ಯೋಜನೆಗೆ ‘ಜಲ ಸಮಾಧಾನ’, ‘ಜಲ ಸಿರಿ’, ‘ಜಲ ತೃಪ್ತಿ’, ‘ಜಲ ನಿಧಿ’, ಜಲ ಸಂತೃಪ್ತಿ ಸೇರಿದಂತೆ ಮೊದಲಾದ ಹೆಸರು ಇಡಬೇಕೆಂದು ಚರ್ಚೆ ನಡೆಸಲಾಗುತ್ತಿದೆ. ಡಿ.ಕೆ.ಶಿವಕುಮಾರ್‌ ಅವರು ಸೂಚಿಸುವ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಸತಿ ಕಟ್ಟಡಗಳಿಗೆ ಹೆಚ್ಚು ಲಾಭ

ಒಟ್ಟು 6.21 ಲಕ್ಷ ಗ್ರಾಹಕರು ಬಡ್ಡಿ ಮತ್ತು ದಂಡ ಸೇರಿದಂತೆ 833.14 ಕೋಟಿ ರು. ಸುಸ್ತಿ ಉಳಿಸಿಕೊಂಡಿದ್ದಾರೆ. ಈ ಪೈಕಿ ಬಡ್ಡಿ ಮತ್ತು ದಂಡ ಮೊತ್ತ 299 ಕೋಟಿ ರು. ವಿನಾಯಿತಿ ನೀಡಿದರೆ 534.13 ಕೋಟಿ ರು. ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ.

ಈ ಪೈಕಿ 5.29 ಲಕ್ಷ ವಸತಿ ಕಟ್ಟಡಗಳಿಗೆ 144.25 ಕೋಟಿ ರು. ರಿಯಾಯಿತಿ ದೊರೆಯಲಿದೆ. ವಾಣಿಜ್ಯ ಕಟ್ಟಡಗಳಿಗೆ 60.70, ಭಾರತೀಯ ಸೇನಾ ನೆಲೆಗಳಿಗೆ 44.88, ಜಿಬಿಎ (ಬಿಬಿಎಂಪಿ) ಕಟ್ಟಡಗಳಿಗೆ 17 ಕೋಟಿ ರು. ವಿನಾಯಿತಿ ಸಿಗಲಿದೆ.

ಆನ್‌ಲೈನ್‌- ಆಫ್‌ಲೈನ್‌ ವ್ಯವಸ್ಥೆ

ಗ್ರಾಹಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕೆಂದು ಜಲಮಂಡಳಿಯು ಆನ್‌ಲೈನ್‌ ಹಾಗೂ ಆಫ್‌ಲೈನ್‌ ಎರಡು ಪ್ರಕಾರದಲ್ಲಿ ಬಾಕಿ ಬಿಲ್ಲು ಪಾವತಿಗೆ ಅವಕಾಶ ನೀಡುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ. ಅದಕ್ಕಾಗಿ ಪ್ರತ್ಯೇಕ ತಂತ್ರಾಂಶ ಮತ್ತು ಆ್ಯಪ್‌ ಅಭಿವೃದ್ಧಿ ಸಹ ಮಾಡಲಾಗುತ್ತಿದೆ.

ಮಾನದಂಡ ಸಮಿತಿ ರಚನೆ

ಸುಸ್ತಿ ಉಳಿಸಿಕೊಂಡ ಎಲ್ಲಾ 6.21 ಲಕ್ಷ ಗ್ರಾಹಕರಿಗೂ ನೋಟಿಸ್‌ ನೀಡುವುದಕ್ಕೆ ತೀರ್ಮಾನಿಸಲಾಗಿದೆ. ನೋಟಿಸ್‌ ನಾಲ್ಕು ಪುಟ ಇರಲಿದ್ದು, ಅದರಲ್ಲಿ ಹೇಗೆ ರಿಯಾಯಿತಿ ಪಡೆಯಬಹುದು. ಪಾವತಿ ಅವಕಾಶಗಳು ಏನು ಎಂಬುದರ ವಿವರಣೆ ಉಲ್ಲೇಖಿಸಲಾಗುತ್ತದೆ. ಮಾನದಂಡ ಸಿದ್ಧತೆಗೆ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಸಹ ರಚನೆ ಮಾಡಲಾಗಿದೆ.

ಕಂತಿನ ವ್ಯವಸ್ಥೆ

ಗ್ರಾಹಕರಿಗೆ ಹೊರೆ ಆಗಬಾರದು ಎಂಬ ಕಾರಣಕ್ಕೆ ಕಂತಿನ ಅವಕಾಶ ನೀಡುವುದಕ್ಕೂ ನಿರ್ಧರಿಸಲಾಗಿದೆ. ಒಟಿಎಸ್‌ ಯೋಜನೆಯ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಪಾವತಿಸಿದರೆ ಮಾತ್ರ ಬಡ್ಡಿ ಮತ್ತು ದಂಡದ ಮೊತ್ತ ಮನ್ನಾವಾಗಲಿದೆ. ಇಲ್ಲವಾದರೆ, ಬಡ್ಡಿ ಮತ್ತು ದಂಡ ಮನ್ನಾ ಆಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನೀರಿನ ಬಾಕಿ ವಿವರ

ವಿಭಾಗಸುಸ್ತಿದಾರರ ಸಂಖ್ಯೆಅಸಲುಬಡ್ಡಿ/ದಂಡಒಟ್ಟು ಮೊತ್ತ

ವಸತಿ529075228.7514.25373

ವಾಣಿಜ್ಯ48307104.0460.70167.74

ಸೇನೆ21261.5344.88106.41

ರಾಜ್ಯ ಸರ್ಕಾರ4642.872.9145.78

ಕೇಂದ್ರ ಸರ್ಕಾರ22622.892.5125.40

ಕೈಗಾರಿಕೆ14848.584.2712.85

ಬಿಬಿಎಂಪಿ4897.8817.3825.26

ಇತರೆ42,10057.5922.1079.69

ಒಟ್ಟು621939534.13299.00833.14

PREV
Read more Articles on
click me!

Recommended Stories

ಜನವರಿ 30ರ ಒಳಗೆ ಸಿಎಂ ಖುರ್ಚಿ ಯಾರ ಪಾಲಾಗಲಿದೆ? ಖ್ಯಾತ ಜ್ಯೋತಿಷಿ ದ್ವಾರಕನಾಥ್‌ ಭವಿಷ್ಯವೇನು?
ಮನೆಯೆಂದು ಮಸೀದಿ ಕಟ್ಟಿದ್ರಾ ಸಾರವಾಡ್ ಬ್ರದರ್ಸ್? ಹುಬ್ಬಳ್ಳಿಯಲ್ಲಿ ಹಿಂದೂಗಳ ಬೃಹತ್ ಪ್ರತಿಭಟನೆ, ಸ್ಫೋಟಕ ತಿರುವು!